Advertisement

ಮುಹೂರ್ತ ವ್ಯಾಧಿ ಅಂಟಿಸಿಕೊಂಡವರು!

12:30 AM Nov 23, 2018 | |

ಮೂರೂ ಜನರದು ಒಕ್ಕೊರಲಿನ ನಿರ್ಣಯ: “ಈಗ ಸದ್ಯ ಮೂಲಾ ನಕ್ಷತ್ರ. ಅದೂ ಎರಡನೆಯ ಚರಣದಲ್ಲಿದೆ. ಅದು ಸರಿದು ಹೋಗುವವರೆಗೆ ಏನಾದರಾಗಲಿ ಆಪರೇಷನ್‌ ಬೇಡ!’ ನನ್ನದು ವಿಚಿತ್ರ ಸ್ಥಿತಿ. ಮಗುವಿನ ಸಂಕಟ ನನಗೆ ತಿಳಿಯುತ್ತಿದೆ. ಮಗುವಿಗೆ ಹೊಟ್ಟೆಯಲ್ಲಿ ಆಗುತ್ತಿರಬಹುದಾದ ಕಸಿವಿಸಿ, ಪ್ರಾಣಕ್ಕಾಗಿ ಅದು ಚಡಪಡಿಸುತ್ತಿರುವ ಸ್ಥಿತಿ ಎಲ್ಲವೂ ವೇದ್ಯವಾಗುತ್ತಿದೆ. 

Advertisement

“ಮೂಲಾ ಮುಗ್ಯೂತನಕ ಮುಟ್ಟಬ್ಯಾಡ್ರೀ!’
ಇದು ಸುಮಾರು ಆರು ವರ್ಷಗಳ ಹಿಂದೆ ಒಬ್ಬ “ಸುಶಿಕ್ಷಿತ’ ವ್ಯಕ್ತಿ ತನ್ನ ಹೆಂಡತಿಯ ಸಿಜೇರಿಯನ್‌ಗಿಂತ ಮೊದಲು ನನಗೆ “ಗದರುವಂತೆ’ ಹೇಳಿದ ಮಾತುಗಳು. ಅವಳು ಬಹಳ ವರ್ಷಗಳ ನಂತರ ಗರ್ಭಿಣಿ. ಮೊದಲನೆಯದು ಸಿಜೇರಿಯನ್‌ ಹೆರಿಗೆ. ಏಳು ವರ್ಷಗಳ ಹಿಂದೆ ಆಗಿತ್ತು. ಈ ಬಾರಿ ಬೇಗ ಗರ್ಭ ನಿಲ್ಲದ್ದರಿಂದ ನೂರೆಂಟು ಕಡೆ ಔಷಧೋಪಚಾರ, ಹಲವಾರು ಗುಡಿ ಗುಂಡಾರಗಳ ಪ್ರದಕ್ಷಿಣೆ, ಪೂಜೆ, ವ್ರತ ಮುಂತಾದವುಗಳನ್ನು ಪೂರೈಸಿದ ಮೇಲೆ ನಿಂತಿದ್ದು. ಈಗ ದಿನಗಳು ಮುಗಿದು ಅದಾಗಲೇ ಒಂದು ವಾರವಾಗಿತ್ತು. ಸಹಜ ಹೆರಿಗೆ ಸಾಧ್ಯವಿಲ್ಲದ ಸ್ಥಿತಿ. ಪರೀಕ್ಷೆ ಮಾಡಿ ನೋಡಿದರೆ ಮಗುವಿನ ಎದೆಬಡಿತದಲ್ಲಿ ಏರಿಳಿತ ಇತ್ತು. ಮಗುವಿಗೆ ಪ್ರಾಣಾಪಾಯವಾಗುವ ಸಂಭವವಿತ್ತು. “ಬೇಗ ಸಿಜೇರಿಯನ್‌ ಮಾಡಿದರೆ ಮಗು ಸುಸ್ಥಿತಿಯಲ್ಲಿರುತ್ತದೆ. ಇಲ್ಲವಾದರೆ ಮಗು ಸಾಯುತ್ತದೆ ಅಥವಾ ಬುದ್ಧಿವಿಹೀನವಾಗುವ ಸಾಧ್ಯತೆಗಳಿವೆ….’ ಇತ್ಯಾದಿ ವಿವರಣೆಗಳಿಂದ ಅವರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.

