ಬೆಂಗಳೂರು: ವರ್ಷದ ಹಿಂದೆ ಚಾಮರಾಜಪೇಟೆ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಲ್ಲಿ ನವಜಾತ ಶಿಶುವನ್ನು ಕಳ್ಳತನ ಮಾಡಿ ಬಾಗಲಕೋಟೆ ಮೂಲದ ದಂಪತಿಗೆ ಮಾರಾಟ ಮಾಡಿದ್ದ ಚಿಕ್ಕೋಡಿ ಮೂಲದ ಮನೋವೈದ್ಯೆಯನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಡಾ|ರಶ್ಮಿ(34) ಬಂಧಿತ ವೈದ್ಯ. ಬಾಗಲಕೋಟೆ ಮೂಲದ ದಂಪತಿಗೆ ನೀಡಿದ್ದ ಒಂದು ವರ್ಷದ ಮಗುವನ್ನು ರಕ್ಷಣೆ ಮಾಡಲಾಗಿದೆ. ಮಗು ಮತ್ತು ಪೋಷಕರ ಡಿಎನ್‌ಎ ಪರೀಕ್ಷೆ ಮಾಡಬೇಕಿದ್ದು, ಅದು ಸಾಬೀತಾದ ನಂತರ ಮಗು ಹಸ್ತಾಂತರ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಕ್ಕೋಡಿ ಮೂಲದ ಡಾ ರಶ್ಮಿ ನಗರದ ಪ್ರಸಿದ್ಧ ಆಸ್ಪತ್ರೆಯಲ್ಲಿ ಮನೋವೈದ್ಯೆಯಾಗಿದ್ದು, ಕೆಂಗೇರಿಯಲ್ಲಿ ಪತಿ ಜತೆ ವಾಸವಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಬಾಗಲಕೋಟೆ ಜಿಲ್ಲೆಯ ದಂಪತಿಗೆ ಬುದ್ಧಿಮಾಂದ್ಯ ಮಗು ಜನಿಸಿತ್ತು. ಈ ಮಗುವಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಬೆಂಗಳೂರಿನಲ್ಲಿ ಡಾ|ರಶ್ಮಿ ಕೆಲಸ ಮಾಡುತ್ತಿದ್ದ ಆಸ್ಪತ್ರೆಗೆ ಕರೆ ತರಲಾಗಿತ್ತು. ಆಗ ಮನೋವೈದ್ಯೆಯಾಗಿದ್ದ ಡಾ| ರಶ್ಮಿ ಈ ಮಗುವಿಗೆ ಚಿಕಿತ್ಸೆ ನೀಡುತ್ತಿದ್ದರು. ದಂಪತಿ ಇನ್ನೊಂದು ಮಗುವಿಗಾಗಿ ಪ್ರಯತ್ನಿಸಿದರೂ ಆಗಿರಲಿಲ್ಲ. ಈ ವೇಳೆ ವೈದ್ಯೆ ಬಳಿ ದಂಪತಿ ತಮ್ಮ ಅಳಲು ತೊಡಿಕೊಂಡಿದ್ದರು. ಅಲ್ಲದೆ, ಮಗುವೊಂದನ್ನು ಕೊಡಿಸಿದರೆ ಹಣ ಕೊಡುವುದಾಗಿ ಆಮಿಷವೊಡ್ಡಿದ್ದರು. ಆಗ ಹಣದ ಆಸೆಗೆ ಬಿದ್ದ ವೈದ್ಯೆ, ಬಾಡಿಗೆ ತಾಯಿ ಮೂಲಕ ನಿಮ್ಮದೇ ಮಗುವನ್ನು ಕೊಡಿಸುವುದಾಗಿ ನಂಬಿಸಿದ್ದರು. ಅದೇ ಕಾರಣಕ್ಕೆ ನಾಮಕೆವಾಸ್ತೆಗೆ ದಂಪತಿಯ ಅಂಡಾಣು ಮತ್ತು ವೀರ್ಯಾಣು ಪಡೆದಿದ್ದರು. ಅದನ್ನು ಬೇರೊಬ್ಬ ಮಹಿಳೆ (ಬಾಡಿಗೆ ತಾಯಿ)ಯ ಗರ್ಭಕ್ಕೆ ಸೇರಿಸಿ ಮಗುವನ್ನು ಬೆಳೆಸುವುದಾಗಿ ಹೇಳಿದ್ದರು. ಈ ಪ್ರಕ್ರಿಯೆಗೆ ಖರ್ಚಾಗುತ್ತದೆ ಎಂದು ಹೇಳಿ ದಂಪತಿಯಿಂದ 15 ಲಕ್ಷ ರೂ. ಪಡೆದಿದ್ದರು. ಇನ್ನೊಬ್ಬರು ಮಹಿಳೆ ಗರ್ಭ ಧರಿಸಲು ಒಪ್ಪಿದ್ದು, ಮಗು ಹುಟ್ಟಿದ ಕೂಡಲೇ ಕೊಡುವುದಾಗಿ ಹೇಳಿ ಕಳುಹಿಸಿದ್ದರು.
