“ಕೇಂದ್ರ ಸರ್ಕಾರವು ನಮ್ಮ ರಾಜ್ಯವನ್ನು ವಿಭಜಿಸಿತು. ಈಗ ಹೃದಯಗಳನ್ನೂ ವಿಭಜಿಸಲು ಹೊರಟಿದೆಯೇ? ಹಿಂದೂಗಳು ಮತ್ತು ಮುಸ್ಲಿಮರನ್ನು ವಿಭಜಿಸಲು ಮುಂದಾಗಿದೆಯೇ? ನನ್ನ ಭಾರತವು ಎಲ್ಲರಿಗೆ ಸೇರಿದ್ದು, ಜಾತ್ಯತೀತತೆ ಮತ್ತು ಏಕತೆಯನ್ನು ನಂಬುವ ಎಲ್ಲರದ್ದು ಎಂದು ನಾನು ಭಾವಿಸಿದ್ದೆ.’ 370ನೇ ವಿಧಿ ರದ್ದು ಸಂಬಂಧ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಅವರ ಮಾತುಗಳಿವು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಣ್ಣೀರಾದ ಅವರು, “370ನೇ ವಿಧಿ ರದ್ದು ವಿಚಾರದಲ್ಲಿ ಸರ್ವಾಧಿಕಾರದ ಅಧಿಕಾರವನ್ನು ಬಳಸಲಾಗಿದೆಯೇ ವಿನಾ ಪ್ರಜಾಸತ್ತಾತ್ಮಕ ಅಧಿಕಾರವನ್ನಲ್ಲ. 370ನೇ ವಿಧಿ ಎನ್ನುವುದು ರಾಷ್ಟ್ರಪತಿಯವರ ಆದೇಶವಲ್ಲ, ಅದು ಸಾಂವಿಧಾನಿಕ ಖಾತ್ರಿಯಾಗಿದೆ’ ಎಂದಿದ್ದಾರೆ. ಅಲ್ಲದೆ, ಮೋದಿ ಸರ್ಕಾರದ ನಿರ್ಧಾರದ ವಿರುದ್ಧ ನಾವು ಕೋರ್ಟ್ ಮೆಟ್ಟಿಲೇರುತ್ತೇವೆ. ನಮ್ಮ ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ. ಜತೆಗೆ, ತಮ್ಮನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದೂ ಹೇಳಿದ್ದಾರೆ.
ಕೊಲ್ಲುವುದಿದ್ದರೆ ಕೊಲ್ಲಲಿ: ಗೇಟು ತೆರೆದಾಕ್ಷಣ ನಾವು ಹೋರಾಟ ಆರಂಭಿಸುತ್ತೇವೆ. ನಾವೇನೂ ಬಂದೂಕುಧಾರಿಗಳಲ್ಲ, ಗ್ರೆನೇಡ್ ಎಸೆತಗಾರರಲ್ಲ, ಕಲ್ಲು ತೂರಾಟಗಾರರೂ ಅಲ್ಲ. ನಾವು ಎಲ್ಲವೂ ಶಾಂತಿಯುತವಾಗಿ ಪರಿಹಾರವಾಗಲಿ ಎಂದು ಬಯಸುವವರು. ಅವರು ನನ್ನನ್ನು ಕೊಲ್ಲಲು ಬಯಸಿದ್ದರೆ, ಕೊಲ್ಲಲಿ. ನಾನು ಸಿದ್ಧನಾಗಿದ್ದೇನೆ, ನನ್ನ ಎದೆಯೂ ಸಿದ್ಧವಾಗಿದೆ. ಗುಂಡು ಹಾರಿಸುವುದಿದ್ದರೆ ನನ್ನ ಎದೆಗೆ ಹಾರಿಸಲಿ, ಬೆನ್ನ ಹಿಂದಿನಿಂದ ಅಲ್ಲ ಎಂದು 81 ವರ್ಷದ ಅಬ್ದುಲ್ಲಾ ಆಕ್ರೋಶಭರಿತರಾಗಿ ನುಡಿದಿದ್ದಾರೆ.
