Advertisement

Cauvery ನೀರು ಬೇಕಾಬಿಟ್ಟಿ ಬಳಸಿದ್ರೆ ಸಂಕಷ್ಟ!

03:52 PM Oct 06, 2023 | Team Udayavani |

ಬೆಂಗಳೂರು: ಮಳೆ ಕೊರತೆಯಿಂದ ಕಾವೇರಿ ಒಡಲು ಬರಿದಾಗಿರುವ ಈ ಹೊತ್ತಿನಲ್ಲಿ ರಾಜ್ಯ ರಾಜಧಾನಿಯಲ್ಲಿ ಅಮೂಲ್ಯವಾದ ಕಾವೇರಿ ಕುಡಿಯುವ ನೀರು ಭಾರೀ ಪ್ರಮಾಣದಲ್ಲಿ ಅನಗತ್ಯ ಪೋಲಾಗುತ್ತಿದೆ. ಈ ರೀತಿ ಪೋಲು ಮಾಡಿದರೆ ಮುಂದೆ ಸಂಕಷ್ಟ ಎದುರಾದೀತು ಜೋಕೆ!

Advertisement

ಬೆಂಗಳೂರಿಗರಿಗೆ ಪೂರೈಕೆ ಆಗುವ ಕಾವೇರಿ ನೀರು ಕುಡಿಯುವುದಕ್ಕಿಂತ ಹೆಚ್ಚಾಗಿ ವಾಹನ, ಮನೆ, ರಸ್ತೆ ಸ್ವತ್ಛಗೊಳಿಸಲು ಬಳಕೆಯಾಗುತ್ತಿದೆ. ಜೊತೆಗೆ ಮನೆಗಳ ಟ್ಯಾಪ್‌ಗ್ಳಲ್ಲಿ ಲಿಕೇಜ್‌, ಸ್ನಾನ ಗೃಹದಲ್ಲಿ ಅತಿಯಾದ ಕಾವೇರಿ ನೀರು ಬಳಕೆ ಮಾಡಲಾಗುತ್ತಿದೆ. ಇನ್ನು ಗೃಹ, ವಾಣಿಜ್ಯ, ಸಾರ್ವಜನಿಕ ಬಳಕೆಯ ಬಹುತೇಕ ನಲ್ಲಿಗಳು ಅವೈಜ್ಞಾನಿಕವಾಗಿದ್ದು, ಇಲ್ಲಿ ಶೇ.74 ನೀರು ಪೋಲಾಗುತ್ತಿರುವುದು ಗೊತ್ತಾಗಿದೆ.

ಮತ್ತೂಂದೆಡೆ ಬೆಂಗಳೂರಿ ನಲ್ಲಿ ಲೆಕ್ಕಕ್ಕೆ ಸಿಗದಷ್ಟು ನೀರು ಪೋಲಾಗುವುದನ್ನು ನಿಯಂ ತ್ರಿಸಲು ದಿಟ್ಟಕ್ರಮ ಕೈಗೊಳ್ಳುವಲ್ಲಿ ಜಲಮಂಡಳಿ ವಿಫ‌ಲವಾಗಿದೆ.

40 ರೂ. ನೀರು 9 ರೂ.ಗೆ ಲಭ್ಯ:

