Advertisement

ಅಮೆರಿಕವೀಗ ಸುರಕ್ಷಿತವಲ್ಲ ಮಕ್ಕಳನ್ನು ಕಳುಹಿಸಬೇಡಿ

03:50 AM Feb 25, 2017 | |

ವಾಷಿಂಗ್ಟನ್‌/ಹೊಸದಿಲ್ಲಿ: “ಅಮೆರಿಕವು ಸುರಕ್ಷಿತ ಸ್ಥಳವಲ್ಲ. ದಯವಿಟ್ಟು, ನಿಮ್ಮ ಮಕ್ಕಳನ್ನು ಅಲ್ಲಿಗೆ ಕಳುಹಿಸಬೇಡಿ.’  ಭಾರತೀಯ ಹೆತ್ತವರಿಗೆ ಇಂತಹುದೊಂದು ಸಲಹೆ ನೀಡಿದ್ದು ಬೇರಾರೂ ಅಲ್ಲ. ಅಮೆರಿಕದ ಕನ್ಸಾಸ್‌ನಲ್ಲಿ ಭಾರತೀಯರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಮದಸಾನಿ ಅಲೋಕ್‌ ರೆಡ್ಡಿ(32)ಯ ತಂದೆ ಮದಸಾನಿ ಜಗನ್ಮೋಹನ್‌ ರೆಡ್ಡಿ.

Advertisement

ಕೆಲಸಕ್ಕೆಂದು ಹೋದ ಮಗ ಅಮೆರಿಕದಲ್ಲಿ ಜನಾಂಗೀಯ ದ್ವೇಷಕ್ಕೆ ಸಿಲುಕಿದ ವಿಚಾರ ತಿಳಿಯುತ್ತಿದ್ದಂತೆಯೇ ಆಘಾತಗೊಂಡ ರೆಡ್ಡಿ, ಅಮೆರಿಕದ ಸದ್ಯದ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್‌ನಲ್ಲಿ ಮಾತನಾಡಿದ ಅವರು, “ಡೊನಾಲ್ಡ್‌ ಟ್ರಂಪ್‌ ಅವರು ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಅಮೆರಿಕದ ಸ್ಥಿತಿ ತೀರಾ ಹದಗೆಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಯಾರೂ ತಮ್ಮ ಮಕ್ಕಳನ್ನು ಅಮೆರಿಕಕ್ಕೆ ಕಳುಹಿಸಬಾರದು ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ,’ ಎಂದಿದ್ದಾರೆ. ಜತೆಗೆ, ಅಲೋಕ್‌ಗೂ ನಾನು ಅಲ್ಲಿ ಕೆಲಸ ಬಿಟ್ಟು, ವಾಪಸ್‌ ಬಾ ಎಂದಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.

ಜಗಳ ತೆಗೆದು ಗುಂಡು ಹಾರಿಸಿದ: “ಹತ್ಯೆಗೀಡಾಗಿರುವ ಶ್ರೀನಿವಾಸ್‌ ಮತ್ತು ನನ್ನ ಮಗ ಅಲೋಕ್‌ ಬಾರ್‌ನಲ್ಲಿ ಬಾಸ್ಕೆಟ್‌ಬಾಲ್‌ ಪಂದ್ಯ ವೀಕ್ಷಿಸಲು ತೆರಳಿದ್ದರು. ಅವರು ಹೋಗುವ ಮೊದಲೇ ಬಾರ್‌ಗೆ ಆರೋಪಿ ಬಂದಿದ್ದ. ಇವರನ್ನು ನೋಡುತ್ತಿದ್ದಂತೆಯೇ ಆರೋಪಿಯು, “ನೀವೇಕೆ ಅಕ್ರಮವಾಗಿ ವಾಸಿಸುತ್ತಿದ್ದೀರಿ,’ ಎಂದು ಪ್ರಶ್ನಿಸಿದನಂತೆ. ಅದಕ್ಕೆ, ಅಲೋಕ್‌ ಮತ್ತು ಶ್ರೀನಿವಾಸ್‌, “ನಾವು ಕನ್ಸಾಸ್‌ನಲ್ಲಿ ಎಂಎಸ್‌ ಮುಗಿಸಿದ್ದೇವೆ. ಸೂಕ್ತ ದಾಖಲೆಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ,’ ಎಂದರೂ, ಆತ ಜಗಳ ಮುಂದುವರಿಸಿದ್ದಕ್ಕೆ, ಇವರು ರೆಸ್ಟಾರೆಂಟ್‌ ಮ್ಯಾನೇಜರ್‌ಗೆ ದೂರು ನೀಡಿದರು. ಇದರಿಂದ ಕ್ರುದ್ಧನಾದ ಆರೋಪಿ, ಇವರ ಮೇಲೆ ಗುಂಡಿನ ದಾಳಿ ನಡೆಸಿದ’ ಎಂದು ರೆಡ್ಡಿ ಹೇಳಿದ್ದಾರೆ.

