ಮಹದೇವಪುರ: ಮಿಟಗಾನಹಳ್ಳಿ ಸಮೀಪದ ಕಲ್ಲು ಕ್ವಾರಿಯಲ್ಲಿ ತ್ಯಾಜ್ಯ ಸುರಿಯುವ ಕ್ರಮ ವಿರೋಧಿಸಿ ಗ್ರಾಮಸ್ಥರು ನಡೆಸಿದ ಹೋರಾಟಕ್ಕೆ ಮಣಿದಿರುವ ಬಿಬಿಎಂಪಿ, ಕ್ವಾರಿಗೆ ಘನ ತ್ಯಾಜ್ಯ ವಿಲೇವಾರಿ ಮಾಡುವುದನ್ನು ಸ್ಥಗಿತಗೊಳಿಸಿದೆ.
ಒಂದೂವರೆ ವರ್ಷದಿಂದ ಮಿಟಗಾನಹಳ್ಳಿ ಕಲ್ಲುಕ್ವಾರಿಗಳಲ್ಲಿ ಬೆಂಗಳೂರಿನ ತ್ಯಾಜ್ಯ ಸುರಿಯುತ್ತಿದ್ದು, ಇದರಿಂದ ಆರೋಗ್ಯ ಹಾಗೂ ಜನಜೀವನದ ಮೇಲೆ ಉಂಟಾದ ದುಷ್ಪರಿಣಾಮಗಳಿಂದ ಬೇಸತ್ತ ಕ್ವಾರಿ ಸಮುತ್ತಮುತ್ತಲ ಗ್ರಾಮಸ್ಥರು, ಪಾಲಿಕೆಯ ವಿರುದ್ಧ ಸತತ ಪ್ರತಿ¸ಟನೆ ನಡೆಸಿದ್ದರು. ಈ ನಡುವೆ ತ್ಯಾಜ್ಯ ವಿಲೇವಾರಿಗೆ ಬೇರೆ ಸ್ಥಳ ಗುರುತಿಸಲು ಪಾಲಿಕೆ 3 ತಿಂಗಳ ಗಡುವು ಪಡೆದಿತ್ತು.
ಆದರೆ ಗಡುವು ಮುಗಿದ ನಂತರವೂ ವಿಲೇವಾರಿ ಮುಂದುವರಿದಿದ್ದರಿಂದ ಗ್ರಾಮಸ್ಥರು ಮತ್ತೆ ಹೋರಾಟಕ್ಕಿಳಿದಿದ್ದರು. ಈ ಹಿನ್ನೆಲೆ ಇಂದು ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್, ಆರೋಗ್ಯ ಮತ್ತು ತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ಸರ್ಫರಾಜ್ ಖಾನ್‌ರೋಂದಿಗೆ ಶಾಸಕ ಅರವಿಂದ ಲಿಂಬಾವಳಿ ಮಿಟಗಾನಹಳ್ಳಿ ಕಲ್ಲುಕ್ವಾರಿಗಳಿಗೆ ಬೇಟಿ ನೀಡಿ ಪರಿಶೀಲಿಸಿದರು.
ಪರಿಶೀಲನೆ ನಂತರ ಮಾತನಾಡಿದ ಆಯುಕ್ತ ಮಂಜುನಾಥ್ ಪ್ರಸಾದ್, ಕಣ್ಣೂರು ಪಂಚಾಯಿತಿ ವ್ಯಾಪ್ತಿಯ ಮಿಟ್ಟಗಾನಹಳ್ಳಿ ಕಲ್ಲುಕ್ವಾರಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಬೆಳ್ಳಹಳ್ಳಿ ಕಲ್ಲುಕ್ವಾರಿಯಲ್ಲಿ ತ್ಯಾಜ್ಯ ವಿಲೇವಾರಿ ಮುಂದುವರಿಸುವ ಕುರಿತು ಸ್ಥಳೀಯ ಶಾಸಕ ಹಾಗೂ ಕೃಷಿ ಸಚಿವ ಕೃಷ್ಣಬೈರೇಗೌಡರ ಬಳಿ ಚರ್ಚಿಸುವುದಾಗಿ ಹೇಳಿದರು.
ವಿಶೇಷ ಆಯುಕ್ತ ಸರ್ಫರಾಜ್ ಖಾನ್ ಮಾತನಾಡಿ, ಸದ್ಯ ಕ್ವಾರಿಗಳಲ್ಲಿನ ಲಿಚೆಟ್ ದ್ರಾವಣವನ್ನು ಹೊರ ತೆಗೆದು ಸಂಸ್ಕರಿಸಲಾಗುವುದು. ಮಿಥೇನ್ ಸೇರಿ ಇತರೆ ಗ್ಯಾಸ್ ಸಹ ಹೊರಹಾಕಿ, ಕಟ್ಟಡ ತ್ಯಾಜ್ಯ ಹಾಗೂ ಮಣ್ಣಿನಿಂದ ಕ್ವಾರಿಯನ್ನು ಮುಚ್ಚಿ, ಆರು ತಿಂಗಳಲ್ಲಿ ಕ್ವಾರಿ ಪ್ರದೇಶವನ್ನು ಉದ್ಯಾನವನ್ನಾಗಿ ಅಭಿವೃದ್ಧಿಪಡಿಸುವುದಾಗಿ ಹೇಳಿದರು.