ಕಲಬುರಗಿ: ಬೇರೆ ಪಕ್ಷದ ಶಾಸಕರು ಬಿಜೆಪಿಗೆ ಬಂದು ಜಾತ್ರೆ ಮಾಡಿಕೊಂಡು ಹೋಗುತ್ತಾರೆ ಎಂಬ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಇಂತಹ ಮಾತುಗಳನ್ನಾಡುವುದು ಸರಿಯಲ್ಲ. ಈ ರೀತಿ ಮಾತನಾಡಿದವರು ಎಲ್ಲೆಲ್ಲಿ ಹೋಗಿ ಬಂದಿದ್ದಾರೆ ಎಂದು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮೇಲೆ ಪ್ರೀತಿ, ವಿಶ್ವಾಸ ಇಟ್ಟುಕೊಂಡು ಬಂದವರ ಬಗ್ಗೆ ಇಂತಹ ಮಾತುಗಳನ್ನಾಡಬಾರದು. ಅವರು ಯಾರಾದರೂ ಬಹಿರಂಗವಾಗಿ ಪಕ್ಷ ಬಿಟ್ಟು ಹೋಗುತ್ತೇವೆ, ಜಾತ್ರೆ ಮಾಡಿಕೊಂಡು ಹೋಗುತ್ತೇವೆ ಅಂತ ಹೇಳಿದ್ದಾರಾ? ಪ್ರತಿಯೊಬ್ಬ ಶಾಸಕರು ಎರಡೂವರೆ ಲಕ್ಷ ಜನರಿಂದ ಮತ ಹಾಕಿಸಿಕೊಂಡು ಗೆದ್ದಿರುತ್ತಾರೆ. ಅವರ ಕುರಿತು ಈ ರೀತಿ ಹೇಳುವುದು ಸೂಕ್ತವಲ್ಲ ಎಂದರು.
ಇದನ್ನೂ ಓದಿ:ರಾಜ್ಯದಲ್ಲಿ ಇಂದು 48,905 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 39 ಮಂದಿ ಬಲಿ
ಯಾವುದೋ ಹೋಟೆಲ್‌ನಲ್ಲಿ ಬೇರೆ-ಬೇರೆ ಪಕ್ಷದವರು ಸೇರಿದರು ಎಂಬುವುದಕ್ಕೇ ಪಕ್ಷ ಬಿಡುತ್ತಾರೆ ಅಂತ ಹೇಳಲೂ ಆಗಲ್ಲ. ರಾಜಕಾರಣಿಗಳು ಪರಸ್ಪರ ವೈರಿಗಳಲ್ಲ. ಬಿಜೆಪಿಗೆ ಭವಿಷ್ಯವಿದೆ. ಈ ಪಕ್ಷದ ಕಾರ್ಯಕರ್ತರಾಗಿರುವುದೇ ನಮಗೆ ಸ್ವಾಭಿಮಾನ ಮತ್ತು ಗೌರವ. ಕಾಂಗ್ರೆಸ್ ಮುಳುಗುವ ಹಡಗು. ಆ ಪಕ್ಷಕ್ಕೆ ಯಾರೂ ಹೋಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ರಮೇಶ ಜಾರಕಿಹೊಳಿ ಈಗಾಗಲೇ ಹೇಳಿದಂತೆ ಬಿಜೆಪಿಗೆ ಬೇರೆ ಪಕ್ಷದ ಶಾಸಕರು ಬರುತ್ತಾರೆ ವಿನಃ ಬಿಜೆಪಿಯ ಯಾವ ಶಾಸಕರೂ ಹೋಗುವುದಿಲ್ಲ ಎಂದರು.