ಅಲ್ಲಿ ಇದ್ದವರು ಮೂರೇ ಜನ. ಗಂಡ, ಹೆಂಡತಿ ಮತ್ತು ಹೆಂಡತಿಯ ತಾಯಿ. ನಾನು ಅನೇಕ ಸಲ ಗಮನಿಸಿದ್ದೇನೆ, ಇಂಥ ಸಂದರ್ಭಗಳಲ್ಲಿ ಹೆಂಡತಿಯ ತಾಯಿಯೇ ಜೊತೆಗಿರುತ್ತಾಳೆ. ಗಂಡನ ತಾಯಿ ಆರಾಮಾಗಿ ಮನೆಯಲ್ಲಿದ್ದು, “ಎಲ್ಲ’ ಮುಗಿದ ಮೇಲೆ ಅಧಿಕಾರ ಸ್ಥಾಪಿಸಲು ಮಾತ್ರ ಪ್ರತ್ಯಕ್ಷ್ಯರಾಗುತ್ತಾರೆ. ಅಥವಾ ಇವರು ತೆಗೆದುಕೊಂಡ ನಿರ್ಣಯಗಳನ್ನು ಟೀಕಿಸಲು ಹಾಜರಾಗುತ್ತಾರೆ. ಈಗ ಈ ಮೂರೂ ಜನರದು ಒಕ್ಕೊರಲಿನ ನಿರ್ಣಯ: “ಈಗ ಸದ್ಯ ಮೂಲಾ ನಕ್ಷತ್ರ. ಅದೂ ಎರಡನೆಯ ಚರಣದಲ್ಲಿದೆ. ಅದು ಸರಿದು ಹೋಗುವವರೆಗೆ ಏನಾದರಾಗಲಿ ಆಪರೇಷನ್‌ ಬೇಡ!’

ನನ್ನದು ವಿಚಿತ್ರ ಸ್ಥಿತಿ. ಮಗುವಿನ ಸಂಕಟ ನನಗೆ ತಿಳಿಯುತ್ತಿದೆ. ಮಗುವಿಗೆ ಹೊಟ್ಟೆಯಲ್ಲಿ ಆಗುತ್ತಿರಬಹುದಾದ ಕಸಿವಿಸಿ, ಪ್ರಾಣಕ್ಕಾಗಿ ಅದು ಚಡಪಡಿಸುತ್ತಿರುವ ಸ್ಥಿತಿ ಎಲ್ಲವೂ ವೇದ್ಯವಾಗುತ್ತಿದೆ. ಸರಿಯಾದ ವೇಳೆಗೆ ಸಹಜ ಹೆರಿಗೆಯಾಗದಿದ್ದರೆ ಹೊಕ್ಕುಳ ಹುರಿಯ ಮುಖಾಂತರ ಮಗುವಿಗೆ ಹರಿಯುವ ರಕ್ತದ ಪ್ರಮಾಣ ಕಡಿಮೆ ಯಾಗಿ ಮಗುವಿನ ಮೆದುಳಿಗೆ ಗ್ಲುಕೋಸ್‌ ಹಾಗೂ ಆಮ್ಲಜನಕ ದೊರೆಯುವುದಿಲ್ಲ. ಹೀಗಾಗಿ ಮೊದಲು ಪರಿಣಾಮವಾಗುವುದು ಮೆದುಳಿನ ಮೇಲೆಯೇ. ಆದರೆ ನನಗೆ ಏನೂ ಮಾಡಲು ಸಾಧ್ಯ ಇರಲಿಲ್ಲ. ಅವರ “ಅಪ್ಪಣೆ’ಯಿಲ್ಲದೆ ನಾನೇನು ಮಾಡಲು ಸಾಧ್ಯ?

