Advertisement
ಅಲ್ಲದೆ, ಮೊಬೈಲ್‌ನಲ್ಲಿ ಸ್ವೀಕರಿಸಿದ ಸಂದೇಶವನ್ನು ಮತ್ತೂಬ್ಬರಿಗೆ ಕಳುಹಿಸಿ ಆ ಸಂದೇಶದಿಂದ ಯಾರಿಗಾದರೂ ಪ್ರಾಣಹಾನಿಯಾದರೆ ಸಂದೇಶ ಕಳುಹಿಸಿದವರ ವಿರುದ್ಧವೂ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಮಕ್ಕಳ ಅಪಹರಣಕಾರರು ಕಾಣಿಸಿಕೊಂಡಿದ್ದಾರೆ ಎಂಬ ವದಂತಿ ಸುಳ್ಳು. ಸಾರ್ವಜನಿಕರು ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು. ಅಂತಹ ಯಾವುದೇ ಗುಂಪುಗಳು ರಾಜ್ಯದಲ್ಲಿ ಇಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಠಾಣಾ ವ್ಯಾಪ್ತಿಯ ಗ್ರಾಮ, ಹಳ್ಳಿ ಪ್ರದೇಶಗಳಲ್ಲಿ ಆಯಾ ಠಾಣೆಯ ಬೀಟ್ ಸಿಬ್ಬಂದಿ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಸರ್ಕಾರಿ ಶಾಲಾ ಶಿಕ್ಷಕರು ಹಾಗೂ ಊರಿನ ಮುಖ್ಯಸ್ಥರಿಗೆ ಮನವರಿಕೆ ಮಾಡಿಕೊಡುವಂತೆ ವಲಯ ಐಜಿಪಿಗಳು ಹಾಗೂ ವರಿಷ್ಠಾಧಿಕಾರಿಗಳಿಗೆ ಹೇಳಲಾಗಿದೆ.
Related Articles
Advertisement
ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ ಹಾಗೂ ಬಳ್ಳಾರಿಯಲ್ಲಿ ವದಂತಿ ಹರಡುತ್ತಿದ್ದಂತೆ ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಜಿಲ್ಲಾವರಿಷ್ಠಾಧಿಕಾರಿಗಳಿಗೆ ಹೇಳಲಾಗಿತ್ತು. ಇನ್ನು ಬೆಂಗಳೂರಿನಲ್ಲಿ ಮಕ್ಕಳ ಕಳ್ಳ ಎಂದು ನಡೆದ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬಿಟ್ ಪೊಲೀಸರ ಮೂಲಕ ಅರಿವು ಮೂಡಿಸುವ ಕಾರ್ಯಕ್ಕೆ ಡಿಸಿಪಿಗಳಿಗೆ ಸೂಚಿಸಲಾಗಿದೆ.
ಒಂದು ವೇಳೆ ನಿಮ್ಮ ಗ್ರಾಮ ಅಥವಾ ಪ್ರದೇಶದಲ್ಲಿ ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸ್ ಸಹಾಯವಾಣಿ 100ಕ್ಕೆ ಕರೆ ಮಾಡಬೇಕು ಹಾಗೂ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಯಾವುದೇ ಸಂದರ್ಭದಲ್ಲಿಯೂ ಹಲ್ಲೆ ಅಥವಾ ಕೊಲೆ ಯತ್ನ ಕೃತ್ಯ ವೆಸಗಬಾರದು. ಒಂದು ವೇಳೆ ಕಾನೂನು ಕೈಗೆತ್ತಿಕೊಂಡರೆ ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಹತ್ಯೆ ಆರೋಪಿಗಳ ಬಂಧನಈಮಧ್ಯೆ, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮಕ್ಕಳ ವದಂತಿಗೆ ರಾಜಸ್ಥಾನ ಮೂಲದ ಕಾಲುರಾಮ್‌ನನ್ನು ಹತ್ಯೆಗೈದ ನಾಲ್ವರು ಮಹಿಳೆಯರು, ಇಬ್ಬರು ಕಾನೂನು ಸಂಘರ್ಘಕ್ಕೊಳಗಾದವರು ಸೇರಿ ಒಟ್ಟು 14 ಮಂದಿಯನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ. ಮಕ್ಕಳ ಕಳ್ಳ ಎಂಬ ವದಂತಿ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವ್ಯಕ್ತಿಯ ಮುಖ ಚಹರೆಯನ್ನು ಈ ವ್ಯಕ್ತಿ ಹೊಲುತ್ತಾನೆ ಎಂಬ ಕಾರಣಕ್ಕೆ ಕೆಲ ಯುವಕರ ಗುಂಪು ಹಾಗೂ ಮಹಿಳೆಯರು ರಾಜಸ್ಥಾನದ ಕಾಲುರಾಮ್ ಮೇಲೆ ಬ್ಯಾಟ್, ಕಬ್ಬಿಣ ರಾಡ್ ಹಾಗೂ ಇತರೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಈ ಕೃತ್ಯದ ವಿಡಿಯೋ ವೈರಲ್ ಆಗಿದ್ದು, ಇದನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ವಲಯ ಡಿಸಿಪಿ ರವಿ ಡಿ. ಚೆನ್ನಣ್ಣನವರ್ ಹೇಳಿದ್ದಾರೆ. ರಾಜ್ಯದಲ್ಲಿ ಮಕ್ಕಳ ಅಪಹರಣ ಮಾಡಲಾಗುತ್ತಿದೆ ಎಂದು ಹಬ್ಬಿರುವ ವದಂತಿಗೆ ಯಾರೂ ಕಿವಿಗೊಡುವ ಅವಶ್ಯಕತೆ ಇಲ್ಲ. ಇದು ಊಹಾಪೋಹವಾಗಿದ್ದು, ಯಾವ ಪೋಷಕರು ಹೆದರುವುದು ಬೇಡ. ಈ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ, ವದಂತಿ ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ.
– ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಎಲ್ಲೆಲ್ಲಿ ಘಟನೆ?
ಜಮೀನು ಖರೀದಿಗೆ ಹೋದವರ ಮೇಲೆ ಹಲ್ಲೆ
ಗಂಗಾವತಿ ತಾಲೂಕಿನ ಕಾರಟಗಿ ವ್ಯಾಪ್ತಿಯ ಗುಂಡೂರು ಗ್ರಾಮದಲ್ಲಿ ರವಿಕುಮಾರ ಸೇರಿದಂತೆ ಮೂವರು ಜಮೀನು ಖರೀದಿಗೆಂದು ಕಾರಿನಲ್ಲಿ ತೆರಳಿದ್ದರು. ಗ್ರಾಮಸ್ಥರು ಅವರನ್ನು ಮಕ್ಕಳ ಕಳ್ಳರೆಂದು ಭಾವಿಸಿ ವಾಹನ ತಡೆದು ಹಿಗ್ಗಾಮುಗ್ಗ ಥಳಿಸಿದ್ದಾರೆ. ನಾವು ಮಕ್ಕಳ ಕಳ್ಳರಲ್ಲ ಎಂದು ಬೇಡಿಕೊಂಡರೂ ವಾಹನಕ್ಕೆ ಬಂಡಿ ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ನಾಗಾಸಾಧುಗಳ ವಿರುದ್ಧ ದೂರು
ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ವಾಹನದಲ್ಲಿ ತೆರಳುತ್ತಿದ್ದ ನಾಗಾ ಸಾಧುಗಳನ್ನು ಮಕ್ಕಳ ಕಳ್ಳರೆಂದು ಗ್ರಾಮಸ್ಥರು ಆರೋಪಿಸಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಠಾಣೆ ಸಿಬ್ಬಂದಿ ತಕ್ಷಣ ನಾಗಸಾಧುಗಳ ವಾಹನ ಹಿಂಬಾಲಿಸಿ ಠಾಣೆಗೆ ಕರೆ ತಂದು ವಿಚಾರಣೆ ಮಾಡಿ ಅವರು ಮಕ್ಕಳ ಕಳ್ಳರಲ್ಲ ಎನ್ನುವುದನ್ನು ಖಚಿತ ಪಡಿಸಿಕೊಂಡು ಬಿಟ್ಟು ಕಳುಹಿಸಿದ್ದಾರೆ. ಹೀರಾಪುರದಲ್ಲಿ ಅಮಾಯಕನ ಥಳಿತ
