ಹಾಸನ: ಜೈನ ಧರ್ಮೀಯರ ಪರಮ ಪಾವನ ತೀರ್ಥಕ್ಷೇತ್ರ ಶ್ರೀ ಸಮ್ಮೇದ ಶಿಖರ್ಜಿ ಬಚಾವೋ ಆಂದೋಲನ ಅಂಗವಾಗಿ ಹಾಸನ ಜೈನ ಸಮಾಜದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಜೈನ ಧರ್ಮೀಯರು ಹಾಸನದಲ್ಲಿ ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ದೊಡ್ಡಬಸದಿಯಿಂದ ಮೆರವಣಿಗೆ ಹೊರಟ ಜೈನ ಸಮುದಾಯದವರು, ಹೇಮಾವತಿ ಪ್ರತಿಮೆ ಮೂಲಕ ಮೆರವಣಿಗೆಯಲ್ಲಿ ಸಾಗಿ ಸಮ್ಮೇದ ಶಿಖರ್ಜಿ ತೀರ್ಥಕ್ಷೇತ್ರವನ್ನು ಪ್ರವಾಸೋದ್ಯಮ ಮಾಡದೇ ಯಥಾಸ್ಥಿತಿಯಂತೆ ಉಳಿಸಿ ಅದರ ಪಾವಿತ್ರ್ಯತೆ ಕಾಪಾಡಿ ಧರ್ಮ ಉಳಿಸಿ. ಶಿಖರ್ಜಿ ಜೈನರ ಹಕ್ಕು. ಅದುವೇ ನಮಗೆ ಭೂಷಣ, ಶಿಖರ್ಜಿ ಪವಿತ್ರ ತೀರ್ಥ ಕ್ಷೇತ್ರ. ಇದು ನಮ್ಮ ಪ್ರಾಣ ಕ್ಷೇತ್ರ. ಶಿಖರ್ಜಿ ತಾಣ ಅಪವಿತ್ರಗೊಳಿಸಬೇಡಿ ಎಂಬ ಭಿತ್ತಿ ಫಲಕ ಪ್ರದರ್ಶಿಸಿ ತಮ್ಮ ವಿವಿಧ ಸಂಘ-ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು ಕೆಲ ಕಾಲ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜೈನರ ಪವಿತ್ರ ಕ್ಷೇತ್ರ: ಪ್ರಾಚೀನ ಜೈನಧರ್ಮದ 24 ತೀರ್ಥಂಕರರ ಪೈಕಿ 20 ತೀರ್ಥಂಕರರು ಹಾಗೂ ಸಾವಿರಾರು ಮುನಿಗಳು ಕರ್ಮಕ್ಷಯ ಮಾಡಿ ಮುಕ್ತಿ ಪಡೆದ ಸಾವಿರಾರು ವರ್ಷಗಳ ಇತಿಹಾಸ ತೀರ್ಥಕ್ಷೇತ್ರ ಶ್ರೀ ಸಮ್ಮೇದ ಶಿಖರ್ಜಿ ಜಾರ್ಖಂಡ್‌ನ ಗಿರಿಡಿ ಜಿಲ್ಲೆಯ ಮಧುವನ ಗ್ರಾಮದಲ್ಲಿದೆ. ಪ್ರಾಚೀನ ಕಾಲದಿಂದಲೂ ಜೈನಧರ್ಮೀಯರು ಪರಮಪಾವನ ಪುಣ್ಯಭೂಮಿ ಎಂದು ಶ್ರದ್ಧಾ ಭಕ್ತಿಯಿಂದ ಆರಾಧಿಸಿಕೊಂಡು ಸಂರಕ್ಷಿಸಿಕೊಂಡು ಬಂದಿದ್ದಾರೆ. ಈ ಕ್ಷೇತ್ರದ ಪಾವಿತ್ರತೆಯನ್ನು ಉಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಶಿಖರ್ಜಿ ಬಚಾವೋ ಆಂದೋಲನ: ಜೈನರು ದೇಶಾದ್ಯಂತ ಶಿಖರ್ಜಿ ಬಚಾವೋ ಆಂದೋಲನ ನಡೆಸಿ ಸರ್ಕಾರ ಆದೇಶ ರದ್ದುಪಡಿಸುವಂತೆ ಒತ್ತಡ ಹೇರುತ್ತಿದ್ದೇವೆ. ಅದರಂತೆ ಹಾಸನದಲ್ಲೂ ಜೈನ ಸಮಾಜದ ಎಲ್ಲ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದೇವೆ ಎಂದು ತಿಳಿಸಿದರು.