ಯಾರೋ ಒಬ್ಬ ಜ್ಯೋತಿಷಿ, “ಮೂಲಾ ನಕ್ಷತ್ರದಲ್ಲಿ ಮಗು ಹುಟ್ಟಿದರೆ ತಂದೆಗೆ ಪ್ರಾಣಾಪಾಯವಾಗುತ್ತದೆ’ ಎಂದು ಅವರನ್ನು ನಂಬಿಸಿಬಿಟ್ಟಿದ್ದ. ಅವರು ಅದನ್ನು ಎಷ್ಟು ನಂಬಿದ್ದರೆ‌ಂದರೆ, ನಾನು “ಆಪರೇಷನ್‌ ಮಾಡಲೇಬೇಕು’ ಎಂದಾಗಲೆಲ್ಲ ಅವರು ಗಾಬರಿಪಟ್ಟುಕೊಂಡು, ಒಬ್ಬರನ್ನೊಬ್ಬರು ನೋಡುತ್ತಾ ತಮ್ಮ ನಾಡಿ ತಾವೇ ಹಿಡಿದು ನೋಡಿಕೊಳ್ಳುವ ಸ್ಥಿತಿಯಲ್ಲಿದ್ದರು!

Advertisement

ಈ ರೀತಿಯ ಜನರನ್ನು ಅನೇಕ ಬಾರಿ ನೋಡಿದ್ದೇನೆ. ಮುಹೂರ್ತಕ್ಕೆ ಸರಿಯಾಗಿ ಮಕ್ಕಳನ್ನು ಹಡೆಯಲು ಸಿಜೇರಿಯನ್‌ ಎಂಬ ಸುಲಭ ಸಾಧನ ದೊರೆತ ಮೇಲಂತೂ ಒಳ್ಳೆಯ ಮುಹೂರ್ತಗಳನ್ನು, ಫ್ಯಾಶನೆಬಲ್‌ ದಿನಾಂಕಗಳನ್ನು ನೋಡಿಕೊಂಡು ಹೆರಿಗೆ ಮಾಡಿಸಿಕೊಳ್ಳುವವರ ಸಂಖ್ಯೆ ತುಂಬ ಹೆಚ್ಚಾಗಿದೆ. ಯಾವುದೇ ವೈದ್ಯಕೀಯ ಸಮಸ್ಯೆ ಇಲ್ಲದಂತಿದ್ದರೆ ಮತ್ತು ಸಿಜೇರಿಯನ್‌ ಅವಶ್ಯಕವಿದ್ದರೆ ನಾವೂ ಕೂಡ ಅವರ ವಿನಂತಿಯನ್ನು ಮಾನ್ಯ ಮಾಡುತ್ತೇವೆ. ಆದರೆ ಕೆಲವೊಮ್ಮೆ ಅತಿರೇಕಗಳೂ ಆಗಿದ್ದಿದೆ. 

ಒಂದು ಬಾರಿ ಒಬ್ಬರು ರಾತ್ರಿ ಎರಡು ಗಂಟೆಗೆ ಮುಹೂರ್ತ ತೆಗೆಸಿಕೊಂಡು ಬಂದಿದ್ದರು. “ರಾತ್ರಿ ನಿಮ್ಮ ಮುಹೂರ್ತದ ಸಲುವಾಗಿ ನಿದ್ದೆಗೆಡಲು ನನಗೆ ಮತ್ತು ನಮ್ಮ ಸಿಬ್ಬಂದಿಗೆ ಸಾಧ್ಯವಿಲ್ಲ, ತುರ್ತು ಪರಿಸ್ಥಿತಿಯಲ್ಲಿ ಮಾತ್ರ ನಾವು ಹಾಗೆ ಮಾಡಲು ಸಾಧ್ಯ’, ಎಂದರೆ “ಏನ್ರೀ ಸರ್‌, ನಾವು ನಿಮ್ಮ ಖಾಯಂ ಪೇಶಂಟ್‌ ಅದ್ಯಾವು. ನಮ್ಮ ಮನ್ಯಾಗ ಎಷ್ಟ ಆಪರೇಶನ್‌ ಆದರೂ ಎಲ್ಲಾ ನಿಮ್ಮ ಕಡೇನ ಮಾಡ್ತೀವಿ. ಇವತ್ತೂಂದ್‌ ರಾತ್ರಿ ನಮ್ಮ ಸಲುವಾಗಿ ನಿದ್ದಿಗೆಡೂದು ಆಗೂದಿಲ್ಲೆನ್ರೀ?’ ಅಂದಿದ್ದ. 