ಅಸಲಿಗೆ ಯಾವ ಮಹಿಳೆಯನ್ನೂ ವೈದ್ಯೆ ಸಂಪರ್ಕಿಸಿರಲಿಲ್ಲ. ಹಲವು ಹೆರಿಗೆ ಆಸ್ಪತ್ರೆಯಲ್ಲಿ ಹುಡುಕಾಟ: 9 ತಿಂಗಳ ಬಳಿಕ ದಂಪತಿ ವೈದ್ಯೆಗೆ ಕರೆ ಮಾಡಿ ಮಗುವಿನ ಬಗ್ಗೆ ವಿಚಾರಿಸಿದ್ದಾರೆ. ಆಗ ವೈದ್ಯೆ ಮಗುವಿಗಾಗಿ ನಗರದ ಎಲ್ಲ ಹೆರಿಗೆ ಆಸ್ಪತ್ರೆಯಲ್ಲಿ ಹುಡುಕಾಟ ನಡೆಸಿದ್ದಾರೆ.
2020, ಮೇ 27, 28ರಂದು ವಿವಿಧ ಆಸ್ಪತ್ರೆಗಳಿಗೆ ತೆರಳಿ ಆಗತಾನೆ ಜನಿಸಿದ ಹಸೂಗೂಸು ಹುಡುಕಾಡಿದ್ದಾರೆ. ಇದೇ ವೇಳೆ ಜೆ.ಜೆ.ಆರ್ ನಗರದ ನಿವಾಸಿ ನವೀದ್ ಪಾಷಾ ತಮ್ಮ ಪತ್ನಿ ಹುಸ್ನಾ ಭಾನು ಅವರನ್ನು ಹೆರಿಗೆಗೆಂದು ಚಾಮರಾಜಪೇಟೆಯ ಶಿರ್ಶಿ ವೃತ್ತದಲ್ಲಿರುವ ಬಿಬಿಎಂಪಿ ಹೆರಿಗೆ ಆಸ್ಪತ್ರೆಗೆ ದಾಖಲಿಸಿದ್ದರು. ಮೇ 29ರಂದು ಬೆಳಗ್ಗೆ 7.51ರ ಸುಮಾರಿಗೆ ಹುಸ್ನಾ ಭಾನು ಅವರಿಗೆ ಗಂಡು ಮಗು ಜನಿಸಿತ್ತು. ಈ ಮಾಹಿತಿ ಪಡೆದ ವೈದ್ಯೆ, ಅದೇ ದಿನ ಬೆಳಗ್ಗೆ 11 ಗಂಟೆಗೆ ಈ ಆಸ್ಪತ್ರೆಗೆ ಬಂದು ನರ್ಸ್ ಬಳಿ ಹೋಗಿ ನಾವು ಮಗುವಿನ ಪಾಲಕರ ಸಂಬಂಧಿ ಎಂದು ಹೇಳಿ ಮಗು ಪಡೆದುಕೊಂಡು ಆಟೋದಲ್ಲಿ ಪರಾರಿಯಾಗಿದ್ದರು. ನಂತರ ಬಾಗಲಕೋಟೆಯ ದಂಪತಿಗೆ ನಿಮ್ಮದೇ ಮಗು ಎಂದು ನಂಬಿಸಿ ಕೊಟ್ಟಿದ್ದಾರೆ.
ಹುಸ್ನಾ ಭಾನು ನರ್ಸ್ ಬಳಿ ಬಂದು ಮಗು ಎಲ್ಲಿ ಎಂದು ಕೇಳಿದಾಗ ನಿಮ್ಮ ಸಂಬಂಧಿ ಪಡೆದುಕೊಂಡಿದ್ದಾರೆ ಎಂದು ಹೇಳಿದ್ದರು. ಕೆಲ ಹೊತ್ತಿನ ಬಳಿಕ ಮಗು ಕಳವು ಮಾಡಿರುವುದು ಬೆಳಕಿಗೆ ಬಂದಿತ್ತು.
ಈ ಸಂಬಂಧ ಪತಿ ನವೀದ್ ಚಾಮರಾಜಪೇಟೆ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ಪ್ರಕರಣವನ್ನು ಬಸವನಗುಡಿ ಮಹಿಳಾ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು.