ಚಿಂತಾಮಣಿ: ಕಳ್ಳಭಟ್ಟಿ ಸಾರಾಯಿ, ಸೇಂದಿ ಸೇರಿದಂತೆ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದುಮ, ಇದನ್ನು ಕುಡಿಯುವ ಮದ್ಯವ್ಯಸನಿಗಳು ಅನಾರೋಗ್ಯಕ್ಕೆ ಗುರಿಯಾಗುತ್ತಾರೆ. ಇದರಿಂದ ತಮ್ಮ ಕುಟುಂಬಗಳನ್ನು ಕಳೆದು ಕೊಳ್ಳುವಂತಾಗುತ್ತದೆ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತ ಜೆ.ಪಿ.ನರೇಂದ್ರ ಕುಮಾರ್ ಎಚ್ಚರಿಸಿದರು.
ತಾಲೂಕಿನ ಕೊರ‌್ಲಪರ್ತಿ ಗ್ರಾಪಂ ವ್ಯಾಪ್ತಿಯ ನೇರಡಗುಂಟಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತನಾಡಿದ ಅವರು, ಕೋವಿಡ್ -19 ವೈರಸ್ ಲಾಕ್‌ಡೌನ್ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಮದ್ಯದಂಗಡಿಗಳು ಬಂದ್ ಮಾಡಿರುವುದರಿಂದ ಮದ್ಯವ್ಯಸನಿಗಳು ಈ ಸಮಯದಲ್ಲಿ ಕಳ್ಳಭಟ್ಟಿ ಸಾರಾಯಿ ಇನ್ನಿತರೆ ಕಳಪೆ ಮದ್ಯ ಸೇವನೆ ಮಾಡದೆ ಆರೋಗ್ಯ ಕಾಪಾಡಿಕೊಳ್ಳಿ. ಈಗಾಗಲೇ ