Advertisement

ಸಂವಿಧಾನ ಬಗ್ಗೆ ಹಗುರ ಮಾತುಬೇಡ

12:29 PM Dec 31, 2017 | Team Udayavani |

ಮೈಸೂರು: ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡಿರುವ ಬಿಜೆಪಿ ನಾಯಕರ ಬಗ್ಗೆ ಕೊನೆಗೂ ಮೌನ ಮುರಿದಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷರೂ ಆದ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌, ಸಂವಿಧಾನದ ಬಗ್ಗೆ ಮಾತನಾಡುವವರ ವಿರುದ್ಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂವಿಧಾನವನ್ನು ಅವಹೇಳನ ಮಾಡುವ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಮತ್ತು ವಿಧಾನಪರಿಷತ್‌ ಮಾಜಿ ಸದಸ್ಯ ಗೋ.ಮಧುಸೂದನ್‌ ಅವರು ಧಾರ್ಮಿಕ ಮತಾಂಧರು, ಇವರಿಬ್ಬರು ಪ್ರಧಾನಿ ಮೋದಿ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಪ್ರಧಾನಿ ನರೇಂದ್ರ ಮೋದಿ ಅವರೇ ಸಂವಿಧಾನವನ್ನು ದೇಶದ ಶ್ರೇಷ್ಠ ಗ್ರಂಥವೆಂದು ಒಪ್ಪಿದ್ದು, ತಾವು ಪ್ರಧಾನಿಯಾಗಬೇಕಾದರೆ ಸಂವಿಧಾನವೇ ಕಾರಣವೆಂದು ಹೇಳಿದ್ದಾರೆ. ಹೀಗಿದ್ದರೂ ಬಿಜೆಪಿಯ ಕೆಲವು ನಾಯಕರು ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆಂದು ದೂರಿದರು.

ಅಂಬೇಡ್ಕರ್‌ ಆಧ್ಯಾತ್ಮಿಕ ನಾಯಕ: ಸಂವಿಧಾನದ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡುವ ಮೂಲಕ ನಮ್ಮ ಭಾವನೆಗಳನ್ನು ಕೆರಳಿಸಬೇಡಿ. ತಮಗೆ ಅಂಬೇಡ್ಕರ್‌ ಮುಖ್ಯವೇ ಹೊರತು ಯಾವುದೇ ರಾಜಕೀಯ ಪಕ್ಷ ಮುಖ್ಯವಲ್ಲ, ಈ ವಿಷಯದಲ್ಲಿ ಯಾವ ಪಕ್ಷವಾದರೂ ಅಷ್ಟೇ.

ನರೇಂದ್ರ ಮೋದಿ, ಅಮಿತ್‌ ಶಾ, ಬಿ.ಎಸ್‌.ಯಡಿಯೂರಪ್ಪ ಅವರು ರಾಜಕೀಯ ನಾಯಕರಾದರೆ ಅಂಬೇಡ್ಕರ್‌ ನಮ್ಮ ಆಧ್ಯಾತ್ಮಿಕ ನಾಯಕ. ನಾವುಗಳು ಈ ಮಟ್ಟಕ್ಕೆ ಬರಲು ಡಾ.ಬಿ.ಆರ್‌.ಅಂಬೇಡ್ಕರ್‌ ಅವರೇ ಕಾರಣ. ಹೀಗಾಗಿ ದೇಶದ ಸಂವಿಧಾನದ ಬಗ್ಗೆ ಯಾರೂ ಹಗುರವಾಗಿ ಮಾತನಾಡಬಾರದು. ಸಂವಿಧಾನದ ಬಗ್ಗೆ ನೀಡಿರುವ ವ್ಯತಿರಿಕ್ತ ಹೇಳಿಕೆಗಳಿಂದ ನಮ್ಮ ಮನಸ್ಸಿಗೆ ನೋವಾಗುತ್ತಿದೆ ಎಂದರು.

Advertisement

ಬುದ್ಧಿ ವಿಕಾಸವಾಗಿಲ್ಲ: 2 ಬಾರಿ ವಿಧಾನಪರಿಷತ್‌ ಸದಸ್ಯರಾಗಿದ್ದ ಗೋ.ಮಧುಸೂದನ್‌ಗೆ ಇನ್ನೂ ಬುದ್ಧಿ ವಿಕಾಸವಾಗಿಲ್ಲ. ಅಂಬೇಡ್ಕರ್‌ ಅಂದರೆ ಸಂವಿಧಾನ, ಸಂವಿಧಾನ ಅಂದರೆ ಅಂಬೇಡ್ಕರ್‌-ಇವೆರಡೂ ಒಂದೇ ನಾಣ್ಯದ 2 ಮುಖ. ಸ್ವತಂತ್ರ ಭಾರತದಲ್ಲಿರುವ ಎಲ್ಲಾ ಧರ್ಮ, ಜಾತಿ-ಜನಾಂಗಗಳು ಬದುಕುವುದಕ್ಕೆ ತಕ್ಕಂತೆ ಅಂಬೇಡ್ಕರ್‌ ಸಂವಿಧಾನವನ್ನು ರೂಪಿಸಿಕೊಟ್ಟಿದ್ದಾರೆ.

