ಬೆಂಗಳೂರು: ಪಿಂಚಣಿಯು ಸರ್ಕಾರಿ ನೌಕರರ ಹಕ್ಕಾಗಿದ್ದು, ಸರ್ಕಾರ ಅದನ್ನು ಕಸಿದುಕೊಳ್ಳಬಾರದು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ ವತಿಯಿಂದ ಶುಕ್ರವಾರ ಗಾಂಧಿ ಭವನದಲ್ಲಿ ಆಯೋಜಿಸಿದ್ದ “2006 ರಿಂದ ಸರ್ಕಾರಿ-ಅರೆ ಸರ್ಕಾರಿ ಸೇವೆಗೆ ಸೇರಿ ಮರಣ ಹೊಂದಿರುವ ಎನ್‌ಪಿಎಸ್ ನೌಕರರ ಅವಲಂಭಿತರ ಹಾಗೂ ನಿವೃತ್ತ ಎನ್ ಪಿಎಸ್ ನೌಕರರ ಸಮಸ್ಯೆಗಳ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಪಿಂಚಣಿ ಸೌಲಭ್ಯವು ನೌಕರರ ಹಕ್ಕು ಎಂದು ಸುಪ್ರಿಂ ಕೋರ್ಟ್ ಹೇಳಿದೆ. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎನ್‌ಪಿಎಸ್ ಜಾರಿಗೊಳಿಸುವ ಮೂಲಕ ಪಿಂಚಣಿ ಹಕ್ಕನೇ ಕಸಿದುಕೊಳ್ಳಲು ಹೊರಟಿದೆ. ಈ ನಡೆಗೆ ನನ್ನ ವಿರೋಧವಿದ್ದು, ಸರ್ಕಾರ ನೌಕರರ ಭವಿಷ್ಯದ ಈ ಕುರಿತು ಚಿಂತನೆ ನಡೆಸಬೇಕು ಎಂದರು.
ಸರ್ಕಾರವು ಎನ್‌ಪಿಎಸ್ ಜಾರಿಗೊಳಿಸಿ ಸರ್ಕಾರಿ ನೌಕರರನ್ನು ಎರಡು ಗುಂಪುಗಳನ್ನಾಗಿ ಮಾಡಿ, ಒಂದು ಗುಂಪಿಗೆ ನಿರಂತರ ಅನ್ಯಾಯ ಮಾಡುತ್ತಿದೆ. ಈ ಅನ್ಯಾಯ ಸರಿಪಡಿಸಲು ನಡೆಯುವ ಹೋರಾಟಗಳಿಗೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತಾರಾಮ ಮಾತನಾಡಿ, ಎನ್‌ಪಿಎಸ್ ರದ್ದು ಮಾಡಿ ಹಳೆ ಪಿಂಚಣಿ ಯೋಜನೆ ಜಾರಿಗೆ ತರಬೇಕು ಮತ್ತು ಸರ್ಕಾರ ನಿವೃತ್ತಿ ಮತ್ತು ಮರಣ ಉಪಧನ (ಡಿಸಿಆರ್‌ಜಿ)ವನ್ನು 2018ರಿಂದ ಜಾರಿಗೊಳಿಸಿದ್ದು, ಇದು 2006ರಿಂದ ಅನ್ವಯವಾಗುವಂತೆ ತಿದ್ದುಪಡಿ ಮಾಡಿ ಜಾರಿಗೊಳಿಸಬೇಕು. ದೆಹಲಿ ಸರ್ಕಾರವು ಎನ್‌ಪಿಎಸ್ ರದ್ದುಗೊಳಿಸಲು ಅಗತ್ಯ ಕ್ರಮಕೈಗೊಂಡಿದೆ.
ಇದೇ ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ ಕೂಡಾ ಎನ್‌ಪಿಎಸ್ ರದ್ದುಗೊಳಿಸಿ, ಮತ್ತೆ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕು. ಎನ್‌ಪಿಎಸ್ ಯೋಜನೆಗೆ ಸುಮಾರು 2.10 ಲಕ್ಷ ನೌಕರರು ಒಳಪಡುತ್ತಾರೆ. ಇದು ಎಲ್ಲಾ ನೌಕರರಿಗೂ ಮಾರಕವಾಗಿದೆ.
ಇದನ್ನು ವಿರೋಧಿಸಿ ಸ್ವಾತಂತ್ರ ಉದ್ಯಾನದಲ್ಲಿ ಮುಂಬರುವ ದಿನಗಳಲ್ಲಿ ಬೃಹತ್ ಪ್ರತಿಭಟನೆಯೂ ಮಾಡಲಾಗಿದೆ ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ನಾಗನಗೌಡ, ಉಪಾಧ್ಯಕ್ಷ ಸಿದ್ದಪ್ಪ ಸಂಗಣ್ಣನವರ, ಚಂದ್ರಕಾಂತ ತಳವಾರ, ಶಾರಾದ ನಾಗೇಶ್ ಉಪಸ್ಥಿತರಿದ್ದರು.