Advertisement

ಸಾಧ್ಯವಾದರೆ ಕೈಲಾದಷ್ಟು ಸಹಾಯ ಮಾಡಿ

11:40 PM Feb 09, 2020 | Sriram |

ಆ ಅಜ್ಜಿಗೆ ಅದೆಷ್ಟು ಹಸಿವಾಗಿತ್ತೋ ಏನೋ, ಹೊಟೇಲ್‌ ಒಂದಕ್ಕೆ ಹೋಗಿ ಒಂದು ಚಪಾತಿ ಮತ್ತು ಒಂದು ಹಿಡಿಯಷ್ಟು ಅನ್ನ ಸೇವಿಸುತ್ತಾಳೆ. ಆಹಾರ ಸೇವಿಸಿದ ಅನಂತರ ತನ್ನ ಸೆರಗಲ್ಲಿ ಗಂಟು ಕಟ್ಟಿಕೊಂಡಿದ್ದ ಮೂವತ್ತು ರೂ. ಗಳನ್ನು ಹೊಟೇಲ್‌ ಮಾಲಕನಿಗೆ ನೀಡುತ್ತಾಳೆ. ಆತ ಐವತ್ತು ರೂ. ಗಳನ್ನು ನೀಡುವಂತೆ ಆಕೆಯ ಜತೆಗೆ ತಗಾದೆ ತೆಗೆಯುತ್ತಾನೆ. ಅಲ್ಲಿದ್ದ ಗ್ರಾಹಕರ ಮುಂದೆಯೇ ಹಿರಿಜೀವ ಎನ್ನುವುದನ್ನೂ ನೋಡದೆ ಬೇಕಾಬಿಟ್ಟಿ ಎಗರಾಡುತ್ತಾನೆ. ಆ ತಾಯಿ ತನ್ನ ಬಳಿ ಇರುವುದೇ ಇಷ್ಟು ಎಂದು ಸೋತು ನಡೆಯುತ್ತಾಳೆ.

Advertisement

ಪಾಪ ಆ ಮನಸ್ಸು ಅದೆಷ್ಟು ನೊಂದು ಕೊಂಡಿರಬಹುದೋ ಏನೋ. ಆದರೆ ಆಕೆಯ ಕಷ್ಟವನ್ನು ಮಾತ್ರ ಕಿವಿಗೆ ಹಾಕಿಕೊಂಡಿಲ್ಲ ಈ ಸಮಾಜ ಎಂಬುದಷ್ಟೆ ಸತ್ಯ. ನೋಡಿದರೆ ಆಕೆ ತೀರಾ ಬಡತನದಲ್ಲಿ ಬೇಯುತ್ತಿದ್ದಳು ಎನ್ನುವುದನ್ನು ಆಕೆ ಉಟ್ಟ ಹರಕು ಮುರುಕು ಸೀರೆಯೇ ಹೇಳುತ್ತಿತ್ತು. ಗುಳಿ ಬಿದ್ದ ಕಣ್ಣುಗಳಲ್ಲಿ ಹಸಿವಿನ ತೀವ್ರತೆಯ ಅರಿವು ನೋಡಿದವರ ಗಮನಕ್ಕೆ ಬರುವಂತಿತ್ತು. ಹಣದ ಮಾಯೆಯಲ್ಲಿ ಸಿಲುಕಿದ್ದ ಹೊಟೇಲ್‌ ಮಾಲಕನಿಗೆ ಆಕೆಯ ಮೇಲೆ ಕರುಣೆ ಬಂದಿಲ್ಲ ಎಂದಾದರೆ ಹಣ ಆತನೊಳಗಿರಬೇಕಾಗಿದ್ದ ಮಾನವೀಯತೆಯ ಮೇಲೆ ಹೇಗೆ ಸವಾರಿ ಮಾಡಿದೆ ಎಂಬುದು ತಿಳಿಯುತ್ತದೆ. ಇದು ಅಸಮತೋಲಿತ ಸಮಾಜದ ಕನ್ನಡಿಯಂತಿರುವ ಒಂದು ಘಟನೆ. ಇಲ್ಲಿ ಎಲ್ಲರಿಗೆ ಎಲ್ಲವೂ ದಕ್ಕುವುದು ಸಾಧ್ಯವಿಲ್ಲ.

