ಧಾರವಾಡ: ಜಿಲ್ಲೆಯನ್ನು ಹಸಿರು ವಲಯಕ್ಕೆ (ಗ್ರೀನ್ ಝೋನ್) ತರಲು ಜಿಲ್ಲಾಡಳಿತವು ಸೋಂಕಿತರ ಪ್ರದೇಶದಲ್ಲಿ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಹೊಸಬರಿಗೆ ಸೋಂಕು ಹರಡಲು ಆಸ್ಪದ ನೀಡಬಾರದು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸೂಚನೆ ನೀಡಿದರು.
ಜಿಪಂನಲ್ಲಿ ಸೋಮವಾರ ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಡಿಸಿ, ಪೊಲೀಸ್ ಆಯುಕ್ತರು, ಎಸ್‌ಪಿ ಮತ್ತು ಸಿಇಒಗಳೊಂದಿಗೆ ಚರ್ಚೆ ನಡೆಸಿದ ಅವರು, ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ನಿಯಂತ್ರಣ ಕ್ರಮಗಳ ಮಾಹಿತಿ ಪಡೆದರು.
ಈ ವೇಳೆ ಮಾತನಾಡಿದ ಸಚಿವ ಜಗದೀಶ ಶೆಟ್ಟರ, ಜಿಲ್ಲೆಯಲ್ಲಿ ಆಸ್ಟ್ರೇಲಿಯಾದಿಂದ ದುಬೈ ಮಾರ್ಗವಾಗಿ ಓರ್ವ ವ್ಯಕ್ತಿ ಹಾಗೂ ದೆಹಲಿಯಿಂದ ಮರಳಿದ ಮತ್ತೋರ್ವರಿಂದ ಪಾಸಿಟಿವ್ ಪ್ರಕರಣಗಳು ವರದಿಯಾದವು. ಜಿಲ್ಲಾಡಳಿತ, ಪೊಲೀಸ್, ಆರೋಗ್ಯ ಇಲಾಖೆ ಪ್ರಯತ್ನದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿಯೂ ಪರಿಶೀಲನೆ ನಡೆಸಲಾಗುತ್ತಿದೆ. ಎಲ್ಲಿಯೂ ಯಾವುದೇ ರೀತಿಯ ತೊಂದರೆ ಇಲ್ಲ. ಗ್ರಾಮೀಣ ಭಾಗದಲ್ಲಿ ಹಂತ ಹಂತವಾಗಿ ಆರ್ಥಿಕ ಚಟುವಟಿಕೆ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಜಿಲ್ಲೆಯಲ್ಲಿ ದುರ್ಬಲ ಆರೋಗ್ಯವಿರುವವರ ಸಮೀಕ್ಷೆ ನಡೆಸಲಾಗುತ್ತಿದೆ. ಬಿಪಿ, ಶುಗರ್, ಡಯಾಲಿಸಿಸ್, ಕ್ಷಯ, ಎಚ್‌ಐವಿ ರೋಗಿಗಳ ಮೇಲೆ ನಿಗಾ ಇರಿಸಿ ಸೂಕ್ತ ಚಿಕಿತ್ಸೆ ಮುಂದುವರಿಸಲಾಗಿದೆ. ಕೋವಿಡ್ ಪಾಸಿಟಿವ್ ಇರುವ 9 ಪ್ರಕರಣಗಳಲ್ಲಿ ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ, ಸದ್ಯ 7 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರು ಕೂಡ ಗುಣಮುಖರಾಗುತ್ತಿದ್ದಾರೆ. ಕೃಷಿ, ಉದ್ಯೋಗ ಖಾತ್ರಿ ಯೋಜನೆ ಚಟುವಟಿಕೆಗಳು ನಡೆಯುತ್ತಿವೆ ಎಂದು ವಿವರಿಸಿದರು.
ಹು-ಧಾ ಪೊಲೀಸ್ ಆಯುಕ್ತ ಆರ್. ದಿಲೀಪ, ಎಸ್‌ಪಿ ವರ್ತಿಕಾ ಕಟಿಯಾರ್, ಜಿಪಂ ಸಿಇಒ ಡಾ|ಬಿ.ಸಿ. ಸತೀಶ ಇದ್ದರು.