ಮೃತ ಶ್ರೀನಿವಾಸ್‌ ತಂದೆ ಕೆ. ಮಧುಸೂದನ್‌ ಶಾಸ್ತ್ರಿ ಇಂಡಿಯನ್‌ ಡ್ರಗ್ಸ್‌ ಆ್ಯಂಡ್‌ ಫಾರ್ಮಾಸುಟಿಕಲ್ಸ್‌ ಲಿ.ನ ನಿವೃತ್ತ ವಿಜ್ಞಾನಿಯಾಗಿದ್ದಾರೆ.

ಅಕ್ರಮ ಪ್ರವೇಶ: ಐವರು ಭಾರತೀಯರ ಸೆರೆ‌
ವಾಷಿಂಗ್ಟನ್‌: ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಲಸೆ ನೀತಿ ಮತ್ತಷ್ಟು ಕಠಿಣವಾದ ಬೆನ್ನಲ್ಲೇ ಅಮೆರಿಕದೊಳಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಐವರು ಭಾರತೀಯರನ್ನು ಶುಕ್ರವಾರ ಬಂಧಿಸಲಾಗಿದೆ. ಇವರಿಗೆ ಗಡಿ ದಾಟಲು ನೆರವಾದ ಆರೋಪಧಿದಲ್ಲಿ ಕೆನಡಾದ ನಾಗರಿಕನನ್ನೂ ಬಂಧಿಸಿರುವುದಾಗಿ ಅಮೆರಿಕದ ಗಡಿ ಪೊಲೀಸರು ತಿಳಿಸಿದ್ದಾರೆ.

Advertisement

ಬಂಧಿತ ಐವರು ಭಾರತೀಯರನ್ನು ವಲಸೆ ನ್ಯಾಯಾಧೀಶರ ಮುಂದೆ ಹಾಜರಾಗುವಂತೆ ಆದೇಶಿಸಲಾಗಿದೆ. ಅವರನ್ನು ಕಾನೂನುಬದ್ಧವಾಗಿ ಅಮೆರಿಕದಲ್ಲಿ ಉಳಿಸಿಕೊಳ್ಳುವುದೋ, ಬೇಡವೋ ಎಂಬುದನ್ನು ನ್ಯಾಯಾಧೀಶರು ನಿರ್ಧರಿಸ
ಲಿದ್ದಾರೆ. ಭಾರತೀಯರಿಗೆ ನೆರವಾದ ಕೆನಡಾ ಆರೋಪಿಯ ವಿರುದ್ಧ ಮಾನವ ಕಳ್ಳಸಾಗಣೆ ಆರೋಪ ಹೊರಿಸಿ, ವಿಚಾರಣೆಗೆ ಒಳಪಡಿಸಲಾಗುತ್ತದೆ. ಇತ್ತೀಚೆಗಿನ ವರದಿ ಪ್ರಕಾರ, ಅಮೆರಿಕದಲ್ಲಿ ನೆಲೆಸಿರುವ ಅನಧಿಕೃತ ಭಾರತೀಯ ವಲಸಿಗರ ಸಂಖ್ಯೆ 2014ರ ವೇಳೆಗೆ 5 ಲಕ್ಷ ದಾಟಿದೆ. 2009ರಲ್ಲಿ ಇದು 1.30 ಲಕ್ಷ ಆಗಿತ್ತು. ಮೆಕ್ಸಿಕೋ, ಎಲ್‌ ಸಾಲ್ವಡಾರ್‌ ಮತ್ತು ಗ್ವಾಟೆಮಾಲಾ ಬಳಿಕ ಭಾರತೀಯ ಅಕ್ರಮ ವಲಸಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಅಮೆರಿಕದಲ್ಲಿ ನಾವೀಗ ಅತ್ಯಂತ ಭಯದ ವಾತಾವರಣದಲ್ಲಿ ಬದುಕುತ್ತಿದ್ದೇವೆ. ಇಲ್ಲಿನವರೊಂದಿಗೆ ಮಾತನಾಡುವ ನಾವು ಜಾಗರೂಕತೆ ವಹಿಸಬೇಕಾಗುತ್ತದೆ. ಯಾರೊಂದಿಗೂ ವಾದಕ್ಕೆ ಇಳಿಯುವಂತಿಲ್ಲ.
ಸಾಗರ್‌, ಟೆಕ್ಸಾಸ್‌ನ ತೆಲುಗು ಅಸೋಸಿಯೇಷನ್‌ ವಕ್ತಾರ

ಅಮೆರಿಕವು ವಲಸಿಗರ ದೇಶವಾಗಿದ್ದು, ಜಗತ್ತಿನಾದ್ಯಂತದ ಜನರನ್ನು ಸ್ವಾಗತಿಸುತ್ತದೆ. ಶ್ರೀನಿವಾಸ್‌ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥನಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತೇವೆ. 
ಮೇರಿಕೇ ಕಾಲ್ಸìನ್‌, ಅಮೆರಿಕ ರಾಯಭಾರ ಕಚೇರಿ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next