ವಿಜಯಪುರ: ಕ್ರಿಯಾಶೀಲ ಕೆಲಸಗಾರರನ್ನು ಬೆಂಬಲಿಸಿ ಪ್ರೋತ್ಸಾಹಿಸಬೇಕೇ ಹೊರತು ಕಾಲೆಳೆಯುವ ಕೆಲಸ ಮಾಡಬಾರದು ಎಂದು ಯರನಾಳ ಗುರುಸಂಗನಬಸವ ಶ್ರೀಗಳು ಹೇಳಿದರು.
ನಗರದಲ್ಲಿ ಬಿಎಲ್‌ಡಿಇ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕಾಲೆಳೆಯುವ ಘಟನೆಗಳು ಹೆಚ್ಚಾಗಿ ನಡೆಯುತ್ತಿರುವುದು ವಿಪರ್ಯಾಸ. ಅಭಿವೃದ್ಧಿ ಕೆಲಸ ಮಾಡುವವರನ್ನು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ಬಂಥನಾಳ ಶಿವಯೋಗಿಗಳು ಅನಾರೋಗ್ಯದ ನಡುವೆಯೂ ಪ್ರವಚನಗಳ ಮೂಲಕ ಸಂಸ್ಥೆ ಕಟ್ಟಿದ್ದಾರೆ. ಡಾ| ಫ.ಗು. ಹಳಕಟ್ಟಿ ತಮ್ಮ ಆಸ್ತಿ ಮಾರಾಟ ಮಾಡಿ ವಚನ ಸಾಹಿತ್ಯ ಸಂಗ್ರಹಿಸಿದ್ದಾರೆ. ಬಿ.ಎಂ.ಪಾಟೀಲ ಸಂಸ್ಥೆ ಅಭಿವೃದ್ಧಿಗಾಗಿ ತಮ್ಮ ಆಸ್ತಿ ಮಾರಾಟ ಮಾಡಿದ್ದಾರೆ. ತಮಗಾಗಿ ಬದುಕುವವರನ್ನು ಸಮಾಜ ನೆನಪಿಡುವುದಿಲ್ಲ. ಆದರೆ ಜನರಿಗಾಗಿ ಬದುಕುವವರನ್ನು ಸಮಾಜ ಎಂದೂ ಮರೆಯುವುದಿಲ್ಲ. ನಮ್ಮ ಬದುಕು ಇತರರಿಗೆ ಮಾದರಿಯಾಗಿರಬೇಕು ಎಂಬುದನ್ನು ಈ ತ್ರಿಮೂರ್ತಿಗಳು ಸಾಧಿಸಿ ತೋರಿಸಿದ್ದಾರೆ ಎಂದು ಸ್ಮರಿಸಿದರು.
ಸಂಸ್ಥೆ ಹಾಲಿ ಅಧ್ಯಕ್ಷರಾದ ಮಾಜಿ ಸಚಿವ ಎಂ.ಬಿ.ಪಾಟೀಲ ಅವರು ಹಿರಿಯರು ಹಾಕಿಕೊಟ್ಟ ಹಾದಿಯಲ್ಲೇ ಸಮರ್ಥವಾಗಿ ಸಂಸ್ಥೆ ಕಟ್ಟುತ್ತಿದ್ದಾರೆ. ಅಲ್ಲದೇ ಬಿಎಲ್‌ಡಿಇ ಸಂಸ್ಥೆ ಬೆಳೆಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡಿದ್ದಾರೆ. ಜಲ ಸಂಪನ್ಮೂಲ ಸಚಿವರಾಗಿಯೂ ಎಂ.ಬಿ. ಪಾಟೀಲ ವಿಜಯಪುರ ಜಿಲ್ಲೆಗೆ ನೀರಾವರಿ ಸೌಲಭ್ಯ ಕಲ್ಪಿಸಿ, ಎಲ್ಲೆಡೆ ಹಸಿರು ಸಮೃದ್ಧಿ ರೂಪಿಸಿದ್ದಾರೆ. ಕೆಲಸ ಮಾಡುವವರಿಗೆ ದೇವರು ಸದಾ ಬೆನ್ನ ಹಿಂದೆ ಇರುತ್ತಾನೆ ಎಂದು ಶ್ಲಾಘಿ ಸಿದರು.
ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯ ಕುಲಪತಿ ಡಾ| ಆರ್.ಎಸ್. ಮುಧೋಳ ಮಾತನಾಡಿ, ಶತಮಾನದ ಹಿಂದೆ ಆರಂಭವಾದ ಬಿಎಲ್‌ಡಿಇ ಸಂಸ್ಥೆ ಇಂದು ದೇಶ-ವಿದೇಶಗಳಲ್ಲೂ ಹೆಸರು ಮಾಡಿದೆ. ಅಂದು ವಿಜಯಪುರ, ಬೆಳಗಾವಿ, ಬಾಗಲಕೋಟೆ, ಬಳ್ಳಾರಿ ಸೇರಿದಂತೆ ವಿವಿಧ ಮಠಾಧಿಧೀಶರ ನೇತೃತ್ವದಲ್ಲಿ ಆರಂಭವಾದ ಸಂಘ-ಸಂಸ್ಥೆಗಳಿಂದಾಗಿ ಇಂದು ಉತ್ತರ ಕರ್ನಾಟಕದ ಭಾಗದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಯಾಗಿದೆ. ಮಾಜಿ ಸಚಿವ ಎಂ.ಬಿ. ಪಾಟೀಲ ಮುಂದಾಲೋಚನೆಯಿಂದಾಗಿ ಈಗ ಈ ಭಾಗದಲ್ಲಿ ರೈತರಿಗೆ ನೀರಾವರಿ ಸೌಲಭ್ಯ ದೊರಕಿದೆ. ಅವರ ಸಮಾಜಪರ ಕಾಳಜಿಯಿಂದಾಗಿ ಎಲ್ಲ ಜನರಿಗೂ ಬಿಎಲ್‌ಡಿಇ ಸಂಸ್ಥೆಯಿಂದಲೂ ಉತ್ತಮ ಸೌಲಭ್ಯಗಳು ದೊರಕುವಂತಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಕನ್ನಡ ಹಬ್ಬಕ್ಕೆ ಗೀತ ಗಾಯನದ ಮೆರಗು
ಬಿಎಲ್‌ಡಿಇ ಸಂಸ್ಥೆಯ ಕಾನೂನು ಸಲಹೆಗಾರ ಸುರೇಶ ಹಕ್ಕಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಂಸ್ಥೆ ಪ್ರತಿಭಾವಂತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಗೀತಾ ಹಿರೇಮಠ ವಚನ ಗಾಯನ ನಡೆಸಿಕೊಟ್ಟರು. ಬಿಎಲ್‌ಡಿಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯ ವಿದ್ಯಾರ್ಥಿಗಳು ಸಂಸ್ಥಾ ಗೀತೆ ಹಾಡಿದರು. ಬಿಎಲ್‌ಡಿಇ ಎವಿಎಸ್ ಆಯುರ್ವೇದ ಮಹಾವಿದ್ಯಾಲಯ ಪ್ರಾಚಾರ್ಯ ಡಾ| ಸಂಜಯ ಕಡ್ಲಿಮಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಬಿಎಲ್‌ಡಿಇ ಸಂಸ್ಥೆ ಆಡಳಿತಾಧಿಕಾರಿ ಡಾ| ರಾಘವೇಂದ್ರ ಕುಲಕರ್ಣಿ ಉಪಸ್ಥಿತರಿದ್ದರು. ಡಾ| ಡಿ.ಎನ್. ಧರಿ ಹಾಗೂ ಡಾ| ರೇಣುಕಾ ತೆನಹಳ್ಳಿ ನಿರೂಪಿಸಿದರು. ಡಾ| ಎಂ.ಎಚ್. ಬಿರಾದಾರ ವಂದಿಸಿದರು.
111 ವರ್ಷಗಳ ಹಿಂದೆ ಆರಂಭವಾದ ಬಿಎಲ್ ಡಿಇ ಸಂಸ್ಥೆ ಅಜ್ಞಾನ, ಮೌಡ್ಯ, ದಾರಿದ್ರ್ಯ ಹೋಗಲಾಡಿಸಲು ಜ್ಞಾನದ ದೀವಿಗೆಯಂತೆ ಕೆಲಸ ಮಾಡಿದೆ. ಈ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆಯಲು ಬಂಥನಾಳ ಶಿವಯೋಗಿಗಳು, ವಚನ ಪಿತಾಮಹ ಡಾ| ಫ.ಗು. ಹಳಕಟ್ಟಿ, ಬಿ.ಎಂ. ಪಾಟೀಲ ಅವರೆಲ್ಲ ಬಿಎಲ್‌ಡಿಇ ಸಂಸ್ಥೆ ಅಭ್ಯುದಯದಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ.
-ಗುರುಸಂಗನಬಸವ ಶ್ರೀ, ಯರನಾರ