ಇನ್ನು ಕೆಲವರಿಗೆ ಆವಶ್ಯಕತೆಗಿಂತಲೂ ಅಧಿಕವಾಗಿ ದಕ್ಕಿರಬಹುದು ಎನ್ನುವ ಮಾತ್ರಕ್ಕೆ ನಾವು ದರ್ಪದ ದಾಸರಾಗುವುದಲ್ಲ. ಬದಲಾಗಿ ನಮ್ಮ ಕೈಯಲ್ಲಿ ಎಷ್ಟಾಗುತ್ತದೆಯೋ ಅಷ್ಟರಮಟ್ಟಿಗೆ ಸಮ ಕಷ್ಟದಲ್ಲಿ ಬದುಕು ಸಾಗಿಸುವ ಅನಿವಾರ್ಯ ಸ್ಥಿತಿಯಲ್ಲಿ ಇರುವವರಿಗೆ ಸಹಾಯ ಮಾಡುವುದನ್ನು ಕಲಿತುಕೊಂಡಾಗ ಮಾತ್ರವೇ ನಾವು ಗಳಿಸಿಕೊಂಡದ್ದಕ್ಕೂ ಅರ್ಥ ಬರುವುದರ ಜತೆಗೆ ಸಾರ್ಥಕ ಜೀವನವನ್ನು ನಡೆಸುವುದಕ್ಕೆ ಸಾಧ್ಯವಾಗುತ್ತದೆ. ಕೇವಲ ಕೂಡಿಡುವುದಕ್ಕಷ್ಟೇ ನಮ್ಮನ್ನು ನಾವು ಮಿಸಲಿಟ್ಟೆವು ಎಂದಾದಲ್ಲಿ ಅದನ್ನು ಅನುಭವಿಸುವ ಭಾಗ್ಯವನ್ನು ಬೇರಿನ್ನಾರಾದರೂ ಪಡೆದುಕೊಳ್ಳುತ್ತಾರೆಯೇ ಹೊರತು ನಮ್ಮ ಸ್ಥಿತಿ ಜೇನು ನೊಣದಂತಾಗುತ್ತದಷ್ಟೇ. ಹೊರತು ಕೂಡಿಟ್ಟ ಜೇನಿನ ಸವಿ ನಮ್ಮದಾಗುವುದಿಲ್ಲ. ಹಾಗಾಗಿ ಕೂಡಿಟ್ಟ ಸಂಪತ್ತಿನಲ್ಲಿಯೇ ಕೊಂಚವನ್ನ ಇಲ್ಲದವರಿಗೆ ನೀಡುವತ್ತ ಗಮನವಹಿಸೋಣ. ಮಾನವೀಯ ಮೌಲ್ಯಗಳನ್ನೊಳಗೊಂಡ ಮಾದರಿ ಬದುಕನ್ನು ಕಟ್ಟಿಕೊಳ್ಳುವ ಮೂಲಕ ಇತರರಿಗೂ ಬದುಕಿದ್ದರೆ ಹೀಗೆ ಬದುಕಿ ಎನ್ನುವ ಹಾಗೇ ಜೀವನ ನಡೆಸುವುದನ್ನು ಕಲಿತುಕೊಂಡರೆ ಜಗತ್ತು ಇನ್ನಷ್ಟು ಸುಂದರವಾಗುತ್ತದೆ.

- ಸುಶ್ಮಿತಾ ಜೈನ್‌

Advertisement

Udayavani is now on Telegram. Click here to join our channel and stay updated with the latest news.

Next