Advertisement

ಈ ಪರ್ಸ್‌ ನಿಮ್ದು ತಾನೆ?

07:30 AM Apr 03, 2018 | Team Udayavani |

ಇದು ಮೂರ್ನಾಲ್ಕು ವರ್ಷಗಳ ಹಿಂದೆ ನಡೆದ ಘಟನೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಮುಗಿಸಿ ಬಾಗಲಕೋಟೆಯಿಂದ ಬಾದಾಮಿಗೆ ಬಂದೆ. ಮನೆಗೆ ಬಂದಾಗ ಹೆಂಡತಿ, “ರೀ, ಮಾರ್ಕೆಟ್‌ಗೆ ಹೋಗ್ಬೇಕು ದುಡ್ಡು ಕೊಡಿ’ ಎಂದಾಗ ಜೇಬಿಗೆ ಕೈ ಹಾಕಿದೆ. ಆಗ ನನ್ನೆದೆ ಧಸಕ್‌ ಎಂದಿತು! ಯಾಕಂದ್ರೆ, ಪ್ಯಾಂಟಿನ ಜೇಬಿನಲ್ಲಿ ಪರ್ಸ್‌ ಇರಲಿಲ್ಲ. ಗಾಬರಿಯಾದೆ. ಮುಖದಲ್ಲಿ ಆತಂಕದ ಛಾಯೆ ಮೂಡಿತು. ಪರ್ಸ್‌ನಲ್ಲಿ ಐದಾರು ಸಾವಿರ ಹಣದ ಜೊತೆಗೆ ಮೌಲ್ಯ ಮಾಪನದ ಕೆಲಸಕ್ಕೆ ಸಂಭಾವನೆಯಾಗಿ ನೀಡಿದ್ದ ಚೆಕ್‌ ಕೂಡಾ ಇತ್ತು. ಅದಕ್ಕಿಂತ ಹೆಚ್ಚಾಗಿ ಅದರಲ್ಲಿ ಆಧಾರ್‌ ಕಾರ್ಡ್‌, ವೋಟರ್‌ ಐಡಿ, ಪ್ಯಾನ್‌ ಕಾರ್ಡ್‌, ಎಟಿಎಂ ಕಾರ್ಡ್‌ ಕೂಡಾ ಇತ್ತು. ದಿಕ್ಕು ತೋಚದೆ ಕುಸಿದೆ. ಹೆಂಡತಿಗೆ ವಿಷಯ ಗೊತ್ತಾದಾಗ ಅವಳು ಆತಂಕದಿಂದ, “ಲಗೂ ಹೋಗಿ ಪೊಲೀಸ್‌ ಕಂಪ್ಲೇಂಟ್‌ ಕೊಟ್ಟು ಬರ್ರಿ’ ಎಂದಳು. 

Advertisement

ಅಷ್ಟರಲ್ಲಿ ಬಾಗಿಲು ಬಡಿದ ಶಬ್ದವಾಯಿತು. ಕೊಂಚ ಬೇಸರದಿಂದ ಬಾಗಿಲು ತೆಗೆದೆ. ಬಾಗಿಲನಾಚೆ  ಸುಮಾರು ಮೂವತ್ತರ ಆಸುಪಾಸಿನ ಯುವಕನೊಬ್ಬ ನಿಂತಿದ್ದ. “ಯಾರು ಬೇಕಾಗಿತ್ತು?’ ಎಂದು ಅಸಹನೆಯಿಂದ ಕೇಳಿದೆ. ಆತ  “ನೀವೇ ಬೇಕಾಗಿತ್ತು’ ಎಂದಾಗ ನಾನು ಮುಖ ಗಂಟಿಕ್ಕಿ, “ನಾನೀಗ ಸ್ವಲ್ಪ ಬ್ಯುಸಿ ಇದ್ದೇನೆ’ ಎಂದೆ. “ಸರ್‌ ಈ ಪರ್ಸ್‌ ನಿಮುª ತಾನೇ?’ ಎಂದು ಆತ ಪರ್ಸ್‌ ತೋರಿಸಿದಾಗ ನನ್ನ ಕಣ್ಣುಗಳು ಮಿನುಗಿದವು. “ಹೌದು! ಇದು ನಿಮಗೆಲ್ಲಿ ಸಿಕ್ಕಿತು?’ ಎಂದು ಸೋಜಿಗದಿಂದ ಕೇಳಿದಾಗ ಆತ, “ಸಾರ್‌, ಬಸ್ಸಿನಲ್ಲಿ ಸೀಟಿನ ಕೆಳಡೆ ಬಿದ್ದಿತ್ತು. ತೆಗೆದುಕೊಳ್ಳಿ’ ಎಂದು ಪರ್ಸ್‌ ಅನ್ನು ಕೈಗಿಟ್ಟ. ನಾನು ಸಂತಸದಿಂದ ಆತನ ಕೈಕುಲುಕಿ ಒಳಗೆ ಕರೆದೆ.

ಆತನಿಗೆ ಟೀ ಕೊಡುತ್ತ, “ಹೌದು! ಈ ಪರ್ಸ್‌ ನನ್ನದೂ ಅಂತ ನಿಮ್ಗೆ ಹೇಗೆ ಗೊತ್ತಾಯ್ತು?’ ಎಂದು ತುಸು ಅನುಮಾನದಿಂದ ಕೇಳಿದೆ. ಆತ ನಗುತ್ತಾ “ನಾನು ನಿಮ್ಮ ಅಭಿಮಾನಿ. ನಿಮ್ಮ ಕತೆ ಕಾದಂಬರಿಗಳನ್ನು ಪತ್ರಿಕೆಗಳಲ್ಲಿ ಆಗಾಗ ಓದುತ್ತೇನೆ. ಪರ್ಸ್‌ನಲ್ಲಿ ನಿಮ್ಮ ಫೋಟೋ ಇತ್ತು. ಹಾಗಾಗಿ ಗೊತ್ತಾಯಿತು’ ಎಂದು ಅಭಿಮಾನದಿಂದ ಹೇಳಿದಾಗ ಅರೆಕ್ಷಣ ಮೂಕವಿಸ್ಮಿತನಾದೆ.

ಚಂದ್ರಕಾಂತ ಮ. ತಾಳಿಕೋಟಿ

Advertisement

Udayavani is now on Telegram. Click here to join our channel and stay updated with the latest news.

Next