Advertisement

ಉದ್ಯೋಗ ಅರಸಬೇಡಿ, ಉದ್ಯೋಗ ಸೃಷ್ಟಿಸಿ

09:25 AM Dec 31, 2017 | Team Udayavani |

ರಾಮನಗರ: ಕೈಗಾರಿಕೆ ಮತ್ತು ಶಿಕ್ಷಣ ಸಂಯುಕ್ತವಾಗಿ ಇಂದು ಪಠ್ಯಕ್ರಮವನ್ನು ರಚಿಸಬೇಕಾಗಿದೆ.ಕಲಿಕೆಯ ಪ್ರಕ್ರಿಯೆ ಪರಿಹಾರ ಕಂಡುಕೊಳ್ಳುವಿಕೆ ಮತ್ತು ಪ್ರಾಯೋಗಿಕವಾಗಿರಬೇಕು. ವಿದ್ಯಾರ್ಥಿಗಳು ಕೇವಲ ಉದ್ಯೋಗ ಅರಸುವವರಾಗಬಾರದು, ಉದ್ಯೋಗವನ್ನು ಸೃಷ್ಟಿಸುವಂತವರಾಗಬೇಕು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಸಲಹೆ ನೀಡಿದ್ದಾರೆ.

Advertisement

ತಾಲೂಕಿನ ಬಿಡದಿ ಹೋಬಳಿ ಇಟ್ಟಮಡು-  ತಿಮ್ಮೇಗೌಡನ ದೊಡ್ಡಿ ಬಳಿ ಇರುವ ಅಮೃತಾ ಇನ್‌ಸ್ಟಿಟ್ಯೂಟ್‌ ಆಫ್ ಇಂಜಿನಿಯರಿಂಗ್‌, ಮ್ಯಾನೆಜ್‌ ಮೆಂಟ್‌ ಸೈನ್ಸಸ್‌ ಆ್ಯಂಡ್‌ ಪಾಲಿಟೆಕ್ನಿಕ್‌ ಕಾಲೇಜಿನ ಬೆಂಗಳೂರು ಕ್ಯಾಂಪಸ್‌ ಉದ್ಘಾಟನೆ ಮತ್ತು ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ (ಬಾಗಲಕೋಟೆ) 111ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣ ಕೇವಲ ಪಠ್ಯಪುಸ್ತಕಗಳ ಓದುವಿಕೆ, ವಿಜ್ಞಾನ, ಇಂಜಿನಿಯರಿಂಗ್‌, ವೈದ್ಯಕೀಯದ ಅಧ್ಯಯನ ಅಥವಾ ಪದವಿ ಪಡೆಯುವುದು, ಉದ್ಯೋಗಗಳಿಕೆಗೆ ಮಾತ್ರ ಸೀಮಿತವಾಗಬಾರದು. ಸವಲತ್ತುಗಳಿಂದ ವಂಚಿತರಾದವರ ಒಳಿತಿಗಾಗಿ, ಒಟ್ಟಾರೆ ಸಮಾಜದ ಹಿತಕ್ಕೆ ಸದ್ಬಳಕೆಯಾದಾಗಲೇ ಶಿಕ್ಷಣ ಪಡೆದದ್ದು ಸಾರ್ಥಕ ಎಂದರು. ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಒಂದು ಪವಿತ್ರವಾದ ಕಾರ್ಯ. ಆದಿಕಾಲದಿಂದಲೂ ಭಾರತದಲ್ಲಿ ಪಾರಂಪರಿಕವಾಗಿ ಶಿಕ್ಷಣ ಎನ್ನುವುದು “ವಿದ್ಯಾದಾನ”ವಾಗಿ ನಡೆದುಕೊಂಡು ಬಂದಿದೆ. ಶಿಕ್ಷಣ ಕೊಡುವುದರ ಮೂಲಕ ಜ್ಞಾನವನ್ನು ಕೊಡುಗೆ ನೀಡಲಾಗುತ್ತಿತ್ತು. ಶಿಕ್ಷಣ ವ್ಯಾಪಾರೀಕರಣವಾಗಬಾರದು ಎಂದರು.

ಭಾರತವನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಯುವ ಮನಸ್ಸುಗಳನ್ನು ಸಜ್ಜುಗೊಳಿಸುವ ಪ್ರಕ್ರಿಯೆ ಶಿಕ್ಷಣವಾಗಬೇಕು.
ಬಸವೇಶ್ವರರು ಮತ್ತು ಗುರು ಬಸವ ಸ್ವಾಮೀಜಿ ಅವರ ತತ್ವಗಳ ಮೇಲೆ ವಿದ್ಯಾಸಂಸ್ಥೆಗಳು ನಡೆಯಲಿ ಎಂದು ಹಾರೈಸಿದರು. ಭಾರತ ತನ್ನ ಯುವ ಸಮುದಾಯದ ಮೇಲೆ ಭರವಸೆ ಇಟ್ಟಿದೆ. ಯುವ ಸಮುದಾಯ ತಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳುವುದರ ಜತೆಗೆ ದೇಶ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ರಾಜ್ಯಪಾಲ ವಿ.ಆರ್‌.ವಾಲಾ, ಸಂಸದ ಡಿ.ಕೆ. ಸುರೇಶ್‌, ಸಂಸ್ಥೆಯ ಅಧ್ಯಕ್ಷ ಡಾ.ವೀರಣ್ಣ ಸಿ.ಚರಂತಿಮಠ ಮತ್ತು ಕಾರ್ಯದರ್ಶಿ ಮಹೇಶ್‌ ಎನ್‌ ಅಥಣಿ ಹಾಜರಿದ್ದರು.

ಅನುಭವ ಮಂಟಪವೇ ವಿಶ್ವದ ಪ್ರಥಮ ಸಂಸತ್ತು
ಕೇಂದ್ರ ಸಚಿವ ಅನಂತ ಕುಮಾರ್‌ ಮಾತನಾಡಿ, ಬ್ರಿಟನ್‌ನ ಹೌಸ್‌ ಆಫ್ ಕಾಮನ್ಸ್‌ನು° ವಿಶ್ವದ ಪ್ರಜಾಪ್ರಭುತ್ವದ ತಾಯಿ ಎನ್ನುವವರಿದ್ದಾರೆ. ಆದರೆ, ಸಮ ಸಮಾಜದ ನಿರ್ಮಾಣಕ್ಕೆ ತೊಡಗಿಸಿಕೊಂಡ ಬಸವೇಶ್ವರರ ಅನುಭವ ಮಂಟಪವೇ ವಿಶ್ವ ಪ್ರಜಾಪ್ರಭುತ್ವದ ಪ್ರಥಮ ಸಂಸತ್‌ ಆಗಿತ್ತು. ಮುಂಬೈ ಕರ್ನಾಟಕದ ಹಳ್ಳಿಗಳು, ತಾಲೂಕು ಹಾಗೂ ಜಿಲ್ಲೆಗಳಲ್ಲಿ ಶಿಕ್ಷಣ ಜ್ಯೋತಿ ಬೆಳಗಿದ ಕೀರ್ತಿ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಸಲ್ಲುತ್ತದೆ. ಹಳ್ಳಿಗಾಡಿನ ಮಕ್ಕಳಿಗೆ ಅಕ್ಷರ ಜ್ಞಾನ ನೀಡುವುದೇ ಸಂಘದ ಮುಖ್ಯ ಗುರಿಯಾಗಿದೆ ಎಂದು ಹೇಳಿದರು.

Advertisement

ತಮ್ಮ ಸಹೋದರಿಯ ಪುತ್ರಿ ಅಮೃತಾ, ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಳು. ಆಕೆಯ ನೆನಪಿನಲ್ಲಿ ಅಮೃತಾ
ಎಂಜಿನಿಯರಿಂಗ್‌ ಕಾಲೇಜನ್ನು ಆರಂಭಿಸಿದ್ದು, ಈ ಕಾಲೇಜನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವಂತೆ ತಾವು
ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ವೀರಣ್ಣ ಸಿ.ಚರಂತಿಮಠ ಅವರಿಗೆ ಮನವಿ ಮಾಡಿದ್ದೆ.
ಅಮೃತಾ ಸಂಸ್ಥೆ ಈಗ ರಾಜ್ಯದ ಪ್ರಮುಖ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next