ತೆಲುಗಿನ ಸಕ್ಸಸ್‌ಫುಲ್ ನಿರ್ದೇಶಕ ಪುರಿ ಜಗನ್ನಾಥ್ ಕನ್ನಡಕ್ಕೆ ಮತ್ತೆ ಬಂದಿರೋದು ಗೊತ್ತು. “ರೋಗ್’ ಮೂಲಕ ನಿರ್ಮಾಪಕ ಸಿ.ಆರ್.ಮನೋಹರ್ ಸಹೋದರ ನಿಶಾನ್ ಅವರನ್ನು ಪರಿಚಯಿಸುತ್ತಿರೋದು ಗೊತ್ತು. ಆದರೆ, ಅವರ ಸಕ್ಸಸ್‌ಫುಲ್ ಸಿನಿಮಾಗಳ ಹಿಂದೆ ಬ್ಯಾಂಕಾಕ್ ಜರ್ನಿ ಇದೆ ಅನ್ನೋದು ಬಹುಶಃ ಯಾರಿಗೂ ಗೊತ್ತಿರಲಿಕ್ಕಿಲ್ಲ. ಅಂಥದ್ದೊಂದು ಇಂಟ್ರೆಸ್ಟಿಂಗ್ ಸ್ಟೋರಿಯನ್ನು ಸ್ವತಃ ಪುರಿಜಗನ್ನಾಥ್ ಅವರೇ ಹೇಳಿಕೊಂಡಿದ್ದಾರೆ.
ಪುರಿ ಜಗನ್ನಾಥ್ ಪ್ರತಿ ಸಿನಿಮಾದ ಕಥೆ ಬರೆಯುವ ಮುನ್ನ ಬ್ಯಾಂಕಾಕ್‌ಗೆ ಹಾರುತ್ತಾರೆ. ಅಲ್ಲಿನ ಪಟಾಯದಲ್ಲಿ ಒಂದು ವಾರ ಕಾಲ ನೆಲೆಸಿ, ಅಲ್ಲೇ ಕಥೆ ರೆಡಿ ಮಾಡುತ್ತಾರೆ. ಆ ಕಥೆ ಅವರಿಗೆ ಹಿಡಿಸಿದ ಕೂಡಲೇ ಅಲ್ಲಿಂದ ಇಂಡಿಯಾಗೆ ವಾಪಸ್ ಆಗುತ್ತಾರೆ. ಇಲ್ಲಿ ಆ ಕಥೆಗೆ ಏನೆಲ್ಲಾ ಬೇಕು, ಯಾರ್ಯಾರು ನಟ,ನಟಿಯರು ಇರಬೇಕು ಎಂಬಿತ್ಯಾದಿ ಬಗ್ಗೆ ಚರ್ಚಿಸಿ, ಪುನಃ ಬ್ಯಾಂಕಾಕ್‌ಗೆ ಹಾರುತ್ತಾರೆ. ಮತ್ತೂಂದು ವಾರ ಪಟಾಯದಲ್ಲೇ ಇದ್ದು ಸ್ಕ್ರಿಪ್ಟ್ ರೆಡಿಮಾಡಿಕೊಂಡು ಹಿಂದಿರುಗುತ್ತಾರೆ. ಇದು ಅವರ ಬ್ಯಾಂಕಾಕ್ ಜರ್ನಿ ಹಿಂದಿರುವ ಸ್ಟೋರಿ.
ಅವರು ಪ್ರತಿ ಸಿನಿಮಾದ ಕಥೆ ಬರೆಯೋಕೆ ಹೋಗೋದೇ ಬ್ಯಾಂಕಾಕ್‌ಗೆ. ಈ ಮಾತನ್ನು ಸ್ವತಃ ಸ್ಪಷ್ಟಪಡಿಸುವ ಪುರಿಜಗನ್ನಾಥ್, ಅಲ್ಲಿನ ಬೀಚ್ ಸೈಡ್‌ನಲ್ಲಿ ಕುಳಿತು ಪೆನ್ನು ಹಿಡಿದು ಕಥೆ ಬರೆಯುತ್ತೇನೆ. ಅಲ್ಲೆಲ್ಲಾ ಬಿಕಿನಿ ತೊಟ್ಟವರು ಓಡಾಡುತ್ತಿರುತ್ತಾರೆ. ಅಂತಹವರ ಮಧ್ಯೆ ಕಥೆ ಬರೆಯೋದು ಕಷ್ಟವೇ. ಆದರೂ ನಾನು ಏಕಾಗ್ರತೆಯಿಂದ ಕೆಲಸ ಮಾಡ್ತೀನಿ. ಬ್ಯೂಟಿಫುಲ್ ಗರ್ಲ್ಸ್ ಓಡಾಡುವುದನ್ನು ನೋಡುತ್ತಲೇ ಸ್ಕ್ರಿಪ್ಟ್ ರೆಡಿ ಮಾಡುತ್ತೇನೆ.