ಬೆಂಗಳೂರು ನಗರಕ್ಕೆ ಪ್ರತಿ ನಿತ್ಯ ಕಾವೇರಿ ಮೂಲದಿಂದ 1,450 ಎಂಎಲ್‌ಡಿ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಕಾವೇರಿ ನೀರಿನ ಸಂಗ್ರಹಣೆಗೆ ಸರಬರಾಜಿಗೂ ಮುನ್ನ ಜಲ ಶುದ್ಧೀಕರಣ ಘಟಕದಲ್ಲಿ ರಾಸಾಯನಿಕ ಬಳಕೆ, ವಿದ್ಯುತ್‌ ಶುಲ್ಕ, ನೌಕರರ ಸಂಬಳ ಇತರೆ ವೆಚ್ಚ ಸೇರಿ ಒಟ್ಟಾರೆ 1 ಸಾವಿರ ಲೀಟರ್‌ ನೀರು ಪೂರೈಕೆಗೆ 40 ರೂ. ತಗಲುತ್ತದೆ. ಆದರೆ, ಜಲ ಮಂಡಳಿಯು ಸಾರ್ವಜನಿಕರಿಗೆ 8 ರೂ. ಗೆ 1 ಸಾವಿರ ಲೀಟರ್‌ ನೀರು ಪೂರೈಸುತ್ತದೆ. ಉಳಿದ 32 ರೂ. ಜಲಮಂಡಳಿಗೆ ಹೊರೆಯಾ ಗುತ್ತಿದೆ. ಅಂಗಡಿ ಗಳಲ್ಲಿ ಒಂದು ಲೀಟರ್‌ ಕುಡಿ ಯುವ ನೀರಿಗೆ 20 ರೂ. ತೆತ್ತು ಖರೀದಿಸಬೇಕು ಎಂಬುದನ್ನು ಮರೆಯುವಂತಿಲ್ಲ.

Advertisement

ಎಷ್ಟು ಪ್ರಮಾಣದಲ್ಲಿ ನೀರು ಪೋಲು?:

ಸಾರ್ವಜನಿಕ ಕೊಳಾಯಿಗಳಿಂದ ಶೇ.4 ನೀರು ಪೋಲಾಗುತ್ತಿದೆ. ಗೃಹ ಸಂಪರ್ಕ ಕೊಳವೆ ಸೋರಿಕೆ ಶೇ.5, ಜಲಮಾಪಕ ಲೋಪದೋಷ ಶೇ.5, ಶಿಥಿಲಗೊಂಡಿರುವ ನೆಲಮಟ್ಟದ ಜಲಾಶಯದಲ್ಲಿ ಆಗುವ ಸೋರುವಿಕೆ ಶೇ.5, ಹೆಚ್ಚಿನ ವಾಹನ ಓಡಾಟದಿಂದ ನೀರಿನ ಕೊಳವೆ ಸೋರಿಕೆ, ನೀರಿನ ಕೊಳವೆ ಸ್ವತ್ಛತೆಗೆ ಶೇ.6 ಸೇರಿ ಒಟ್ಟಾರೆ ಜಲಮಂಡಳಿ ಲೆಕ್ಕದ ಪ್ರಕಾರ ಬೆಂಗಳೂರಿನಲ್ಲಿ ಶೇ.28 ನೀರು ಪೋಲಾಗುತ್ತಿದೆ. ಮಿತಿಗಿಂತ ಶೇ.14 ಹೆಚ್ಚಿನ ಪ್ರಮಾಣದಲ್ಲಿ ನೀರು ಅನಗತ್ಯಕ್ಕೆ ಬಳಕೆಯಾಗುತ್ತಿದೆ. ಆದರೆ, ಪೋಲಾಗುತ್ತಿರುವ ಶೇ.50 ಕಾವೇರಿ ನೀರು ಲೆಕ್ಕಕ್ಕೆ ಸಿಗುವುದಿಲ್ಲ ಎಂದು ಜಲಮಂಡಳಿ ಮೂಲಗಳು ತಿಳಿಸಿವೆ.

ನೀರಿನ ಸಮರ್ಪಕ ನಿರ್ವಹಣೆ ಇಲ್ಲ:

