ನವದೆಹಲಿ: ಗೋ ರಕ್ಷಣೆ ಹೆಸರಲ್ಲಿ ನಡೆಯುವ ಹಿಂಸೆಯನ್ನು ಕೇಂದ್ರ ಅಥವಾ ಯಾವುದೇ ರಾಜ್ಯ ಸರ್ಕಾರ ಬೆಂಬಲಿಸಬಾರದು. ಬದಲಿಗೆ, ಗೋ ರಕ್ಷಣೆ ಹೆಸರಲ್ಲಿ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು. ಅವರನ್ನು ಯಾವುದೇ ಕಾರಣಕ್ಕೂ ರಕ್ಷಿಸಬಾರದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಸೂಚನೆ ನೀಡಿದೆ.
ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಗೋರಕ್ಷಣೆ ಕುರಿತ “ಹಿಂಸಾತ್ಮಕ’ ವಿಡಿಯೋ, ಭಾವಚಿತ್ರಗಳನ್ನು ಕೂಡಲೇ ತೆಗೆದುಹಾಕಲು ಕ್ರಮ ಕೈಗೊಳ್ಳುವಂತೆ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ನ್ಯಾಯಪೀಠ ಆದೇಶಿಸಿದೆ. ಈ ಕುರಿತು ನ್ಯಾಯಪೀಠಕ್ಕೆ ಮಾಹಿತಿ ನೀಡಿದ ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್, “ಗೋವಿನ ಹೆಸರಿನಲ್ಲಿ ನಡೆಯುವ ಯಾವುದೇ ಹಿಂಸೆಯನ್ನು ಸರ್ಕಾರ ಸಹಿಸುವುದಿಲ್ಲ. ಹಾಗೇ, ಕಾನೂನು, ಸುವ್ಯವಸ್ಥೆ ಕಾಪಾಡಿಕೊಳ್ಳುವುದು ಆಯಾ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದ್ದು, ಇದರಲ್ಲಿ ಕೇಂದ್ರ ಹಸ್ತಕ್ಷೇಪ ಮಾಡುವುದಿಲ್ಲ. ದೇಶದ ಎಲ್ಲೇ, ಯಾವುದೇ ವ್ಯಕ್ತಿ ಹಿಂಸೆಯಲ್ಲಿ ತೊಡಗಿದ್ದರೂ ಆತನನ್ನು ಶಿಕ್ಷಿಸಲು ಕೇಂದ್ರ ಸಿದ್ಧವಿದ್ದು, ಇಂಥವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ,’ ಎಂದು ಸ್ಪಷ್ಟಪಡಿಸಿದರು.
ಸಾಮಾಜಿಕ ಕಾರ್ಯಕರ್ತ ತೆಹಸೀನ್ ಪೂನಾವಾಲ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಪೀಠ, ಗೋರಕ್ಷಣೆ ಹೆಸರಿನ ಹಿಂಸೆಗಳ ಕುರಿತು ನಾಲ್ಕು ವಾರಗಳ ಒಳಗೆ ವರದಿ ನೀಡುವಂತೆ ಸರ್ಕಾರಗಳಿಗೆ ಆದೇಶಿಸಿ, ಮುಂದಿನ ವಿಚಾರಣೆಯನ್ನು ಸೆ.6ಕ್ಕೆ ಮುಂದೂಡಿತು.
ಕ್ರಮಕ್ಕೆ ಮುಂದು: ಇದೇ ವೇಳೆ ಗೋರಕ್ಷಕರ ಹೆಸರಲ್ಲಿ ಗೋಮಾಂಸ ವ್ಯಾಪಾರಿಗಳೊಂದಿಗೆ ವ್ಯವಹಾರ ಕುದುರಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಮಹಾರಾಷ್ಟ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇತ್ತೀಚೆಗಷ್ಟೇ ಗೋರಕ್ಷಕರೆಂದು ಹೇಳಿಕೊಂಡು ಹಲ್ಲೆ ನಡೆಸುವವರೇ ಸ್ವತಃ ಹಣ ಪಡೆದುಕೊಂಡು ಬೀಫ್ ವ್ಯಾಪಾರಿಗಳೊಂದಿಗೆ ಡೀಲ್ ಮಾಡಿಕೊಳ್ಳುತ್ತಿರುವ ಹಾಗೂ ಅಕ್ರಮ ಗೋಮಾಂಸ ಸಾಗಣೆಗೆ ನೆರವು ನೀಡುತ್ತಿರುವ ಕುಟುಕು ಕಾರ್ಯಾಚರಣೆಯೊಂದು ಬಹಿರಂಗಗೊಂಡಿತ್ತು. ಇದರ ಬೆನ್ನಲ್ಲೇ ಅಂಥವರ ವಿರುದ್ಧ ಕ್ರಮಕ್ಕೆ ಸರ್ಕಾರ ಸಿದ್ಧವಾಗಿದೆ.
ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರ, ಹತ್ಯೆ, ಗೂಂಡಾಗಿರಿ ಘಟನೆಗಳನ್ನು ಆರ್‌ಎಸ್‌ಎಸ್ ಎಂದೂ ಬೆಂಬಲಿಸುವುದಿಲ್ಲ.
– ಮನಮೋಹನ್ ವೈದ್ಯ, ಆರೆಸ್ಸೆಸ್ ಹಿರಿಯ ಮುಖಂಡ