ಮೈಸೂರು: ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಈಗಾಗಲೇ ಜಾರಿಯಲ್ಲಿದ್ದು, ರಾಜಕೀಯ ಪಕ್ಷಗಳು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ರಾಜಕೀಯ ಪಕ್ಷಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಕುರಿತಂತೆ ನಿಯಮಗಳನ್ನು ರೂಪಿಸಿದ್ದು, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕಾಗಿ ನಡೆಸುವ ಕಾರ್ಯಕ್ರಮ, ರ್ಯಾಲಿ ಕುರಿತಂತೆ ಆಯಾಯ ವಿಧಾನಸಭಾ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಬೇಕು ಎಂದರು.
ಅಧಿಕಾರಿಗಳ ಗಮನಕ್ಕೆ ತನ್ನಿ: ಚುನಾವಣಾ ಪ್ರಚಾರಕ್ಕಾಗಿ ಅಭ್ಯರ್ಥಿಗಳು ಮಾಡುವ ವೆಚ್ಚದ ವಿವರಗಳನ್ನು ಚುನಾವಣಾಧಿಕಾರಿಗಳಿಗೆ ನೀಡಬೇಕು ಅಭ್ಯರ್ಥಿಗಳು ಯಾವ ಯಾವ ಹಂತದಲ್ಲಿ ಖರ್ಚು ವೆಚ್ಚ ಮಾಡಿರುವುದರ ಬಗ್ಗೆ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂಬ ವಿವರವನ್ನು ನೀಡಲಾಗುವುದು. ಅಭ್ಯರ್ಥಿಗಳಿಗೆ ರಾಜಕೀಯ ಪಕ್ಷದ ಮುಖಂಡರುಗಳಿಗೆ ಯಾವುದೇ ರೀತಿಯ ಸಂಶಯ ಮತ್ತು ಗೊಂದಲಗಳು ಇದ್ದಲ್ಲಿ ಆಕ್ಷೇತ್ರದ ಚುನಾವಣಾಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬಹುದು ಎಂದರು.
ಕರಪತ್ರ, ಭಿತ್ತಿಪತ್ರ ಹಾಗೂ ಇತರೆ ಚುನಾವಣಾ ಸಾಮಗ್ರಿಗಳಲ್ಲಿ ಪ್ರಕಾಶಕರ ಹಾಗೂ ಮುದ್ರಕರ ಹೆಸರು, ವಿಳಾಸ ಮುದ್ರಿಸುವುದು ಕಡ್ಡಾಯವಾಗಿರುತ್ತದೆ. ಈ ಕುರಿತ ಘೋಷಣಾ ಪತ್ರವೊಂದನ್ನು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಇ.ವಿ.ಎಂ. ಮತ್ತು ವಿ.ವಿ. ಪ್ಯಾಟ್‌ನ ಕಾರ್ಯನಿರ್ವಹಣೆ ಬಗ್ಗೆ ಅದರಲ್ಲಿ ಮತದಾನ ಮಾಡುವುದರ ಬಗ್ಗೆ ಅಣಕು ಮತದಾನ ಮಾದರಿಯನ್ನು ರಾಜಕೀಯ ಪಕ್ಷದ ಮುಖಂಡರುಗಳಿಗೆ ಪರಿಚಯಿಸಿದರು. ರಾಜಕೀಯ ಪಕ್ಷದ ಮುಖಂಡರುಗಳು ಅಣಕು ಮತದಾನ ಮಾಡಿ ತಮ್ಮಲ್ಲಿರುವ ಸಂಶಯ ಮತ್ತು ಗೊಂದಲಗಳ ಬಗ್ಗೆ ಪರಿಹಾರ ಕಂಡುಕೊಂಡರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಟಿ. ಯೋಗೇಶ್, ಜಿಪಂ ಯೋಜನಾ ನಿರ್ದೇಶಕ ಪ್ರಭುಸ್ವಾಮಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಲೋಕನಾಥ್, ಚುನಾವಣಾ ಶಾಖೆಯ ರಾಮ್ ಪ್ರಸಾದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಇಲಾಖೆಯ ಸಹಾಯಕ ನಿರ್ದೇಶಕ ರಾಜುಆರ್. ರಾಜಕೀಯ ಪಕ್ಷದ ಮುಖಂಡರುಗಳಾದ ಆರ್. ಮೂರ್ತಿ, ದೀಪಕ್‌ರಾಜ್, ಪಿ.ಎಸ್. ರಾಜಶೇಖರಮೂರ್ತಿ, ಆರ್.ಗಿರೀಶ್, ಎನ್. ನರಸಿಂಹಸ್ವಾಮಿ ಸೇರಿದಂತೆ ಇನ್ನಿತರರು ಹಾಜರಿದ್ದರು.