ಮಹಾಲಿಂಗಪುರ: 2024 ಜನವರಿ 27ರಿಂದ 31ರವರೆಗೆ ನಡೆಯಲಿರುವ ಪ್ರಕರಣ ಪ್ರವೀಣ ಬಸವಾನಂದ ಮಹಾಸ್ವಾಮಿಗಳ 50ನೇ ಪುಣ್ಯಾರಾಧನೆಯ ವೇದಾಂತ ಸುವರ್ಣ ಮಹೋತ್ಸವ ಹಾಗೂ ಸಹಜಾನಂದ ಸ್ವಾಮೀಜಿಯವರ 80ನೇ ವರ್ಧಂತಿ ಮಹೋತ್ಸವಕ್ಕೆ ಮಹಾಲಿಂಗಪುರದ ಜನತೆ ತನು, ಮನ, ಧನ ಸೇರಿದಂತೆ ತ್ರಿವಿಧ ಸೇವೆಯ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಬೀದರ ಚಿದಂಬರಾಶ್ರಮದ ಡಾ|ಶಿವಕುಮಾರ ಮಹಾಸ್ವಾಮೀಜಿ ಹೇಳಿದರು.
ಬಸವಾನಂದ ಶಾಲೆಯ ಆವರಣದಲ್ಲಿ ಕಟ್ಟಿಸಿದ ಸದ್ಗುರು ಸದನ ಗುರುವಾರ ಉದ್ಘಾಟಿಸಿ ನಂತರ ಜರುಗಿದ ಬಸವಾನಂದರ 50ನೇ ವೇದಾಂತ ಮಹೋತ್ಸವದ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮನುಷ್ಯ ಸತ್ತ ನಂತರವೂ ಸ್ಮರಿಸುವಂತೆ ಧರ್ಮ ಕಾರ್ಯಗಳನ್ನು ಮಾಡಿ ಪುಣ್ಯ ಸಂಪಾದಿಸಬೇಕು. ಸಿದ್ಧಾರೂಢ ಸತ್ಸಂಗದಲ್ಲಿರುವವರು ಎಂದಿಗೂ ಜಾತಿಭೇದ ಮಾಡಬಾರದು. ನಾವೆಲ್ಲರೂ ಮಾನವ ಜಾತಿಯವರು, ಗುರುಪುತ್ರರು ಎಂಬ ಭಾವನೆಯಿಂದ ಸದಾ ಸತ್ಸಂಗ ಮತ್ತು ಧರ್ಮ ಕಾರ್ಯಗಳ ಮೂಲಕ ಮಾನವ ಜನ್ಮದ ಸಾರ್ಥಕತೆ ಪಡೆಯಬೇಕು ಎಂದರು.
ಹುಬ್ಬಳ್ಳಿ ಸಿದ್ಧಾರೂಢ ಮಠದ ಧರ್ಮದರ್ಶಿ ಶಾಮಾನಂದ ಪೂಜೇರಿ ಮಾತನಾಡಿ, ಪ್ರಕರಣ ಪ್ರವೀಣ ಬಸವಾನಂದ ಮಹಾಸ್ವಾಮಿಗಳ 50ನೇ ಪುಣ್ಯಾರಾಧನೆಯ ವೇದಾಂತ ಸುವರ್ಣ ಮಹೋತ್ಸವ ಹಾಗೂ ಸಹಜಾನಂದ ಸ್ವಾಮೀಜಿಯವರ 80ನೇ ವರ್ಧಂತಿ ಮಹೋತ್ಸವ ಕಾರ್ಯಕ್ರಮವನ್ನು ಅದ್ಧೂರಿ ಸಮಾರಂಭವನ್ನಾಗಿಸಲು ಎಲ್ಲರೂ ಸಹಕರಿಸಬೇಕೆಂದರಲ್ಲದೇ, ಕಾರ್ಯಕ್ರಮಕ್ಕೆ ವೈಯಕ್ತಿಕವಾಗಿ 51ಸಾವಿರ ರೂ. ದೇಣಿಗೆ ನೀಡುವುದಾಗಿ ಘೋಷಿಸಿದರು.
ಬಸವಾನಂದ ಟ್ರಸ್ಟ್ ಕಾರ್ಯದರ್ಶಿ ಎಂ.ಎಂ. ಕಟಗಿ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮದ ವಿವರಗಳನ್ನು ಸಭೆಗೆ ತಿಳಿಸಿ, ತಾವು ಕಾರ್ಯಕ್ರಮಕ್ಕೆ 51 ಸಾವಿರ ದೇಣಿಗೆ ನೀಡುವುದಾಗಿ ತಿಳಿಸಿದರು. ಸಾನಿಧ್ಯ ವಹಿಸಿದ್ದ ಸಹಜಾನಂದ ಸ್ವಾಮೀಜಿ
ಮಾತನಾಡಿದರು. ಚಳಕಾಪೂರದ ಶಂಕರಾರೂಢ ಸ್ವಾಮೀಜಿ, ಹೊಸೂರ ಪರಮಾನಂದ ಸ್ವಾಮೀಜಿ, ರನ್ನಬೆಳಗಲಿ ಸದಾಶಿವ ಗುರೂಜಿ, ಕಂಕನವಾಡಿ ಮಾರುತಿ ಶರಣರು ಭಾಗವಹಿಸಿದ್ದರು.
ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಪಟ್ಟಣದ ವಿವಿಧ ಸಮಾಜಗಳ ಹಿರಿಯರು, ಶಾಲೆಯ ಹಳೆಯ ವಿದ್ಯಾರ್ಥಿಗಳು, ಬಸವಾನಂದ ಟ್ರಸ್ಟ್ ಕಮೀಟಿ ಸದಸ್ಯರು, ಬೀದರ ಶಿವಕುಮಾರ ಸ್ವಾಮೀಜಿ, ಸಹಜಾನಂದ ಸ್ವಾಮೀಜಿ ಅವರನ್ನು
ಸನ್ಮಾನಿಸಿ ಗೌರವಿಸಿದರು. ಎಸ್.ಕೆ.ಗಿಂಡೆ ಸ್ವಾಗತಿಸಿದರು. ಎಚ್.ಆಯ್. ಸುತಾರ ನಿರೂಪಿಸಿದರು. ಸಿದ್ಧಾರೂಢ ಮುಗಳಖೋಡ ವಂದಿಸಿದರು.