ಗೆಳೆಯಾ, ನಿಜ ಹೇಳುತ್ತೇನೆ ಕೇಳು, ನೀನೀಗ ನನ್ನ ಭಾವನೆಗಳ ಒಡೆಯ. ನನ್ನ ಕರೆಗೆ ಓಗೊಟ್ಟು ನೀನು ಕಳುಹಿಸಿದ ಇಮೇಲ್‌ನ ಅಮರ ಸಂದೇಶವೇ ಈಗಲೂ ಮನ ಮಂದಿರದ ಗರ್ಭಗುಡಿಯ ನನ್ನ ಮನೆದೇವರಾಗಿ ಉಳಿದಿದೆ…
ಒಂದು ಫೋನ್ ಕರೆ, ಅಲ್ಲಲ್ಲ; ಒಂದೇ ಒಂದು ಇ-ಮೇಲ್ ಕರೆ ನಮ್ಮಿಬ್ಬರ ನಡುವೆ ಎಷ್ಟೆಲ್ಲ ಬಾಂಧವ್ಯವನ್ನು ಬೆಳೆಸಿಬಿಟ್ಟಿದೆ ನೋಡು… ಒಂದೂವರೆ ವರ್ಷದ ಹಿಂದೆ ನನಗೆ ಅನಿರೀಕ್ಷಿತವಾಗಿ ನೀನು ಮೇಲ್ ಮಾಡಿದೆ, ಮಾತಾಡಿದೆ. ಏಕಾಏಕಿ “ಐ ಲವ್ ಯೂ’ ಅಂದು ಬಿಟ್ಟೆ! ನಾನು ಆ ಶಾಕ್ ನಿಂದ ಚೇತರಿಸಿಕೊಳ್ಳುವ ಮೊದಲೇ “ಐ ಕಿಸ್ ಯೂ’ ಅಂದು ಬಿಟ್ಟೆ, ಹಿಂದೆಯೇ “ಐ ಮಿಸ್ ಯೂ’ ಎಂದೂ ಸೇರಿಸಿದೆ.
ಆನಂತರದ ದಿನಗಳಲ್ಲಿ ವಾರಕ್ಕೆ ನಾಲ್ಕರ ಲೆಕ್ಕದಲ್ಲಿ ನೀನು ಮೇಲ್ ಕಳಿಸಿದಾಗ, ಅಂದೊಮ್ಮೆ ನಮ್ಮ ಮನೆಗೆ ಬಾ ಮುದ್ದು ಎಂದು ಸಂಭ್ರಮದಿಂದ ಆಹ್ವಾನಿಸಿದಾಗ, ನೀನು ಗಾಬರಿಗೊಂಡು ಮಾತನಾಡಿದ ಆ ತೊದಲು ನುಡಿಗಳು ಈಗಲೂ ನನಗೆ ಚೆನ್ನಾಗಿ ನೆನಪಿವೆ. ಗೆಳೆಯಾ, ನಿಜ ಹೇಳುತ್ತೇನೆ ಕೇಳು, ನೀನೀಗ ನನ್ನ ಭಾವನೆಗಳ ಒಡೆಯ. ನನ್ನ ಕರೆಗೆ ಓಗೊಟ್ಟು ನೀನು ಕಳುಹಿಸಿದ ಇಮೇಲ್‌ನ ಅಮರ ಸಂದೇಶವೇ ಈಗಲೂ ನನ್ನ ಮನ ಮಂದಿರದ ಗರ್ಭಗುಡಿಯ ನನ್ನ ಮನೆ ದೇವರಾಗಿ ಉಳಿದಿದೆ.
ಅದಕ್ಕೆ ನಿತ್ಯವೂ ನನ್ನ ಮನದಂತರಾಳದ ಸಿಹಿ ಸಿಂಚನ. ಆ ಸ್ಪರ್ಶದಲ್ಲಿ ಮದನೋಲ್ಲಾಸ, ಪ್ರೀತಿಯ ಪ್ರೇಮಾಭಿಷೇಕ, ಭಾವನೆಗಳ ನೈವೇದ್ಯ. ನಾನು ನಿನ್ನನ್ನೇ ಯಾಕೆ ಇಷ್ಟಪಟ್ಟೆ ಗೊತ್ತಾ? ಈ ಪ್ರಪಂಚದಲ್ಲಿ ನೀನು ನನ್ನನ್ನು ಯಾವತ್ತೂ ಒಂಟಿಯಾಗಿ ಬಿಟ್ಟು ಹೋಗಲ್ಲ ಅನ್ನುವ ದೊಡ್ಡ ನಂಬಿಕೆಯಿಂದ…
ಇಂತಿ ನಿನ್ನವಳು
* ಯು.ಎಚ್.ಎಮ್. ಗಾಯತ್ರಿ