ಅಲ್ಲಿ ಕಥೆ ಕೆತ್ತುವಾಗ, ಟೀ, ಹಿಡಿದು ಬರುವ ಹುಡುಗರ ಜತೆ ಹರಟುತ್ತಲೇ ಕಥೆ ಪೂರ್ಣಗೊಳಿಸುತ್ತೇನೆ. ಪುನಃ ಇಂಡಿಯಾಗೆ ಹಿಂದಿರುಗಿ, ಆ ಕಥೆಗೆ ಬೇಕಾದ ತಯಾರಿ ಮಾಡಿಕೊಂಡು ಮತ್ತೆ ಬ್ಯಾಂಕಾಕ್‌ನತ್ತ ಮುಖ ಮಾಡುತ್ತೇನೆ. ಹೀಗೆ ಹದಿನೈದು ದಿನಗಳ ಕಾಲ ಬ್ಯಾಂಕಾಕ್‌ಗೆ ಹೋಗಿ ಕಥೆ ರೆಡಿ ಮಾಡುತ್ತೇನೆ. ಆ ಬಳಿಕ ಬಂದು ಮೂರು ತಿಂಗಳಲ್ಲೇ ಸಿನಿಮಾ ಮಾಡಿ ಮುಗಿಸುತ್ತೇನೆ ಎಂಬುದು ಪುರಿ ಜಗನ್ನಾಥ್ ಮಾತು.
ಬೇರೆಯವರೆಲ್ಲ ವರ್ಷಗಟ್ಟಲೆ ಸಮಯ ತೆಗೆದುಕೊಳ್ಳುತ್ತಾರೆ. ರಾಜಮೌಳಿ ನನ್ನ ಒಳ್ಳೆಯ ಗೆಳೆಯರು. ಅವರದು ದೊಡ್ಡ ಕ್ಯಾನ್ವಾಸ್. ವರ್ಷಗಟ್ಟಲೆ ಸ್ಕ್ರಿಪ್ಟ್ ಮಾಡಿ, ವರ್ಷಗಳ ತನಕ ಸಿನಿಮಾ ಮಾಡುತ್ತಾರೆ. ಆದರೆ, ಅವರಂತೆ ನನಗೆ ಅದು ಸಾಧ್ಯವಿಲ್ಲ. ನಾನು ಸರಳವಾಗಿಯೇ ಎಲ್ಲವನ್ನೂ ಮುಗಿಸುತ್ತೇನೆ. ಹದಿನೈದು ದಿನ ಕಥೆಗೆ, ಮೂರು ತಿಂಗಳು ಸಿನಿಮಾಗಷ್ಟೇ ಸಮಯ ಮೀಸಲಿಟ್ಟು ಕೆಲಸ ಮಾಡ್ತೀನಿ ಎಂದು ವಿವರ ಕೊಡುತ್ತಾರೆ ಪುರಿಜಗನ್ನಾಥ್.
ಶಿವರಾಜ್‌ಕುಮಾರ್ ಜತೆ “ಯುವರಾಜ’ ಮೊದಲ ಕನ್ನಡ ಸಿನಿಮಾ ಮಾಡಿದ್ದೆ. ಆ ಬಳಿಕ ಪುನೀತ್‌ರಾಜ್‌ಕುಮಾರ್‌ಗೆ “ಅಪ್ಪು’ ಚಿತ್ರ ಮಾಡಿದ್ದೆ. ಈಗ ನಿಶಾನ್‌ಗೆ “ರೋಗ್’ ಮಾಡಿದ್ದೇನೆ. ಮುಂದಿನ ವರ್ಷ ಶಿವರಾಜ್‌ಕುಮಾರ್ ಜತೆಗೆ ಇನ್ನೊಂದು ಸಿನಿಮಾ ಮಾಡುವ ಯೋಚನೆ ಇದೆ. ಅದರ ಜತೆಯಲ್ಲೇ ನನ್ನ ಪುತ್ರನನ್ನು ಲಾಂಚ್ ಮಾಡುತ್ತೇನೆ. ಈಗಾಗಲೇ ಅದಕ್ಕೆ ತಯಾರಿಗಳು ನಡೆಯುತ್ತಿವೆ. ಈಗ ಬಾಲಕೃಷ್ಣ ಅವರ 101 ನೇ ಸಿನಿಮಾ ನಿರ್ದೇಶನ ಮಾಡುತ್ತಿದ್ದೇನೆ ಎನ್ನುತ್ತಾರೆ ಪುರಿಜಗನ್ನಾಥ್.