Advertisement

ಕನ್ನಡ ಭಾಷೆ ರಕ್ಷಣೆಯಲ್ಲಿ ರಾಜಕೀಯ ಬೇಡ

03:55 PM Oct 01, 2018 | |

ಶಿವಮೊಗ್ಗ: ಎಲ್ಲ ಸಂಸ್ಕೃತಿಗೆ ಕನ್ನಡ ಮಾದರಿಯಾಗಿದ್ದು, ಇಂತಹ ಶ್ರೀಮಂತ ಭಾಷೆಯನ್ನು ಸಂರಕ್ಷಿಸುವಲ್ಲಿ ಯಾವುದೇ
ರಾಜಕೀಯ ಮಾಡಬಾರದು ಎಂದು ಶಾಸಕ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಗರದ ಅಂಬೇಡ್ಕರ್‌ ಭವನದಲ್ಲಿ ಭಾನುವಾರ ಆಯೋಜಿಸಿದ್ದ “ಶಿವಮೊಗ್ಗ ತಾಲೂಕು ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನ’ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದರಲ್ಲೂ
ರಾಜಕೀಯ ಹಸ್ತಕ್ಷೇಪವಾದಲ್ಲಿ ಬೆಳವಣಿಗೆಗೆ ತೊಡಕಾಗುತ್ತದೆ ಎಂದು ತಿಳಿಸಿದರು.

ಕನ್ನಡ ಕಸ್ತೂರಿಯಿದ್ದಂತೆ. ಅದರ ಪರಿಮಳ ಇನ್ನಷ್ಟು ಪಸರಿಸಬೇಕಾದರೆ, ಭಾಷೆಯೆಡೆಗೆ ಪ್ರತಿಯೊಬ್ಬರಲ್ಲೂ ಗೌರವ ಭಾವ ಮೂಡಬೇಕು. ಅದನ್ನು ತನ್ನದೆಂದು ಪ್ರೀತಿಸುವ ಗುಣ ಬೆಳೆಸಬೇಕು. ಇದನ್ನು ಬಿಟ್ಟು ಗಡಿ, ಜಲ ಸೇರಿದಂತೆ ಹಲವು ಕಾರಣಗಳಿಂದಾಗಿ ಕನ್ನಡಕ್ಕೆ ತಿಲಾಂಜಲಿ ಇಡುವ ಕೆಲಸ ಮಾಡಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
 
ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲೇ ಕನ್ನಡ ಮಾತನಾಡುವವರ ಸಂಖ್ಯೆ ಕ್ಷೀಣಿಸಿದೆ. ಪರಭಾಷೆಗೆ ಕನ್ನಡಿಗರೂ ಅತಿಯಾಗಿ ನೆಚ್ಚಿಕೊಂಡಿರುವುದರಿಂದಾಗಿ ತಮ್ಮತನವನ್ನೇ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದೇವೆ. ಇದು ಮಾರಕ ಬೆಳವಣಿಗೆಯಾಗಿದ್ದು, ಕೂಡಲೇ ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಕನ್ನಡ ಭಾಷೆ, ಗಡಿ, ಸಂಸ್ಕೃತಿ ಉಳಿಯಬೇಕಾದರೆ ಇಂತಹ ಸಾಹಿತ್ಯ ಸಮ್ಮೇಳನಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜನೆಯಾಗಬೇಕು. ಇಲ್ಲಿ ನಡೆಯುವ ಗೋಷ್ಠಿಗಳ ಮೂಲಕ ಯುವ ಪೀಳಿಗೆಯಲ್ಲಿ ಕನ್ನಡದ ಬಗ್ಗೆ ಅಭಿಮಾನ ಮೂಡಬೇಕು ಎಂದು ಆಶಯ ವ್ಯಕ್ತಪಡಿಸಿದರು.

