ಕಲಬುರಗಿ: ಜಿಲ್ಲೆಯಲ್ಲಿ ಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ತಾಪಮಾನ ಹೆಚ್ಚಾಗಿರುತ್ತದೆ. ಈ ವರ್ಷ ತಾಪಮಾನ ಇನ್ನೂ ಹೆಚ್ಚಿಗೆ ಆಗುವ ಮುನ್ಸೂಚನೆಗಳಿದ್ದು, ಬಿಸಿಲಿನ ತಾಪಮಾನ ಹೆಚ್ಚಾದಲ್ಲಿ ಸಾರ್ವಜನಿಕರು ಮಧ್ಯಾಹ್ನ 12:00 ಗಂಟೆಯಿಂದ ಸಂಜೆ 4:00 ಗಂಟೆ ವರೆಗೆ ಬಿಸಿಲಿನಲ್ಲಿ ಹೆಚ್ಚು ಸಮಯ ಕಳೆಯಬಾರದು ಎಂದು ಪ್ರಭಾರಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮನವಿ ಮಾಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೇಸಿಗೆಯ ಬಿಸಿಲಿನ ತಾಪದಿಂದ ಆರೋಗ್ಯದ ಮೇಲೆ ಆಗಬಹುದಾದಂಥ ದುಷ್ಪರಿಣಾಮ ತಡೆಯಲು ಕರೆದ ಮುಂಜಾಗೃತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಮುಂದಿನ 20 ದಿನಗಳವರೆಗೆ ಕನಿಷ್ಠ 24-25 ಹಾಗೂ ಗರಿಷ್ಠ 40ರಿಂದ 41 ಡಿಗ್ರಿ ಸೆಲ್ಸಿಯಸ್ ಸರಾಸರಿ ತಾಪಮಾನ ಇರಲಿದೆ.
ಗರಿಷ್ಠ ಮತ್ತು ಕನಿಷ್ಠ ತಾಪಮಾನಕ್ಕೆ ಹೆಚ್ಚಿನ ಅಂತರ ಇರದ ಕಾರಣ ಸೆಕೆ ಹೆಚ್ಚಿಗೆ ಭಾಸವಾಗುತ್ತದೆ. ಜಿಲ್ಲೆಯಲ್ಲಿ ಪ್ರತಿ ವರ್ಷದ ಬೇಸಿಗೆ ಕಾಲಕ್ಕಿಂತ ಪ್ರಸಕ್ತ ವರ್ಷದ ಬೇಸಿಗೆ ಕಾಲ ಹೆಚ್ಚಾಗುವ ಸಾಧ್ಯತೆಗಳಿವೆ. ಮಕ್ಕಳು, ಗರ್ಭಿಣಿಯರು, ವಯಸ್ಸಾದ ಹಿರಿಯರಿಗೆ ಬಿಸಿಲಿನ ತಾಪದಿಂದ ಹೆಚ್ಚಿನ ತೊಂದರೆ ಆಗುವ ಸಾಧ್ಯತೆಗಳಿವೆ ಎಂದರು.
ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾದಲ್ಲಿ ಎಲ್ಲ ಇಲಾಖೆಗಳು ಮುಂಜಾಗೃತಾ ಕ್ರಮವಾಗಿ ಸಿದ್ಧತೆ ಮಾಡಿಕೊಳ್ಳುವಂತೆ ಅಧಿ ಕಾರಿಗಳಿಗೆ ಸೂಚಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯಿತಿಗಳಲ್ಲಿ, ನಗರದ ವಿವಿಧೆಡೆಗಳಲ್ಲಿ, ಹೈವೆಗಳಲ್ಲಿ, ಬಸ್ ನಿಲ್ದಾಣಗಳಲ್ಲಿ, ಪರೀûಾ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಎಂದು ಸೂಚಿಸಿದರು.
ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರಿಗೆ ಬೆಳಿಗ್ಗೆ ಬೇಗ ಅಥವಾ ಸಾಯಂಕಾಲ ಕೆಲಸ ಮಾಡುವಂತೆ ನಿರ್ದೇಶನ ಹೊರಡಿಸಲಾಗುವುದು. ಕಟ್ಟಡ ಕಾರ್ಮಿಕರು ಮತ್ತು ಕ್ವಾರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಹೆಚ್ಚು ಕಾಲ ಬಿಸಿಲಲ್ಲಿ ಕೆಲಸ ಮಾಡದಂತೆ ಕಾರ್ಮಿಕ ಇಲಾಖೆ ಕ್ರಮ ಕೈಗೊಳ್ಳಬೇಕು.
ಅಂಗನವಾಡಿಯಲ್ಲಿ ಇರುವ ಮಕ್ಕಳು ಬಿಸಿಲಿನಲ್ಲಿ ಆಟವಾಡದಂತೆ ನೋಡಿಕೊಂಡು ಮಧ್ಯಾಹ್ನ ಕೇಂದ್ರದಲ್ಲಿ ಮಕ್ಕಳಿಗೆ ಮಲಗಲು ವ್ಯವಸ್ಥೆ ಮಾಡಿಕೊಳ್ಳಬೇಕೆಂದು ತಿಳಿಸಿದರು. ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ ಮಾತನಾಡಿ, ನಗರದಲ್ಲಿ ವಿಶೇಷವಾಗಿ ಜನನಿಬೀಡ ಸ್ಥಳಗಳಲ್ಲಿ ಕುಡಿಯುವ ನೀರು ಲಭ್ಯವಾಗುವಂತೆ ನೀರನ್ನು ಸಂಗ್ರಹಿಸಲಾಗುವುದು.
ಬಿಸಿಲಿನಲ್ಲಿ ಕಾರ್ಯನಿರ್ವಹಿಸುವ ಪೌರ ಕಾರ್ಮಿಕರಿಗೆ ಒಆರ್‌ಎಸ್ ಒದಗಿಸಲಾಗುವುದು ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಶಿವರಾಜ ಸಜ್ಜನಶೆಟ್ಟಿ, ಜಿಲ್ಲಾ ಆಸ್ಪತ್ರೆ ಅಧಿಧೀಕ್ಷಕ ಡಾ| ಕೆ.ಎಂ.ಜೋಶಿ, ಜಿಲ್ಲಾ ಆಸ್ಪತ್ರೆ ಹಿರಿಯ ವೈದ್ಯ ಡಾ| ದೇವೇಂದ್ರ ಮೈನಾಳೆ ಹಿಟ್ ಸ್ಟ್ರೋಕ್ ಬಗ್ಗೆ ವಿವರಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.