ತಿ.ನರಸೀಪುರ: ಹಸಿ ಹಾಗೂ ಒಣ ಕಸ ಬೇರ್ಪಡಿಸಿ ಮನೆಯಲ್ಲಿ ಗೊಬ್ಬರ ತಯಾರಿಸುವ ವಿಧಾನವನ್ನು ಪುರಸಭೆ ವತಿಯಿಂದ ಪಟ್ಟಣದ ಪೌರ ಕಾರ್ಮಿಕರ ಕಾಲೋನಿ ನಿವಾಸಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಲಾಯಿತು. ಮನೆಯಲ್ಲಿ ಕಂಡು ಬರುವ ಕಸದಲ್ಲಿ ಒಣಕಸವನ್ನು ಪ್ರತ್ಯೇಕವಾಗಿಟ್ಟು, ಹಸಿ ಕಸವನ್ನು ಪ್ರತಿನಿತ್ಯ ಒಂದು ಪೈಪ್‌ನಲ್ಲಿ ಹಾಕುತ್ತಾ ಹೊದರೆ ಅದು ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ.
ಮೊದಲಿಗೆ ಹಳ್ಳ ತೋಡಿ ಪೈಪು ಅಳವಡಿಸಿ ಸಗಣಿ, ಬೆಲ್ಲ ಹಾಕಿ ಎರಡು ದಿನಗಳ ನಂತರ ಹಸಿ ಕಸ ಹಾಕಬೇಕು. ಸ್ವಲ್ಪ ಮಣ್ಣು ಅಥವಾ ಸಗಣಿ ಬಳಸಬಹುದು. ದಿನದಿಂದ ದಿನಕ್ಕೆ ಕಸ ಕೊಳೆತು ಹೋಗುತ್ತದೆ. ಬೇಕಾದಲ್ಲಿ ಮತ್ತೊಂದು ಪೈಪು ಕೂಡ ಹಾಕಬಹುದು. ಈ ವಿಧಾನದಿಂದ ಕಸ ನಿರ್ವಹಣೆ ಕೂಡ ಸಮರ್ಪಕವಾಗುವುದರ ಜತೆಗೆ ಪರಿಸರವನ್ನು ಸಂರಕ್ಷಿಸಬಹುದು ಎಂದು ಪುರಸಭೆಯ ಪರಿಸರ ಎಂಜಿನಿಯರ್ ಮೈತ್ರಾದೇವಿ ತಿಳಿಸಿದರು.
ಪುರಸಭಾ ವ್ಯಾಪ್ತಿಯ ರಾಚಪ್ಪಾಜಿ ಬಡಾವಣೆ ಹಾಗೂ ಪೌರ ಕಾರ್ಮಿಕರ ಕಾಲೋನಿಯಲ್ಲಿ ಅಳವಡಿಸಲಾಗುತ್ತಿದೆ. ಸಾರ್ವಜನಿಕರೆಲ್ಲರೂ ಕೂಡ ತಮ್ಮ ತಮ್ಮ ಮನೆಗಳಲ್ಲಿ ಈ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡಿದರು. ಈ ವೇಳೆ ಪುರಸಭಾ ಆರೋಗ್ಯಾಧಿಕಾರಿಗಳಾದ ಚೇತನ್‌ಕುಮಾರ್, ಮಹೇಂದ್ರ, ಯೋಜನಾಧಿಕಾರಿ ಕೆಂಪರಾಜು, ಕಂದಾಯಾಧಿಕಾರಿ ಪುಟ್ಟಸ್ವಾಮಿ, ಸಿಡಿಎಸ್ ಭವನದ ಅಧಿಕಾರಿ ಮಹದೇವ್ ಇತರರಿದ್ದರು.
ಕಸವನ್ನು ಗೊಬ್ಬರ ಮಾಡುವ ವಿಧಾನ: ಮನೆಯಲ್ಲಿ ಅಡುಗೆ ಮಾಡುವಾಗ ಬಳಸುವ ತರಕಾರಿಗಳ ತ್ಯಾಜ್ಯ, ಹಣ್ಣುಗಳ ತ್ಯಾಜ್ಯ, ಹಳಸಿದ ಅನ್ನ ಮತ್ತಿತರ ಆಹಾರ ಪದಾರ್ಥಗಳನ್ನು ಹೊರಗೆ ಬಿಸಾಡದೆ ಒಂದೆಡೆ ಸಂಗ್ರಹಿಸಬೇಕು. ಮನೆಯಲ್ಲಿ 6 ಅಡಿ ಉದ್ದ ಹಾಗೂ 8 ಇಂಚು ಸುತ್ತಳತೆಯ ಒಂದು ಕೊಳವೆಯನ್ನು (ಪೈಪ್) ಮನೆಯ ಖಾಲಿ ಜಾಗದಲ್ಲಿ ಒಂದು ಅಡಿ ಆಳದಲ್ಲಿ ಅದನ್ನು ಅಳವಡಿಸಬೇಕು. ಪ್ರತಿದಿನ ಸಿಗುವ ಹಸಿ ಕಸವನ್ನು ಅದರೊಳಗೆ ಹಾಕುತ್ತ ಅದರ ಜತೆಗೆ ಒಂದಿಷ್ಟು ಮಣ್ಣು ಅಥವಾ ಸಗಣಿ ಹಾಕಿದರೆ ಅದು ಕೊಳೆಯುತ್ತ ಬಂದು ಗೊಬ್ಬರವಾಗುತ್ತದೆ ಎಂದು ಪುರಸಭೆ ಪರಿಸರ ಎಂಜಿನಿಯರ್ ಮೈತ್ರಾದೇವಿ ತಿಳಿಸಿದರು.