 ಕ್ರಾಂತಿಕಾರಿಗಳು, ಸಾಹಿತಿಗಳು, ದಿಗ್ಗಜರು, ಕನ್ನಡ ಅಭಿಮಾನಿಗಳು ಕರುನಾಡಿನ ಕುರಿತು ಹಾಡಿ ಹೊಗಳಿದ್ದಾರೆ. ಇಷ್ಟಾದರೂ ಇದರ ಬಗ್ಗೆ ಪೂರ್ಣ ಅರಿತುಕೊಳ್ಳಲು ಸಾಧ್ಯವಾಗಿಲ್ಲ. ಅಂತಹ ಭಾಷೆ ಕನ್ನಡವಾಗಿದೆ. ಪರ ಭಾಷೆಯ
ಅತಿಕ್ರಮಣವನ್ನು ತಪ್ಪಿಸಿ ನಮ್ಮ ಭಾಷೆ, ಸಂಸ್ಕೃತಿ ಬೆಳೆಸುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
 
ಕಸಾಪ ತಾಲೂಕು ಅಧ್ಯಕ್ಷ ಜಿ.ಪಿ. ಸಂಪತ್‌ ಕುಮಾರ್‌ ಮಾತನಾಡಿ, ನಮ್ಮಲ್ಲಿನ ಸ್ವಾರ್ಥಗಳಿಂದಾಗಿಯೇ ಕನ್ನಡ ಭಾಷೆ ಕಟ್ಟಲು ಸಾಧ್ಯವಾಗಿಲ್ಲ. ಹೀಗಾಗಿ, ಸ್ವಾರ್ಥವನ್ನು ಮರೆತು ಕೆಲಸ ಮಾಡಲು ಮುಂದಾದಲ್ಲಿ ಭಾಷೆಯನ್ನು
ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಭಾಷೆಯ ಅಧಃಪತನಕ್ಕೆ ಮೂಲಕಾರಣ “ಪರಭಾಷೆ’ಗೆ ಅಧಿಕ ಒತ್ತು ನೀಡಿರುವುದು. ಈಗಲಾದರೂ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು. 

ಕಸಾಪ ಜಿಲ್ಲಾಧ್ಯಕ್ಷ ಡಿ.ಬಿ. ಶಂಕರಪ್ಪ ಮಾತನಾಡಿ, ಕನ್ನಡವನ್ನು ಕಟ್ಟಿ ಬೆಳೆಸುವಲ್ಲಿ ಶಿವಮೊಗ್ಗ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ವಚನ ಸಾಹಿತ್ಯ, ತತ್ವಪದ, ಜಾನಪದ ಸಾಹಿತ್ಯಗಳ ಮೂಲಕ ಕನ್ನಡ ಭಾಷೆಯನ್ನು ಬೆಳೆಸುವ ಕೆಲಸ
ಮಾಡಲಾಗಿದೆ. ಜತೆಗೆ, ಇಲ್ಲಿ ಸಿಕ್ಕ ಶಾಸನಗಳೂ ಇದನ್ನು ರುಜುವಾತುಪಡಿಸುತ್ತವೆ.

Advertisement

ಹೊಸನಗರದಲ್ಲಿ ಜೈನ ಸಾಹಿತಿಗಳಿದ್ದರು. 12ನೇ ಶತಮಾನದಲ್ಲಿ ಶರಣ ಸಾಹಿತ್ಯದ ಮೂಲಕ ಭಾಷಾ ಸೊಗಡು, ಶ್ರೀಮಂತಿಕೆಯನ್ನು ಹೆಚ್ಚಿಸಲಾಗಿದೆ ಎಂದರು. ಬೆಕ್ಕಿನಕಲ್ಮಠದ ಶ್ರೀ ಡಾ| ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿ ಸಾನ್ನಿಧ್ಯ ವಹಿಸಿದ್ದರು. 7ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಸವಿತಾ ನಾಗಭೂಷಣ್‌, ರಾಜ್ಯ ಸರಕಾರಿ ನೌಕರರ ಸಂಘದ ಕೋಶಾಧ್ಯಕ್ಷ ಸಿ.ಎಸ್‌. ಷಡಕ್ಷರಿ, ಎಸ್‌.ಎಂ. ಲೋಕೇಶ್ವರಪ್ಪ ಇತರರಿದ್ದರು. ಚನ್ನಬಸಪ್ಪ ನ್ಯಾಮತಿ ನಿರೂಪಿಸಿದರು. ಎಚ್‌. ರವಿಶಂಕರ್‌ ಸ್ವಾಗತಿಸಿದರು. ಜಿ.ಎಸ್‌. ಅನಂತ್‌ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next