Advertisement

ಗಂಡಾದರೆ ಸಾಲದು, ಒಳ್ಳೆಯ ಅಣ್ಣನೂ, ತಮ್ಮನೂ ಆಗಬೇಕು!

06:00 AM Oct 31, 2018 | |

ಹೆಣ್ಣು ಮಗು ನೋಡುವ ಮೊದಲ ಪುರುಷ ಎಂದರೆ ತಂದೆ, ನಂತರ ನೋಡುವುದು ಸಹೋದರನನ್ನೇ ಎಂದು ತಿಳಿಸಿ ಹೇಳಿದಾಗ ಅವನ ಕಣ್ಣುಗಳು ಮಿನುಗಿದವು. ಹೀಗಾಗಿ ನೀನು ಪುರುಷನಾಗಿ ಅವಳ (ತಂಗಿಯ) ನೆನಪಿನಂಗಳದಲ್ಲಿ ಯಾವ ಸಂವೇದನೆಯನ್ನು ಶಾಶ್ವತವಾಗಿ ಇರಿಸಬೇಕು ಎಂದು ಹೇಳಿದಾಗ ಅವನಿಗೆ ಅರ್ಥವಾಯಿತು…

Advertisement

ಆಕೆ ತಮ್ಮ ಇಬ್ಬರೂ ಮಕ್ಕಳನ್ನು ಕೌನ್ಸೆಲಿಂಗ್‌ ಮಾಡಿಸಬೇಕು ಎಂದು ಕರಕೊಂಡು ಬಂದಿದ್ದರು. ಮಗನಿಗೆ ಹನ್ನೊಂದು; ಮಗಳಿಗೆ ಒಂಬತ್ತು ವರ್ಷ. ಸಮಸ್ಯೆ ಎಂದರೆ, ಆ ಹುಡುಗ ಸದಾ ತನ್ನ ತಂಗಿಗೆ ಕೀಟಲೆ ಮಾಡುತ್ತಿರುತ್ತಾನೆ ಎಂಬುದು. ಅವಳು ಅಳುವ ತನಕವೂ ಇವನು ಬಿಡುವುದಿಲ್ಲ. ಪುಸ್ತಕಗಳನ್ನು ಮುಚ್ಚಿಡುವುದು. ಅವಳು ಹುಡುಕಾಡುತ್ತಿರುವಾಗ, ಇವನಿಗೆ ಹುಸಿನಗೆ. ಅಡುಗೆ ಮನೆಯಲ್ಲಿ ತಾಯಿಗೆ ನೆರವಾಗುತ್ತಿದ್ದರೆ, ಅವಳನ್ನು ತೀಕ್ಷ್ಣವಾಗಿ ಟೀಕಿಸುವುದು. ಅಷ್ಟೇ ಅಲ್ಲದೆ, ಅವಾಚ್ಯ ಪದಗಳನ್ನೂ ಮಗ ಬಳಸುತ್ತಿದ್ದಾನೆ ಎನ್ನುವುದು ತಾಯಿಗೆ ಗಾಬರಿ ಹುಟ್ಟಿಸಿತ್ತು. 

  ಜೊತೆಗೆ ಶಾಲೆಯಲ್ಲಿಯೂ ಇವನ ಮೇಲೆ ಬಹಳ ಕಂಪ್ಲೇಂಟ್‌ ಇತ್ತು. ಈ ವಯಸ್ಸಿನಲ್ಲಿ ಇವೆಲ್ಲಾ ಸಾಧಾರಣವಾದ ತುಂಟಾಟ ಅನಿಸಿದರೂ, ಇದೇಕೋ ಹದ್ದು ಮೀರಿ ಹೋಗುತ್ತಿದೆ ಎಂದು ತಾಯಿಗೆ ಅನಿಸಿದೆ. ಯಾವುದಾದರೂ ಕಾರಣಕ್ಕೆ ಕ್ಯಾತೆ ತೆಗೆಯುವುದಷ್ಟೇ ಅಲ್ಲದೆ, ಯೂ-ಟ್ಯೂಬ್‌ ವಿಡಿಯೋ ನೋಡುವ ಹುಚ್ಚು ಕೂಡ ಆ ಹುಡುಗನಲ್ಲಿ ಜಾಸ್ತಿ ಆಗಿತ್ತು. ಬೇಡದ ವಿಡಿಯೋಗಳನ್ನು ನೋಡುವಂತೆ ಆತ ತಂಗಿಗೆ ಒತ್ತಾಯಿಸುತ್ತಿದ್ದ.

  ಆ ಹುಡುಗನ ತಾಯಿ ಸೂಕ್ಷ್ಮ ಸಂವೇದಿ. ಕೆಲಸಕ್ಕೆ ಹೋದರೂ, ಮನೆಯ ಬಗ್ಗೆ, ಮಕ್ಕಳ ಬಗ್ಗೆ ಬಹಳ ನಿಗಾ ಇಟ್ಟಿದ್ದರು. ತಂದೆಯೂ ಒಬ್ಬ ಸಿಂಪಲ್‌ ಮನುಷ್ಯ. ಆದರೂ ಮಗನ್ಯಾಕೆ ರೌಡಿ ಆದ, ಅವನ ವರ್ತನೆ ಯಾಕೆ ಹೀಗಾಯ್ತು ಅಂತ ಹೆತ್ತವರಿಬ್ಬರೂ ಕಂಗಾಲಾಗಿದ್ದರು. ಕೆಲವೊಮ್ಮೆ ಮಗು ಆ ರೀತಿ ವರ್ತಿಸುವುದಕ್ಕೆ ವಂಶವಾಹಿಗಿಂತ, ಹೊರಗಿನ ವಾತಾವರಣ ಕೂಡ ಕಾರಣವಾಗುತ್ತದೆ. ಜೊತೆಗೆ ವಯೋಸಹಜವಾದ ಹಾರ್ಮೋನುಗಳು thrill ಹುಡುಕುತ್ತಿರುತ್ತವೆ.

  ನಾನು ಆ ಹುಡುಗನೊಂದಿಗೆ ಮಾತನಾಡಿದೆ. ಹೆಣ್ಣು ಮಗು ನೋಡುವ ಮೊದಲ ಪುರುಷ ಎಂದರೆ ತಂದೆ, ನಂತರ ನೋಡುವುದು ಸಹೋದರನನ್ನೇ ಎಂದು ತಿಳಿಸಿ ಹೇಳಿದಾಗ ಅವನ ಕಣ್ಣುಗಳು ಮಿನುಗಿದವು. ಹೀಗಾಗಿ ನೀನು ಪುರುಷನಾಗಿ ಅವಳ (ತಂಗಿಯ) ನೆನಪಿನ ಅಂಗಳದಲ್ಲಿ ಯಾವ ಸಂವೇದನೆಯನ್ನು ಶಾಶ್ವತವಾಗಿ ಇರಿಸಬೇಕು, ಅವಳ ಬಗ್ಗೆ ಯಾವ ರೀತಿಯ ಕಾಳಜಿ ತೋರಿಸಬೇಕು ಎಂದು ಹೇಳಿದಾಗ ಅವನಿಗೆ ಅರ್ಥವಾಯಿತು. ಜೊತೆಗೆ, ಅಣ್ಣನಾಗಿ, ಪುರುಷ ಜಾತಿಯ ಬಗ್ಗೆ ಗೌರವ ಮತ್ತು ನಂಬಿಕೆ ಮೂಡಿಸುವಂಥ ನಡತೆಯಿರಬೇಕೇ ಹೊರತು ಅದರ ಘನತೆಗೆ ಕುಂದು ತರುವಂಥ ಕೆಲಸ ಮಾಡಬಾರದು ಎಂದು ಮನವರಿಕೆ ಮಾಡಿದೆ. 

Advertisement

  ಅಣ್ಣನೇ ಮನೆಯಲ್ಲಿ ದೌರ್ಜನ್ಯ ನಡೆಸಿದರೆ, ಮುಂದೆ ಹೆಣ್ಣಾಗಿ ಆಕೆ ಸದಾ defensive ವ್ಯಕ್ತಿತ್ವವಾಗಬೇಕಾದ ಅಪಾಯ ಇರುತ್ತದೆ ಅಂತ ಹೇಳಿದ ಮಾತುಗಳು ಆ ಹುಡುಗನ ಮನಸ್ಸಿನ ಮೇಲೆ ಪರಿಣಾಮಕಾರಿಯಾಯಿತು. ತಂಗಿಗೆ ಬುದ್ಧಿ ಬಲಿಯುವ ಮುನ್ನವೇ, ಅವಳಿಗೆ ಅರ್ಥವಾಗದ ಅಹಿತಕರ ಅನುಭವವನ್ನು ಅವಳ ಮನಸ್ಸಿನಲ್ಲಿ ತುಂಬಿಬಿಟ್ಟರೆ, ಮುಂದೆ ಅವಳ ಯೋಚನೆ, ಭಾವನೆ ಮತ್ತು ವರ್ತನೆಯಲ್ಲಿ ಅಸಮತೋಲನ ಉಂಟಾಗುವ ಸಾಧ್ಯತೆ ಇದೆ ಎಂದು ಅವನ ಮನಸ್ಸಿಗೆ ನಾಟುವಂತೆ ಬುದ್ಧಿವಾದ ಹೇಳಿದೆ.  

   ಹಾಗೆಯೇ ಶಾಲೆಯಲ್ಲಿ ವಿಶೇಷ ಚೇತನವಿರುವ ಮಕ್ಕಳ ಬಗ್ಗೆ ಅವನಿಗೆ ಮಾಹಿತಿ ನೀಡಿದೆ. ಅವರಿಗೆ ಯಾವ ರೀತಿಯ ಬೆಂಬಲ ಮತ್ತು ಒತ್ತಾಸೆ ನೀಡಬೇಕೆಂಬ ಮಾಹಿತಿಯನ್ನು ಇಟ್ಟುಕೊಂಡು, ಶಾಲೆಯಲ್ಲಿ ಬದಲಾವಣೆಯ ಹರಿಕಾರನಾಗಬಹುದೆಂದು ವಿವರಣೆ ನೀಡಿದೆ. ನಾನು ಬದಲಾಗುತ್ತೇನೆ ಎಂಬ ಒಪ್ಪಂದಕ್ಕೆ ಸಹಿ ಹಾಕಿರುವ ಆ ಹುಡುಗ ಈಗ ಬದಲಾಗುತ್ತಿದ್ದಾನೆ. ಮಕ್ಕಳು ಈ ರೀತಿಯಲ್ಲಿ ವರ್ತಿಸಿದಾಗ, ಅವರಲ್ಲಿ ಅಪರಾಧಿ ಮನೋಭಾವ ಮೂಡುವಂಥ ಬುದ್ಧಿವಾದ/ ಬೈಗುಳ/ ಶಿಕ್ಷೆ ಕೊಡುವುದನ್ನು ನಿಲ್ಲಿಸಿ. ಮಕ್ಕಳಿಗೆ ಅವರ ಜವಾಬ್ದಾರಿಯ ಬಗ್ಗೆ ತಿಳಿವಳಿಕೆ ಮೂಡಿಸಿ. ಒಳ್ಳೆಯವರಾಗಲು ಪ್ರೇರೇಪಿಸಿ.

ಶುಭಾ ಮಧುಸೂದನ್‌, ಮನೋರೋಗ ಚಿಕಿತ್ಸಾ ವಿಜ್ಞಾನಿ

Advertisement

Udayavani is now on Telegram. Click here to join our channel and stay updated with the latest news.

Next