ಹಾಸನ ಜೈನ ಸಂಘದ ಅಧ್ಯಕ್ಷ ಎಂ.ಅಜಿತ್ ಕುಮಾರ್, ಕಾರ್ಯದರ್ಶಿ ಕೆ.ಜಿ.ಬ್ರಹ್ಮೇಶ್, ಪ್ರಮೋದ್, ರೇಂದ್ರ ಕುಮಾರ್, ಶಾಂತಿಪ್ರಸಾದ್, ಪ್ರಕಾಶ್, ಮುಕ್ತೀಶ್ ಹಾಗೂ ಪದಾಧಿಕಾರಿಗಳು, ಶ್ರೀ ಮಹಾರ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಎಂ.ಧನಪಾಲ್, ದಿಗಂಬರ ಜೈನ ಯುವಕ ಸಂಘದ ಅಧ್ಯಕ್ಷ ನಾಗರಾಜ್, ಜೈನ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆ ಅಧ್ಯಕ್ಷ ಎಚ್.ಎನ್.ಅಭಿನಂದನ್, ದಿಗಂಬರ ಜೈನ ಸೇವಾ ಟ್ರಸ್ಟ್‌ನ ಅಧ್ಯಕ್ಷ ಎಚ್.ಎಂ.ಸುನಿಲ್ ಕುಮಾರ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸದಸ್ಯ ಎಚ್.ಎನ್.ಸುಕುಮಾರ್, ನಗರಸಭಾ ಸದಸ್ಯ ಎಸ್ .ಬಿ.ಪ್ರೇಂಕುಮಾರ್, ಅಲ್ಪಸಂಖ್ಯಾತ ಜೈನ ಹೋರಾಟ ಸಮಿತಿಯ ಸುದರ್ಶನ್, ಕಾಳಲಾದೇವು ಮಹಿಳಾ ಸಮಾಜದ ಅಧ್ಯಕ್ಷೆ ಸುಪ್ರಭಾ ಅಭಿನಂದನ್, ಜೈನ ಮಂಡಳಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೇತನ್, ಭಾರತೀಯ ಜೈನ್ ಮಿಲನ್ ವಲಯ 8 ರ ಮೈಸೂರು ವಿಭಾಗದ ನಿರ್ದೇಶಕ ಎಚ್.ಡಿ.ಜಯೇಂದ್ರ ಕುಮಾರ್, ವೀರ್ ಪ್ರಮೋದ್ ಕುಮಾರ್, ತೇರಾಪಂಥ್ ಸಮಾಜದ ಅಧ್ಯಕ್ಷ ಸುರೇಂದ್ರ ತಾಥೇಡ್ ಮತ್ತಿರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಪ್ರವಾಸಿ ಸ್ಥಳ ಘೋಷಣೆಗೆ ವಿರೋಧ
ಶ್ರೀ ಸಮ್ಮೇದ ಶಿಖರ್ಜಿ ಸಕಲ ಜೈನ ಸಮಾಜದ ತೀರ್ಥಕ್ಷೇತ್ರವಾಗಿದ್ದು ಪ್ರತಿಯೊಬ್ಬ ಜೈನ ಧರ್ಮಿಯೂ ತನ್ನ ಜೀವಿತ ಕಾಲದಲ್ಲಿ ಒಮ್ಮೆಯಾದರೂ, ಈ ಕ್ಷೇತ್ರದ ದರ್ಶನ ಮಾಡುವುದು ರೂಢಿಯಲ್ಲಿದೆ. ಈ ಶಿಖರ ಏರಿ ದರ್ಶನ ಮಾಡಲು ಸುಮಾರು 27 ಕಿ.ಮೀ. ಕಾಲ್ನಡಿಗೆಯಲ್ಲೇ ಕ್ರಮಿಸಬೇಕಾಗುತ್ತದೆ. ಬರಿಗಾಲಿನಲ್ಲಿ ಕಲ್ಲು
ಮುಳ್ಳುಗಳ ದಾರಿಯಲ್ಲಿ ಶಿಖರವನ್ನೇರಿ ತೀರ್ಥಂಕರರ ಮೋಕ್ಷ ಸ್ಥಳವನ್ನು ದರ್ಶನ ಮಾಡಿ ತಮ್ಮ ಜನ್ಮ ಸಾರ್ಥಕಗೊಳಿಸಿಕೊಳ್ಳುತ್ತಾರೆ. ಆದರೆ, ಇತ್ತೀಚೆಗೆ ಜಾರ್ಖಂಡ್ ಸರ್ಕಾರದ ಪ್ರಸ್ತಾವನೆಗೆ ಸ್ಪಂದಿಸಿ ಕೇಂದ್ರ ಸರ್ಕಾರ ಶಿಖರ್ಜಿಯನ್ನು ಪ್ರವಾಸಿ ಸ್ಥಳವಾಗಿ ಘೋಷಿಸಿ ಆದೇಶಿಸಿದೆ. ಇದರಿಂದ ಜೈನ ಧರ್ಮೀಯರ ಆರಾಧ್ಯ ಸ್ಥಳ ಪಾವಿತ್ರ್ಯವನ್ನು ಕಳೆದುಕೊಳ್ಳುವುದರಿಂದ ಇಡೀ ಜೈನ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಪ್ರತಿಭಟನಾಕಾರರು
ಅಸಮಾಧಾನ ಹೊರ ಹಾಕಿದರು.