ಕಾಪು: ನಮ್ಮ ಮಕ್ಕಳಿಗೆ ಸಂಪತ್ತನ್ನು ಕೂಡಿಡದೇ ಮಕ್ಕಳ ಬದುಕಿಗೆ ಪೂರಕವಾದ ಶಿಕ್ಷಣವನ್ನು ಕೊಡುವುದರ ಮೂಲಕ ಅವರ ಸರ್ವಾಂಗೀಣ ಬೆಳವಣಿಗೆ ಬಗ್ಗೆ ಹೆತ್ತವರು ಕಾಳಜಿ ವಹಿಸಿ ಮಕ್ಕಳನ್ನೇ ಸಂಪತ್ತಾಗಿಸಬೇಕಾದ ಅನಿವಾರ್ಯತೆ ಇಂದಿನದ್ದಾಗಿದೆ. ಮಳೆಯ ನೀರು ಮರಳಿಗೆ ಬಿದ್ದರೆ ಇಂಗಿ ಹೋಗುತ್ತದೆ. ಅದರೆ ಚಿಪ್ಪಿನೊಳಗೆ ಬಿದ್ದರೆ ಅದು ಮುತ್ತಾಗುತ್ತದೆ ಎನ್ನುತ್ತಾರೆ. ಅದೇ ರೀತಿಯಲ್ಲಿ ಮಕ್ಕಳ ಎದೆಗೆ ಬಿದ್ದ ಅಕ್ಷರ ಅವರ ಬದುಕನ್ನು ರೂಪಿಸುತ್ತದೆ ಎಂದು ಕಾಪು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.
ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ – ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಉದ್ಯಾವರ ಹಫಾ ಅಡಿಟೋರಿಯಂನಲ್ಲಿ ಮಂಗಳವಾರ ಜರಗಿದ ವಿದ್ಯಾರ್ಥಿ ವೇತನ, ಸಮವಸ್ತ್ರ ಮತ್ತು ವೈದ್ಯಕೀಯ ನೆರವು ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಾಥಮಿಕ ಶಾಲಾ 7ನೇ ತರಗತಿಯ ಅರ್ಹ ವಿದ್ಯಾರ್ಥಿಗಳಿಗೆ ಯು. ಪದ್ಮನಾಭ ಶೆಟ್ಟಿಗಾರ್ ಮತ್ತು ಕೆ. ಸದಾನಂದ ಕಾಂಚನ್ ಸ್ಮಾರಕ, ಪ್ರೌಢ ಶಾಲಾ 10ನೇ ತರಗತಿಯ ಅರ್ಹ ವಿದ್ಯಾರ್ಥಿಗಳಿಗೆ ಟಿ. ವೈ. ಶಾಬುದ್ದೀನ್ ಸ್ಮಾರಕ, ಪಿ.ಯು.ಸಿ.ಯ ಅರ್ಹ ವಿದ್ಯಾರ್ಥಿಗಳಿಗೆ ಐರಿನ್ ಮಿನೇಜಸ್ ಸ್ಮಾರಕ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಅರ್ಹ ಗ್ರಾಮಸ್ಥರಿಗೆ ಮಂಜುನಾಥ ಉದ್ಯಾವರ ಸ್ಮಾರಕ ವೈದ್ಯಕೀಯ ನೆರವು, ಅಬ್ದುಲ್ ಜಲೀಲ್ ಸಾಹೇಬ್ ಪ್ರಾಯೋಜಕತ್ವದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಿಸಲಾಯಿತು. 250 ಮಕ್ಕಳಿಗೆ ಸಮವಸ್ತ್ರ, 75 ಸಾವಿರ ರೂ. ವಿದ್ಯಾರ್ಥಿ ವೇತನ, 1ಲಕ್ಷ ರೂ. ವೈದ್ಯಕೀಯ ನೆರವು ಮತ್ತು ಸರಕಾರಿ ಪ. ಪೂ. ಕಾಲೇಜಿನ ಬಿಸಿ ಊಟ ಯೋಜನೆಗೆ 20 ಸಾವಿರ ರೂ. ವಿತರಿಸಲಾಯಿತು.
ವೈಕುಂಠ ಬಾಳಿಗ ಕಾನೂನು ವಿದ್ಯಾಲಯದ ಪ್ರಾಂಶುಪಾಲ ಪ್ರೊ| ಪ್ರಕಾಶ್ ಕಣಿವೆ, ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ| ದುಗ್ಗಪ್ಪ ಕಜೆಕಾರ್, ನ್ಯಾಯವಾದಿ ಹರೀಶ್ ಶೆಟ್ಟಿ ಪಾಂಗಾಳ, ದಾನಿ ಅಬ್ದುಲ್ ಜಲೀಲ್ ಸಾಹೇಬ್, ಉದ್ಯಾವರ ಗ್ರಾ. ಪಂ. ಅಧ್ಯಕ್ಷೆ ಸುಗಂಧಿ ಶೇಖರ್, ಉದ್ಯಾವರ ಮುಸ್ಲಿಂ ಯುನಿಟಿ ಯು. ಎ. ಇ. ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅಶ್ರಫ್ ಸತ್ತಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷ ಯು. ಆರ್. ಚಂದ್ರಶೇಖರ್ ಸ್ವಾಗತಿಸಿದರು. ನಿರ್ದೇಶಕ ಉದ್ಯಾವರ ನಾಗೇಶ್ ಕುಮಾರ್ ಪ್ರಸ್ತಾವನೆಗೈದರು. ಅನೂಪ್ ಕುಮಾರ್, ರವಿಕಿರಣ್ ಪಿ. ಎಸ್., ಗಿರೀಶ್ ಗುಡ್ಡೆಂಗಡಿ ಫಲಾನುಭವಿಗಳ ಪಟ್ಟಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ತಿಲಕ್ ರಾಜ್ ಸಾಲ್ಯಾನ್ ವಂದಿಸಿದರು. ರಮೇಶ್ ಕುಮಾರ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.