ಅವರ ವಿಚಿತ್ರ ತರ್ಕಗಳಿಗೆ ನಮ್ಮಲ್ಲಿ ಉತ್ತರಗಳಿರುವುದಿಲ್ಲ. ಅಪ್ಪಟ ನಾಸ್ತಿಕನೂ, ವೈಜ್ಞಾನಿಕವಾಗಿ ಚಿಂತಿಸುವವನೂ, ಸಾಮಾಜಿಕ ನಿಲುವುಗಳಿಗೆ ಬದ್ಧನಾದವನೂ, ಮಾನವೀಯತೆಯೇ ವೈದ್ಯಕೀ ಯದ ಜೀವಾಳ ಎಂದು ಬಲವಾಗಿ ನಂಬಿದವನಾದ ನನಗೆ, ಅವರ ಇವೆಲ್ಲ ವಿಚಾರಗಳು ಅಸಂಬದ್ಧವೂ, ತರ್ಕವಿಹೀನವೂ ಎನಿಸುತ್ತವೆ. ಹಾಗೇನಾದರೂ ಮುಹೂರ್ತಗಳಿಂದಲೇ ಒಳ್ಳೆಯ ಮಕ್ಕಳು ಜನಿಸುವಂತಿದ್ದರೆ ಅದೆಷ್ಟೋ ಒಳ್ಳೆಯದಿತ್ತು, ಅನಿಸುತ್ತದೆ. ಆಗ ಬರೀ ಮಹಾತ್ಮರನ್ನು, ದೇಶಪ್ರೇಮಿಗಳನ್ನು, ಮಹಾ ಮಾನವ(ಮಾತೆಯ)ರನ್ನು ಪಡೆಯಲು ಸಾಧ್ಯವಾಗುತ್ತಿತ್ತೇನೋ! ಆ ಮಾತು ಬೇರೆ.

ಮುಹೂರ್ತ ನೋಡಿ ಮಕ್ಕಳನ್ನು ಪಡೆಯುವವರದು ಒಂದು ವರ್ಗವಾದರೆ “ಒಳ್ಳೆಯ’ ಮುಹೂರ್ತದಲ್ಲಿ ತಮ್ಮ ಹಿರಿಯರ ಪ್ರಾಣ ಹೋಗುವಂತೆ ಮಾಡಿರಿ ಎನ್ನುವವರದು ಇನ್ನೊಂದು ವಿಚಿತ್ರ ವರ್ಗ. ಮಾರಣಾಂತಿಕ ಸ್ಥಿತಿಯಲ್ಲಿದ್ದು, ಕೃತಕ ಉಸಿರಾಟದ ಯಂತ್ರದಿಂದ ಜೀವ ಹಿಡಿದ ಹಿರಿಯರನ್ನು ಇಂಥದ್ದೇ ಗಳಿಗೆಯಲ್ಲಿ ಯಂತ್ರದಿಂದ ಬಿಡಿಸಿ ಪ್ರಾಣ ಹೋಗಲು “ಸಹಕರಿಸುವಂತೆ’ ವಿನಂತಿ ಮಾಡುವ ಜನರೂ ಇ¨ªಾರೆ. “ಅದು ಕೊಲೆಗೆ ಸಮನಾಗುತ್ತದೆ, ಅಲ್ಲದೆ ವೈದ್ಯಕೀಯದ ಮುಖ್ಯ ಉದ್ದೇಶ ಪ್ರಾಣ ರಕ್ಷಣೆ. ಹೀಗಾಗಿ ನಮಗದು ಸಾಧ್ಯವಿಲ್ಲ’ ಎಂದರೆ, ವೈದ್ಯೋಪದೇಶಕ್ಕೆ ವಿರುದ್ಧವಾಗಿ ಮನೆಗೆ ತೆಗೆದುಕೊಂಡು ಹೋಗಿ, ಮುಹೂರ್ತಕ್ಕೆ ಸರಿಯಾಗಿ ಅವರನ್ನು “ಬೀಳ್ಕೊಡುತ್ತಾರೆ’. ಹಾಗೆ ಮಾಡಿ, ಅವರನ್ನು ಸೀದಾ ಸ್ವರ್ಗಕ್ಕೆ ಕಳಿಸಿದೆವು ಎಂದು ಖುಷಿಪಡುತ್ತಾರೆ. ಅಲ್ಲದೆ ಇಂತಿಂಥ ದಿನ ಸತ್ತರೆ, ಜೀವಂತ ಇದ್ದ ಅವರ ಮನೆಯವರಿಗೆ, ನೆರೆಹೊರೆಯವರಿಗೆ ಇಂತಿಂಥ ಕಷ್ಟಗಳು ಬರುತ್ತವೆ ಎಂಬ ಒಂದು “ಅಥೆಂಟಿಕ್‌ ಆದ 