ನಾನೇನೂ ಡಾಕ್ಟರ್ ಅಲ್ಲ ಎಂದ ಶಾ: ಲೋಕಸಭೆಯಲ್ಲಿ ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಅವರು, “ಎನ್‌ಸಿ ನಾಯಕ ಫಾರೂಕ್ ಅಬ್ದುಲ್ಲಾ ಅವರು ಅಸ್ವಸ್ಥರಾಗಿದ್ದಾರೆಯೇ? ಅವರೇಕೆ ಸದನದಲ್ಲಿ ಹಾಜರಿಲ್ಲ’ ಎಂದು ಅಮಿತ್ ಶಾರನ್ನು ಉದ್ದೇಶಿಸಿ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಶಾ, “ಅವರನ್ನು ವಶಕ್ಕೂ ಪಡೆದಿಲ್ಲ, ಗೃಹಬಂಧನದಲ್ಲೂ ಇರಿಸಿಲ್ಲ. ಅವರು ಅವರಿಚ್ಛೆಯಂತೆ ಮನೆಯಲ್ಲಿದ್ದಾರೆ’ ಎಂದಿದ್ದರಲ್ಲದೆ, “ಅವರು ಅಸ್ವಸ್ಥರಾಗಿದ್ದಾರೆಯೇ ಎಂದು ಹೇಳಲು ನಾನೇನೂ ಡಾಕ್ಟರ್ ಅಲ್ಲ. ಚಿಕಿತ್ಸೆ ಕೊಡಲೂ ನನ್ನಿಂದ ಸಾಧ್ಯವಿಲ್ಲ’ ಎಂದು ವ್ಯಂಗ್ಯವಾಡಿದ್ದರು.
ಬಾಗಿಲು ಒಡೆದು ಹೊರಬಂದೆ: ಶ್ರೀನಗರದಲ್ಲಿ ಟಿವಿ ಚಾನೆಲ್‌ಗಳೊಂದಿಗೆ ಮಾತನಾಡಿದ ಅಬ್ದುಲ್ಲಾ, “ಗೃಹ ಸಚಿವ ಅಮಿತ್ ಶಾ ಅವರು ಸಂಸತ್‌ನಲ್ಲೇ ಸುಳ್ಳು ಹೇಳುತ್ತಿದ್ದಾರೆ. ನನ್ನನ್ನು ವಶಕ್ಕೂ ಪಡೆದಿಲ್ಲ, ಗೃಹಬಂಧನದಲ್ಲೂ ಇರಿಸಿಲ್ಲ ಎಂದು ಅವರು ಹೇಳಿದ್ದಾರೆ. ಇದೆಲ್ಲಾ ಸುಳ್ಳು. ನನ್ನನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ನನ್ನ ಮನೆಯ ಹೊರಗೆ ಡಿಎಸ್‌ಪಿಯನ್ನು ನಿಯೋಜಿಸಲಾ ಗಿದೆ. ಮನೆಯಿಂದ ಯಾರೂ ಹೊರ ಹೋಗು ವಂತಿಲ್ಲ, ಮನೆ ಯೊಳಕ್ಕೂ ಯಾರೂ ಬರುವಂತಿಲ್ಲ ಎಂದು ಸೂಚಿಸ ಲಾಗಿದೆ. ಶಾ ಹೇಳಿದ್ದನ್ನೆಲ್ಲ ಕೇಳಿಸಿಕೊಂಡೆ. ಮಾಧ್ಯಮಗ ಳೊಂದಿಗೆ ಮಾತನಾಡ ಬೇಕೆಂದೇ ನಾನು ಬಾಗಿಲು ಒಡೆದು ಹೊರಬಂದೆ’ ಎಂದಿದ್ದಾರೆ.