ರಾಜಧಾನಿಯ ಬಹುತೇಕ ಕಡೆಗಳಲ್ಲಿ ಅನಧಿಕೃತ ಕಾವೇರಿ ನೀರಿನ ಸಂಪರ್ಕವಿದೆ. ಇದರಿಂದ ಜಲಮಂಡಳಿಗೆ ತಿಳಿಯದಂತೆ ನೀರು ಕಳುವಾ ಗುತ್ತಿದೆ. ನೀರಿನ ಬಿಕ್ಕಟ್ಟು ಎದುರಾಗುತ್ತಿರುವ ಸಂದರ್ಭದಲ್ಲಿಯೂ ನೀರಿನ ಸಮರ್ಪಕ ನಿರ್ವಹಣೆಯತ್ತ ಜಲಮಂಡಳಿ ಗಮನ ಹರಿಸಿದಂತಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ನಗರ ಪ್ರದೇಶದಲ್ಲಿ ಪ್ರತಿ ವ್ಯಕ್ತಿಗೆ ಕನಿಷ್ಠ 150 ಲೀಟರ್‌ ನೀರಿನ ಅಗತ್ಯವಿದೆ. ಆದರೆ, ಬೆಂಗಳೂರಿನಲ್ಲಿ ಒಬ್ಬ ವ್ಯಕ್ತಿಗೆ 80 ಲೀಟರ್‌ ನೀರು ಸಿಗುತ್ತಿದೆ. ಅಗತ್ಯ ಪ್ರಮಾಣಕ್ಕಿಂತ ಹೆಚ್ಚಿನ ನೀರಿನ ಬಳಕೆ, ಸರಬರಾಜು, ಮಳೆ ನೀರಿನ ಸಂಗ್ರಹಣೆ- ವೈಜ್ಞಾನಿಕ ಕ್ರಮಗಳ ನಿರ್ವಹಣೆಯ ವೈಫ‌ಲ್ಯವೇ ನೀರಿನ ಕೊರತೆಗೆ ಪ್ರಮುಖ ಕಾರಣಗಳಾಗಿವೆ ಎಂಬುದು ತಜ್ಞರ ಅಭಿಪ್ರಾಯ.

654 ಕೋಟಿ ರೂ.ನಲ್ಲಿ ಕಾಮಗಾರಿ:

ಬೆಂಗಳೂರು ಜಲಮಂಡಳಿಯು 10.64 ಲಕ್ಷ ಕುಟುಂ ಬಗಳಿಗೆ ಪ್ರತಿನಿತ್ಯ ನೀರು ಪೂರೈಕೆ ಮಾಡುತ್ತಿದೆ. ಇದಕ್ಕೆ 3.83 ಕೋಟಿ ರೂ. ಶುಲ್ಕ ಸಂಗ್ರಹ ವಾಗುತ್ತದೆ. ಆದರೆ, ಬೆಂಗಳೂರಿನ ಬಹುತೇಕ ಕಡೆಗಳಲ್ಲಿನ 50 ವರ್ಷ ಹಳೆಯ ಸಿಐ, ಪಿಎಸ್‌ಸಿ ಕೊಳವೆ ಮಾರ್ಗಗಳು ದೀರ್ಘ‌ಕಾಲದಿಂದ ಬಳಕೆಯಲ್ಲಿವೆ. ಇಲ್ಲಿ ಪದೇ ಪದೆ ನೀರು ಸೋರಿಕೆಯಾಗುತ್ತಿದೆ. ಇದೀಗ ನೀರು ಪೋಲಿ ನಿಂದ ಮಂಡಳಿಗೆ ಆಗುತ್ತಿರುವ ಆರ್ಥಿಕ ನಷ್ಟ ಇಳಿಸಲು 654 ಕೋಟಿ ರೂ.ನಲ್ಲಿ ಬೆಂಗಳೂರು ಪಶ್ಚಿಮ, ದಕ್ಷಿಣ, ಕೇಂದ್ರ ವಿಭಾಗಗಳ 132.5 ಚ.ಕಿ.ಮೀ. ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ನೀರು ಪೋಲು ಹೇಗೆ ತಡೆಗಟ್ಟಬಹುದು?

 ಅನಗತ್ಯ ನೀರು ಪೋಲು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.

 ನೀರು ಸೋರಿಕೆಯ ಮೂಲ ಪತ್ತೆ ಹಚ್ಚಬೇಕು.

 ನೀರಿನ ಮಿತ ವ್ಯಯ ಬಳಕೆ ಕುರಿತು ಜಾಗೃತಿ ಮೂಡಿಸಬೇಕು.

 ನೀರು ಪೋಲಾಗುವ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು.

 ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಪಠ್ಯಗಳಲ್ಲಿ ನೀರು ಪೋಲಿನ ಸಮಸ್ಯೆ ಅಳವಡಿಕೆ.

 ಅನಧಿಕೃತ ಕೊಳವೆ ಸಂಪರ್ಕದ ಬಗ್ಗೆ ನಿಗಾ ಇಡಬೇಕು.

●ಅವಿನಾಶ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next