ಗೋ.ಮಧುಸೂದನ್‌, ಟಿಪ್ಪು ಜಯಂತಿ ಕುರಿತ ವಾಹಿನಿಯೊಂದರ ಚರ್ಚೆಯಲ್ಲಿ ಅನಗತ್ಯವಾಗಿ ಸಂವಿಧಾನದ ವಿಚಾರ ಪ್ರಸ್ತಾಪಿಸಿದ್ದಾನೆ. ಗೋ.ಮಧುಸೂದನ್‌ ಅವರನ್ನು ಎಲ್ಲರೂ ಗೋ..ಗೋ.. ಎನ್ನುತ್ತಾರೆ, ಕಮ್‌.. ಎಂದು ಯಾರೂ ಅನ್ನುವುದಿಲ್ಲ ಎಂದು ಏಕವಚನದಲ್ಲೇ ಟೀಕಿಸಿದರು.

ಹೆಗೆಡೆಗೆ ನಾಚಿಕೆಯಾಗ್ಬೇಕು: 5 ಬಾರಿ ಸಂಸದರಾಗಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಸಂವಿಧಾನದ ಬಗ್ಗೆ ನೀಡಿರುವ ಹೇಳಿಕೆ ಬಾಲಿಶತನದ್ದು. ದೇಶದ ಸಂವಿಧಾನವನ್ನು ಬದಲಾವಣೆ ಮಾಡಲು ಸಾಧ್ಯವೇ ಇಲ್ಲ ಎಂದು ಪ್ರಶ್ನಿಸಿದರು.

ಪೇಜಾವರ ಶ್ರೀಗಳ ಬಗ್ಗೆ ಗರಂ: ನೀವು ನಿಮ್ಮ ಮಠದ ಬಗ್ಗೆ ಮಾತ್ರ ಮಾತನಾಡಿ, ಸಂವಿಧಾನದ ಬಗ್ಗೆ ಏಕೆ ಮಾತನಾಡುತ್ತೀರಾ? ಈ ದೇಶದ ಚರಿತ್ರೆ ಬಗ್ಗೆ ನಿಮಗೇನು ಗೊತ್ತೇ? ಉಡುಪಿ ಧರ್ಮ ಸಂಸತ್‌ನಲ್ಲಿ ನೀವು ಮಾತನಾಡಿದ್ದು ಸರಿಯೇ? ಎಂದು ಪೇಜಾವರ ಶ್ರೀಗಳನ್ನು ಪ್ರಶ್ನಿಸಿ,

ನಿಮ್ಮಲ್ಲೇ ದ್ವೆ„ತ, ಅದ್ವೆ„ತ ಎಂದು ಕಿತ್ತಾಡುತ್ತೀರಾ, ಹೀಗಿದ್ದರೂ ನೀವು ಧರ್ಮ ಸಂಸದ್‌ನಲ್ಲಿ ಮಾತನಾಡುತ್ತೀರಾ, ಅಸ್ಪಶ್ಯತೆ ಕಳಂಕ ದೂರವಾಗುವ ತನಕ ಹಿಂದೂ ಧರ್ಮಕ್ಕೆ ಅರ್ಥ ಬರುವುದಿಲ್ಲ ಎನ್ನುವ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ರ ಮಾತನ್ನು ಅರಿತು ಕೊಳ್ಳಬೇಕಿದೆ ಎಂದರು.

ವಿಧಾನಪರಿಷತ್‌ ಮಾಜಿ ಸದಸ್ಯ ಸಿದ್ದರಾಜು, ಮುಡಾ ಮಾಜಿ ಅಧ್ಯಕ್ಷರಾದ ಕೆ.ಆರ್‌.ಮೋಹನ್‌ಕುಮಾರ್‌, ಸಿ.ಬವಸವೇಗೌಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಂ.ರಾಜೇಂದ್ರ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮುಖಂಡರಾದ ಕುಂಬ್ರಳ್ಳಿ ಸುಬ್ಬಣ್ಣ, ನಂದಕುಮಾರ್‌ ಸುದ್ದಿಗೋಷ್ಠಿಯಲ್ಲಿದ್ದರು. 
 
ಪುಸ್ತಕ ಬರೀತೇನೆ
ನನ್ನ ರಾಜಕೀಯ ಜೀವನದ ಕುರಿತು ಪುಸ್ತಕ ಬರೆಯುತ್ತಿದ್ದು, ಸದ್ಯದಲ್ಲೇ ಬಿಡುಗಡೆ ಮಾಡುತ್ತೇನೆ. ಹಿಡನ್‌ ಅಜೆಂಡಾಗಳೆಲ್ಲಾ ಈಗ ನಡೆಯೋದಿಲ್ಲ. ಅಂತಿಮವಾಗಿ ಜನಾದೇಶವೇ ಮುಖ್ಯವಾಗಲಿದೆ. ದೇಶದಲ್ಲಿ ಯಾವುದೇ ವಿಚಾರಕ್ಕೆ ಉತ್ತರ ಕೊಡುವುದು, ಪಾಠ ಕಲಿಸೋದು ಕೇವಲ ಬ್ಯಾಲೆಟ್‌ ಪೇಪರ್‌ನಿಂದ ಮಾತ್ರ ಸಾಧ್ಯವೆಂದು ನಿರೂಪಿಸಲಾಗಿದೆ.
-ಶ್ರೀನಿವಾಸ ಪ್ರಸಾದ್‌, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next