ಲಿಸ್ಟ್‌’ನ್ನೇ ಇಟ್ಟುಕೊಂಡಿರುತ್ತಾರೆ.
ಒಂದು ದಿನ ಒಬ್ಬ …
“ಸಾಹೇಬ್ರ, ನಿಮ್ಮ ಕೂಡ ಒಂದ್‌ ಸ್ವಲ್ಪ ಪ್ರೈವೇಟ್‌ ಮಾತಾಡೂದೈತ್ರಿ’ ಅಂದ.
ನಾನು ನಮ್ಮ ಸಿಬ್ಬಂದಿಯನ್ನೆಲ್ಲ ಹೊರಗೆ ಕಳಿಸಿ, “ಏನು’ ಎನ್ನುವಂತೆ ನೋಡಿದೆ.  ನನ್ನೆಡೆಗೆ ಸ್ವಲ್ಪವೇ ಬಾಗಿ ನನ್ನ ಕಿವಿಯಲ್ಲಿ ಹೇಳುವಂತೆ, ಪಿಸುದನಿಯಲ್ಲಿ , “ಸರ್‌. ನಮ್ಮಪ್ಪಗ ಲಕ್ವಾ ಹೊಡದ ಭಾಳ ವರ್ಷ ಆಯಿŒ, ನಮಗೂ ಜ್ವಾಪಾನ ಮಾಡಿ ಸಾಕಾಗೈತಿ. ಅಂವ ಅಂತೂ ಆರಾಮ ಆಗೂದಿಲ್ಲಂತ ನಮಗ ಗೊತ್ತಾಗೈತಿ. ನಾಳೆ ದಿನ ಭಾಳ ಛಲೋ ಐತೆಂತ. ನೀವು ಸ್ವಲ್ಪ ನಮ್ಮ ಮನೀಗೆ ಬಂದು, ಅಂವಗ ನಿದ್ದಿ ಇಂಜೆಕ್ಷನ್‌ ಹೆಚ್ಚು ಡೋಜ್‌ ಕೊಟ್ಟು ಬಿಡ್ತೀರೆನ್ರಿ?’ ಅಂದ. 

ನನಗೆ ಸಿಟ್ಟು ನೆತ್ತಿಗೇರಿತು. ಅಲ್ಲದೆ ಅವನ ಮನಸ್ಥಿತಿಯ ಬಗ್ಗೆ ರೇಜಿಗೆಯಾಯಿತು. ಆತನನ್ನು ಗದರಿದೆ. ಅಲ್ಲದೆ, ಬರೀ ಒಂದು ಎದೆಬಡಿತ, ಸ್ವಲ್ಪವೇ ಉಸಿರು ಇದ್ದರೂ ಬದುಕಿಸಲು ಪ್ರಯತ್ನಿಸುವ ನಮ್ಮ ವೃತ್ತಿಯ ಬಗ್ಗೆ ತಿಳಿಹೇಳಿದೆ. ಅವನಿಗದು ಪಥ್ಯವಾಗಲಿಲ್ಲ. ಅವರಪ್ಪನನ್ನು ಒಳ್ಳೆಯ ಮುಹೂರ್ತದ ದಿನ “ಮೇಲೆ’ ಕಳಿಸುವ ಬಗ್ಗೆ ಗಾಢವಾಗಿ ಚಿಂತಿಸುತ್ತ ಹೊರಟೇ ಬಿಟ್ಟ.