ಕಲಬುರಗಿಯ ಹೀರಾಪುರ ಬಡಾವಣೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕಾಣಿಸಿಕೊಂಡ ಕೂಡಲೇ ಅಲ್ಲಿನ ನಿವಾಸಿಗಳು ಆತನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬುಧವಾರ ಈ ಘಟನೆ ನಡೆದಿದ್ದು, ಥಳಿತಕ್ಕೊಳಗಾದವರು ನೆರೆಯ ಆಂಧ್ರ ಅಥವಾ ತೆಲಂಗಾಣದವರು ಎನ್ನಲಾಗಿದೆ. ಮಾನಸಿಕ ಅಸ್ವಸ್ಥನಂತೆ ಕಾಣುತ್ತಿರುವ ವ್ಯಕ್ತಿಯ ಮೇಲೆ ಬರ್ಮೂಡಾ ಬಿಟ್ಟರೆ ಬೇರೆ ಬಟ್ಟೆಗಳಿರಲಿಲ್ಲ ಎನ್ನಲಾಗಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಾನಸಿಕ ಅಸ್ವಸ್ಥೆ ಮೇಲೂ ಹಲ್ಲೆ
ರಾಯಚೂರು ಜಿಲ್ಲಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿದ್ದ ಮಕ್ಕಳ ಕಳ್ಳರ ವದಂತಿ ಸಾಕಷ್ಟು ಅವಾಂತರ ಸೃಷ್ಟಿಸಿದ್ದು, ಇಬ್ಬರು ಅಮಾಯಕರನ್ನು ಜನರೇ ಥಳಿಸಿದ ಪ್ರಸಂಗ ನಡೆದಿತ್ತು. ನಗರದ ಸಿಯಾತಲಾಬ್‌ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮಾನಸಿಕ ಅಸ್ವಸ್ಥೆಯನ್ನೇ ಮಕ್ಕಳ ಕಳ್ಳಿಯೆಂದು ಭಾವಿಸಿದ ಸ್ಥಳೀಯರು ಆಕೆಯನ್ನು ಅರೆಬೆತ್ತಲೆಗೊಳಿಸಿ ಅಮಾನವೀಯವಾಗಿ ಥಳಿಸಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ತೆರಳಿದ್ದ ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಲಾಗಿತ್ತು. ಮಹಿಳೆಯನ್ನು ರಕ್ಷಿಸಿದ ಪೊಲೀಸರು ರಿಮ್ಸ್‌ಗೆ ದಾಖಲಿಸಿದ್ದರು. ಅದೇ ರೀತಿ ತಾಲೂಕಿನ ಗುಂಜಳ್ಳಿಯಲ್ಲೂ ಚಾಕು ಇಟ್ಟುಕೊಂಡು ಓಡಾಡುತ್ತಿದ್ದ ಮಾನಸಿಕ ಅಸ್ವಸ್ಥನನ್ನು ಕಳ್ಳನೆಂದು ಭಾವಿಸಿ ಥಳಿಸಿದ ಜನ ಪೊಲೀಸರಿಗೆ ಒಪ್ಪಿಸಿದ್ದರು. ಇದು ಜಿಲ್ಲೆಯ ಜನರ ನಿದ್ರಾಭಂಗಕ್ಕೆ ಕಾರಣವಾಗಿದ್ದು, ರಾತ್ರಿಯಿಡಿ ಗ್ರಾಮಗಳಲ್ಲಿ ಜನ ಬಡಿಗೆ ಹಿಡಿದು ಓಡಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಓಡಿ ಹೋದ ಚಾಲಕ
ತಾವರಗೇರಾ ವ್ಯಾಪ್ತಿಯ ಲಿಂಗದಹಳ್ಳಿಯಲ್ಲಿ ಬೊಲೆರೋ ವಾಹನದಲ್ಲಿ ತೆರಳುತ್ತಿದ್ದವರನ್ನೇ ಮಕ್ಕಳ ಕಳ್ಳರೆಂದು ಭಾವಿಸಿದ ಗ್ರಾಮಸ್ಥರು ವಾಹನ ಬೆನ್ನು ಹತ್ತಿದ ಘಟನೆ ಇತ್ತೀಚೆಗೆ ನಡೆದಿತ್ತು. ಗ್ರಾಮಸ್ಥರು ವಾಹನ ಹಿಂಬಾಲಿಸುತ್ತಿರುವುದನ್ನು ನೋಡಿದ ಚಾಲಕ ಭಯಗೊಂಡು ಅಡ್ಡಾದಿಡ್ಡಿ ವಾಹನ ಚಲಾಯಿಸಿ ಓರ್ವ ವ್ಯಕ್ತಿಗೆ ಗುದ್ದಿದ್ದಾನೆ. ನನ್ನ ಮೇಲೆ ಹಲ್ಲೆ ಮಾಡಲು ಬರುತ್ತಿದ್ದಾರೆಂದು ಭಯಗೊಂಡು ಎಧ್ದೋ ಬಿಧ್ದೋ ಎನ್ನುವಂತೆ ವಾಹನ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ.