Advertisement

Test: ಟೀಂ ಇಂಡಿಯಾ ಕೊನೆಯ ಬಾರಿಗೆ ಟೆಸ್ಟ್‌ ಸರಣಿ ವೈಟ್‌ವಾಶ್‌ ಆಗಿದ್ದು ಯಾವಾಗ ಗೊತ್ತಾ?

01:34 PM Oct 27, 2024 | Team Udayavani |

ಮುಂಬೈ: ಪ್ರವಾಸಿ ನ್ಯೂಜಿಲ್ಯಾಂಡ್‌ ವಿರುದ್ದದ ಟೆಸ್ಟ್‌ ಸರಣಿಯ (Test series) ಮೊದಲ ಎರಡು ಪಂದ್ಯಗಳನ್ನು ಸೋತಿರುವ ಭಾರತ ತಂಡವು ಇದೀಗ ತವರಿನಲ್ಲಿ ವೈಟ್‌ವಾಶ್‌ ಅನುಭವಿಸುವ ಆತಂಕದಲ್ಲಿದೆ. ಮುಂಬೈನಲ್ಲಿ ನಡೆಯಲಿರುವ ಕೊನೆಯ ಟೆಸ್ಟ್‌ ಪಂದ್ಯದಲ್ಲಿ ಗೆದ್ದು ವೈಟ್‌ವಾಶ್‌ ಅವಮಾನದಿಂದ ತಪ್ಪಿಸಿಕೊಳ್ಳುವ ಯೋಜನೆಯಲ್ಲಿದೆ ರೋಹಿತ್‌ ಬಳಗ.

Advertisement

ಬೆಂಗಳೂರು ಮತ್ತು ಪುಣೆಯಲ್ಲಿ ನಡೆದ ಮೊದಲೆರಡು ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಕಾರಣದಿಂದ ಹೀನಾಯ ಸೋಲು ಅನುಭವಿಸಿತ್ತು. ಇದೀಗ ನವೆಂಬರ್‌ 1ರಿಂದ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ (Wankhede Stadium, Mumbai) ಮೂರನೇ ಪಂದ್ಯ ನಡೆಯಲಿದ್ದು, ಟಾಮ್‌ ಲ್ಯಾಥಂ ಪಡೆಯನ್ನು ಕಟ್ಟಿಹಾಕುವ ಯೋಜನೆ ರೂಪಿಸಿದೆ.

ಭಾರತ ತಂಡವು ತವರು ನೆಲದಲ್ಲಿ ಈ ಹಿಂದೆಯೂ ಟೆಸ್ಟ್ ಸರಣಿಯಲ್ಲಿ ಕ್ಲೀನ್-ಸ್ವೀಪ್ ಆಗಿತ್ತು. ಕೊನೆಯ ಬಾರಿಗೆ ಈ ಅವಮಾನ ಯಾವಾಗ ಅನುಭವಿಸಿತ್ತು? ಇಲ್ಲಿದೆ ಉತ್ತರ.

ದ.ಆಫ್ರಿಕಾ ವಿರುದ್ದ ಸೋಲು

2000ನೇ ಇಸವಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಭಾರತವು ಕೊನೆಯ ಬಾರಿಗೆ ಕ್ಲೀನ್‌ ಸ್ವೀಪ್‌ ಆಗಿತ್ತು. 2000ರ ಫೆಬ್ರವರಿ ಮಾರ್ಚ್‌ ನಲ್ಲಿ ನಡೆದಿದ್ದ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 2-0 ಅಂತರದಿಂದ ಗೆಲುವು ಸಾಧಿಸಿತ್ತು. ಮುಂಬೈನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತವು ನಾಲ್ಕು ವಿಕೆಟ್‌ ಗಳಿಂದ ಸೋಲನುಭವಿಸಿತ್ತು. ಆದರೂ ಸಚಿನ್‌ ತೆಂಡೂಲ್ಕರ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಅವರು ಮೊದಲ ಇನ್ನಿಂಗ್ಸ್‌ ನಲ್ಲಿ 96 ರನ್‌ ಗಳಿಸಿದ್ದರು ಮತ್ತು ಮೂರು ವಿಕೆಟ್‌ ಪಡೆದಿದ್ದರು.

Advertisement

ಎರಡನೇ ಪಂದ್ಯವು ಬೆಂಗಳೂರಿನಲ್ಲಿ ನಡೆದಿತ್ತು. ಇದನ್ನು ಇನ್ನಿಂಗ್ಸ್‌ ಮತ್ತು 71 ರನ್‌ ಅಂತರದಿಂದ ಸೋಲನುಭವಿಸಿತ್ತು. ಮೊಹಮ್ಮದ್‌ ಅಜರುದ್ದೀನ್‌ ಶತಕ ಬಾರಿಸಿದ್ದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ನಿಕಿ ಬೊಯೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next