ಈ ರೀತಿಯ “ಮುಹೂರ್ತವ್ಯಾಧಿ’ ಅಂಟಿಸಿಕೊಂಡವರೊಡನೆ ವ್ಯವಹರಿಸುವುದು ಕಷ್ಟವಾಗುತ್ತದೆ. ಕೊನೆಯ ಪ್ರಯತ್ನವಾಗಿ ನಾನೂ ಮೂಲಾ ನಕ್ಷತ್ರದ ಬಗ್ಗೆ ಆಗಲೇ ಒಂದಿಷ್ಟು ಓದಿಕೊಂಡೆ. ನನ್ನ ಪರಿಚಯದ ಜ್ಯೋತಿಷಿಯೊಬ್ಬರಿಗೆ ಫೋನ್‌ ಮಾಡಿ ಹಲವು ವಿಷಯ ತಿಳಿದುಕೊಂಡು ಅದರಲ್ಲಿರುವ ಧನಾತ್ಮಕ ವಿಷಯಗಳನ್ನು ಅವರೆದುರು ಹೇಳಿ, ಅವನ ಮನಸ್ಥಿತಿಯ ಮಟ್ಟಕ್ಕೆ ನನ್ನನ್ನೂ ಇಳಿಸಿಕೊಂಡು (ಏರಿಸಿಕೊಂಡು?) ಒಪ್ಪಿಸಲು ಪ್ರಯತ್ನಿಸಿದೆ. ಮೂಲಾದಲ್ಲೇ ಹುಟ್ಟಿದ ಎಷ್ಟೋ ಜನ ಏನೇನು ಸಾಧಿಸಿದ್ದಾರೆ. ಹಾಗೂ ಹೆಣ್ಣು ಹುಟ್ಟಿದರೆ ಮಾವನಿಲ್ಲದ ಮನೆ ಹುಡುಕಿದರಾಯ್ತು, ಗಂಡು ಹುಟ್ಟಿದರೆ ಅವನು ಅತೀ ಜಾಣನಾಗುತ್ತಾನೆ, ಇತ್ಯಾದಿಗಳನ್ನೆಲ್ಲ ತಿಳಿಹೇಳಲು ಪ್ರಯತ್ನಿಸಿದೆ. ಊಹೂn..! ಅವರು ತಮ್ಮ “ದೃಢ ನಿರ್ಧಾರ’ದಿಂದ ಸರಿದಾಡಲೇ ಇಲ್ಲ. ಸುಮ್ಮನೆ ನನ್ನ ಮುಖ ನೋಡುತ್ತಾ ಕುಳಿತುಬಿಟ್ಟರು. ಕೊನೆಗೂ ಅವರು ಸಿಜೇರಿಯನ್‌ಗೆ ಒಪ್ಪಿಗೆ ಕೊಡಲೇ ಇಲ್ಲ. ಅವರ ಹಠ ಗೆದ್ದಿತು. ನಾನು ಸೋಲನ್ನೊಪ್ಪಿಕೊಂಡೆ. (ಮೂಢ) ನಂಬಿಕೆಗಳು ಎಷ್ಟು ಆಳವಾಗಿ ನಮ್ಮ ಜನಮಾನಸದಲ್ಲಿ ಬೇರೂರಿವೆಯಲ್ಲ, ಎನಿಸತೊಡಗಿತು. 

