“ಸಿನಿಮಾ ಶುರುವಾಗಿ ಮೂರು ದಿನಗಳು ಮಾತ್ರ ನಿರ್ಮಾಪಕನ ಬಗ್ಗೆ ಎಲ್ಲರಿಗೂ ಕಾಳಜಿ. ಆಮೇಲೆ, ಯಾರೂ ನಿರ್ಮಾಪಕನ ಬಗ್ಗೆ ಯೋಚಿಸುವುದಿಲ್ಲ. ಅವನ ಕಷ್ಟಗಳೇನು, ಇಷ್ಟಗಳೇನು ಎಂಬ ಕುರಿತು ಯಾರೂ ಚಿಂತಿಸೋದಿಲ್ಲ. ಇನ್ನೊಂದು ಮಾತು ಸ್ಪಷ್ಟಪಡಿಸುತ್ತೇನೆ. ಏನೇನೋ ಮಾತಾಡೋಕೆ ಹೋಗಿ ಬಿಟ್ಟರೆ, ಅದು ವಿನಾಕಾರಣ “ಕಾಂಟ್ರವರ್ಸಿ’ ಆಗುತ್ತೆ. ಅದಕ್ಕೆ ಹೆಚ್ಚು ಮಾತಾಡೋದಿಲ್ಲ. ಇಲ್ಲಿ ಹರಿಪ್ರಿಯಾ ಅವರೇ ನಾಯಕಿ. ಬೇರಾರೂ ಇಲ್ಲಿ ನಾಯಕಿ ಅಲ್ಲ … ನಾನೇ ವಿಲನ್…’
– ಹೀಗೆ ಗೊಂದಲಮಯವಾಗಿಯೇ ಮಾತನಾಡುತ್ತ ಹೋದರು ನಿರ್ಮಾಪಕ ವೆಂಕಟೇಶ್. ಅವರೇಕೆ ಹೀಗೆ ಮಾತಾಡಿದರು ಅನ್ನುವುದಕ್ಕೆ ಉತ್ತರ ಸಿಗಲಿಲ್ಲ. ಮೈಕ್ ಹಿಡಿದ ಕೂಡಲೇ ಮೇಲಿನ ಮಾತುಗಳನ್ನು ಒಂದೇ ಸಮನೆ ಹೇಳಿ ಸುಮ್ಮನಾದರು. “ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ನಾನು ಸಿನಿಮಾನೇ ಬೇಡ ಅಂತ ಕೂತಿದ್ದೆ. ಆದರೆ, ನಿರಂಜನ್ ಎಬ್ಬಿಸಿಕೊಂಡು ಬಂದು ಸಿನಿಮಾ ಮಾಡಿಸಿದ್ದಾರೆ. ಕಷ್ಟಪಟ್ಟು ಚಿತ್ರ ಮಾಡಿದ್ದೇವೆ. ನಾನು ಈವರೆಗೆ ಸುಮಾರು 200 ಚಿತ್ರಗಳನ್ನು ವಿತರಣೆ ಮಾಡಿದ್ದೇನೆ. ಹಾಗಾಗಿ ಎಲ್ಲರ ನಂಟೂ ಇದೆ. ಆ ಕಾರಣಕ್ಕೆ ಈ ಚಿತ್ರವನ್ನು 200 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇನೆ’ ಎಂದು ವಿವರ ಕೊಟ್ಟರು ವೆಂಕಟೇಶ್.
ನಿರ್ದೇಶಕ ಗುರು ದೇಶಪಾಂಡೆ, “ಇದು ನನ್ನ ಆರನೇ ಚಿತ್ರ. ಇದೊಂದು ಥ್ರಿಲ್ಲರ್ ಬೇಸ್ಡ್ ಚಿತ್ರ. ಕುತೂಹಲದ ಜತೆಗೆ ಹಾಸ್ಯವೂ ಇದೆ. ಚಿಕ್ಕಣ್ಣ ಇಲ್ಲಿ ಸೀರಿಯಸ್ ಆಗಿದ್ದರೂ, ಅವರ ಕೆಲಸಗಳು ಹಾಸ್ಯಮಯವಾಗಿರುತ್ತವೆ. ಹರಿಪ್ರಿಯ ಅವರದು ವಿಶೇಷ ಪಾತ್ರವಿದೆ. ಇದುವರೆಗೆ ಅವರು ಮಾಡದೇ ಇರುವ ಪಾತ್ರ ಎನ್ನಬಹುದು. ಚಿರಂಜೀವಿ ಅವರಿಗೂ ಹೊಸ ರೀತಿಯ ಪಾತ್ರ ಕಟ್ಟಿಕೊಡಲಾಗಿದೆ. ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ಹೊಸ ತಿರುವು ಸಿಗಲಿದೆ. ಅದೇ ಚಿತ್ರದ ಹೈಲೈಟ್. ಇಲ್ಲಿ ಕಾಣಸಿಗುವ ಪಾತ್ರಗಳು ಕೂಡ ಆಗಾಗ ಬದಲಾಗುತ್ತಾ ಹೋಗುತ್ತವೆ. ನಿರ್ಮಾಪಕರ ಪ್ರೋತ್ಸಾಹದಿಂದ ಒಳ್ಳೆಯ ಚಿತ್ರ ಮಾಡಿರುವ ಖುಷಿ ಇದೆ ಅಂದರು ನಿರ್ದೇಶಕರು.
ಚಿರಂಜೀವಿ ಸರ್ಜಾ ಅವರಿಗೆ “ಸಂಹಾರ’ ಹೊಸ ಜರ್ನಿಯ ಅನುಭವ ಕೊಟ್ಟಿದೆಯಂತೆ. ಹರಿಪ್ರಿಯ ಅವರೊಂದಿಗೆ ಮೊದಲ ಚಿತ್ರವಿದು. ಅವರು ನಮ್ಮ ಫ್ಯಾಮಿಲಿಯಲ್ಲಿ ಮೂವರು ಹೀರೋಗಳ ಜತೆಯಲ್ಲೂ ನಟಿಸಿರುವ ಮೊದಲ ನಾಯಕಿ ಎನ್ನಬಹುದು. ಇನ್ನು, ಇದು ನಮ್ಮ ಮನೆಯ ಬ್ಯಾನರ್‌ನಲ್ಲೇ ತಯಾರಾದ ಚಿತ್ರವಿದ್ದಂತೆ. ಒಂದೊಳ್ಳೆಯ ಚಿತ್ರದಲ್ಲಿ ನಾನಿದ್ದೇನೆ ಎಂಬುದೇ ಖುಷಿ ಅಂದರು ಚಿರು.
ಹರಿಪ್ರಿಯ ಅವರು ಡಬ್ಬಿಂಗ್ ವೇಳೆ ಸಿನಿಮಾ ನೋಡಿದಾಗಲೇ, ಇದೊಂದು ಹೊಸ ಬಗೆಯ ಚಿತ್ರವಾಗುತ್ತೆ ಅಂತ ಅಂದುಕೊಂಡರಂತೆ. ನಾನಿಲ್ಲಿ ಎರಡು ಬಗೆಯ ಪಾತ್ರ ನಿರ್ವಹಿಸಿದ್ದೇನೆ. ನಾಯಕಿಯೂ ಹೌದು, ಖಳನಾಯಕಿಯೂ ಹೌದು. ಮೊದಲ ಸಲ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾಗಿ ಹೇಳಿಕೊಂಡರು ಹರಿಪ್ರಿಯ.