ಕೊನೆಗೆ ನಾನೇ ಕೇಳಿದೆ “ಯಾವಾಗ ಮುಗಿಯುತ್ತದೆ, ಮೂಲಾ?’ ಎಂದು.
“ರಾತ್ರಿ ಎರಡೂವರೆಗೆ’, ಅವನು ಶಾಂತವಾಗಿ, ಆದರೆ ದೃಢವಾಗಿ ಹೇಳಿದ.
ಹೊಟ್ಟೆಯೊಳಗೆ ಚಡಪಡಿಸುತ್ತಿದ್ದ ಮಗು, ಇನ್ನೂ ಎಂಟು ಗಂಟೆಗಳ ಕಾಲ ಕಾಯಬೇಕಲ್ಲ ಎನಿಸಿ ಆ ಮಗು ಮತ್ತಷ್ಟು ಒದ್ದಾಡುತ್ತಿರುವಂತೆನಿಸಿತು. ರಾತ್ರಿಯೇ ಸಿಜೇರಿಯನ್‌ ಮಾಡುವುದೆಂದು ನಿಶ್ಚಯ ಮಾಡಿದೆ. ಯಾಕೆಂದರೆ ಏನಾದರೂ ಮಾಡಿ ಆ ಮಗುವನ್ನು ಬದುಕಿಸುವ ಪ್ರಯತ್ನ ಮಾಡಬೇಕಿತ್ತು. ಸಾಧ್ಯವಾದಷ್ಟು ಬೇಗ ಮಗುವನ್ನು ಹೊರತರಬೇಕಿತ್ತು. ನಮ್ಮ ಅರಿವಳಿಕೆ ತಜ್ಞರನ್ನು ವಿನಂತಿಸಿ ರಾತ್ರಿಯೇ ಆಪರೇಶನ್‌ ಮಾಡಿದೆ. ಎರಡೂವರೆ ಕೆ.ಜಿ. ತೂಗುವ ಮು¨ªಾದ ಹೆಣ್ಣು ಮಗು. ಆದರೆ ಕೈಕಾಲುಗಳನ್ನು ಆಡಿಸುತ್ತಿಲ್ಲ, ನಿಶ್ಶಕ್ತವಾಗಿದೆ. ತಾಯಗರ್ಭದಲ್ಲಿಯೇ ಮಲವಿಸರ್ಜನೆ ಮಾಡಿದೆ, ಅಳುತ್ತಿಲ್ಲ. ಉಸಿರಾಡುತ್ತಿಲ್ಲ. ಎದೆಬಡಿತ ಕ್ಷೀಣವಾಗಿದೆ. ತುರ್ತು ಇಂಜೆಕ್ಷನ್‌ಗಳನ್ನು ಕೊಟ್ಟು, ಶ್ವಾಸನಾಳದಲ್ಲಿ ಕೊಳವೆ ಹಾಕಿ ಪ್ರಾಣ ವಾಯುವನ್ನು ನೀಡುತ್ತ, ಕೃತಕ ಉಸಿರಾಟ ಕೊಡುತ್ತ ಮಕ್ಕಳ ವೈದ್ಯರೆಡೆಗೆ ಸಾಗಿಸಿದೆವು. ನಾವು ಶಸ್ತ್ರಚಿಕಿತ್ಸೆ ಮುಗಿಸಿ ಹೊರಬಂದಾಗ ಬೆಳಗಿನ ನಾಲ್ಕು ಗಂಟೆ. ನನಗೆ ಅವರ ಮುಖ ನೋಡುವ ಮನಸಾಗಲಿಲ್ಲ. ಹಾಗೆಯೇ ಮನೆಗೆ ಬಂದೆ.

ಬೆಳಿಗ್ಗೆ ರೌಂಡ್ಸ್‌ಗೆ ಹೋದಾಗ ನೋಡಿದರೆ, ನನಗೆ ಆಶ್ಚರ್ಯ. ಅವರು ಸಂತೋಷವಾಗಿದ್ದಾರೆ, ತಮ್ಮ ಜೀವ ಉಳಿಯಿತೆಂದು! ಅದೂ ಅಲ್ಲದೆ, ಮಗು “ಜೀವಂತ’ ಉಳಿದಿದೆಯಲ್ಲ! ಆದರೆ ಮಗುವಿನ ಬುದ್ಧಿಶಕ್ತಿ ಕಡಿಮೆ ಆಗಬಹುದೇನೋ ಎಂಬ ಆತಂಕ ನನ್ನಲ್ಲಿ ಉಳಿದುಕೊಂಡುಬಿಟ್ಟಿತು. ಅಲ್ಲಿಂದ ಮುಂದೆ ಎರಡು ವಾರ ಬೇಕಾಯಿತು, ಮಗು ಮಕ್ಕಳ ವೈದ್ಯರ ಐ.ಸಿ.ಯು.ದಿಂದ ಹೊರಬರಬೇಕಾದರೆ.

…ಅದಾದ ಎರಡು ವರ್ಷಗಳ ನಂತರ ಬೇರೆ ಯಾವುದೋ ರೋಗಕ್ಕೆ ಚಿಕಿತ್ಸೆ ಪಡೆಯಲು ಅವರು ನಮ್ಮ ಆಸ್ಪತ್ರೆಗೆ ಬಂದಿದ್ದರು. ನೋಡಿದರೆ, ಅವಳ ಮಡಿಲಲ್ಲಿ ಅದೇ ಮಗು. ನೋಡಲು ತುಂಬ ಚೆಂದ. ಆದರೆ ಸುಮ್ಮನೆ ಮಲಗಿಕೊಂಡಿದೆ. ಶೂನ್ಯದತ್ತ ದೃಷ್ಟಿ ನೆಟ್ಟು. ಧ್ವನಿ ಮಾಡಿದರೆ, ಕರೆದರೆ ನಮ್ಮತ್ತ ನೋಡುತ್ತಿಲ್ಲ. ತಾಯಿಯೇನೋ ಮಗುವಿನ ಅಂದಚೆಂದ ನೋಡಿ ಆನಂದಪಡುತ್ತಿದ್ದಳು. ಆದರೆ ನನಗೆ ಮಾತ್ರ, ಮುಂದೊಂದು ದಿನ ತನ್ನ ಕಾರ್ಯವನ್ನು ತಾನೇ ಮಾಡಿಕೊಳ್ಳದ, ತನ್ನ ಬಟ್ಟೆಗಳನ್ನು ತಾನೇ ತೊಡದ, ತನ್ನ ತಲೆ ತಾನೇ ಬಾಚಿಕೊಳ್ಳದ, ಜಗತ್ತಿನ ಪರಿವೆಯಿಲ್ಲದೆ ಎತ್ತಲೋ ನೋಡಿ ನಗುವ, ಎಲ್ಲೆಂದರಲ್ಲಿ ಮಲ ಮೂತ್ರ ವಿಸರ್ಜನೆ ಮಾಡುವ, ಕುಟುಂಬಕ್ಕೂ ಸಮಾಜಕ್ಕೂ ಹೊರೆಯಾಗಿ, ಪ್ರಾಣಿಯಂತೆ ಬದುಕುವ “ಬುದ್ಧಿಮಾಂದ್ಯ ಹುಡುಗಿ’ಯೊಬ್ಬಳ ಚಿತ್ರ ಕಣ್ಮುಂದೆ ಬಂದು ಮನಸ್ಸು ಮ್ಲಾನವಾಯಿತು. 

ನಮ್ಮ ಪ್ರೊಫೆಸರ್‌ ಒಬ್ಬರು ಹೇಳುತ್ತಿದ್ದ ಮಾತು ನೆನಪಾಯಿತು. “”ಇಂಥ ಮಕ್ಕಳು ಹುಟ್ಟಿದಾಗ, “ಏನೇ ಆಗಲಿ ಈ ಮಗುವನ್ನು ಬದುಕಿಸಿಕೊಡಿ’ಎಂದು ಅಂಗಲಾಚುತ್ತಾರೆ. ಬೆಳೆದು ದೊಡ್ಡವರಾಗಿ, ಬುದ್ಧಿಮಾಂದ್ಯರಾಗಿ ಕುಟುಂಬಕ್ಕೆ ಹೊರೆಯಾದಾಗ, ಏನಾದರಾಗಲಿ ಇದನ್ನು ಮುಗಿಸಿಬಿಡಿ” ಎನ್ನುತ್ತಾರೆ.

ಆ ಹುಡುಗಿಗೆ ಅವರ ತಂದೆ ತಾಯಿಯರು “ಮೂಲ’ ಆದರೋ, ಅವರಿಗೆ ಇವಳು “ಮೂಲ’ ಆದಳ್ಳೋ ಅರ್ಥವಾಗಲಿಲ್ಲ. ಮುಂದಿನ ಪೇಶಂಟ್‌ನ್ನು ಒಳಗೆ ಬರಲು ತಿಳಿಸಿದೆ…

 ಡಾ. ಶಿವಾನಂದ ಕುಬಸದ

Advertisement

Udayavani is now on Telegram. Click here to join our channel and stay updated with the latest news.

Next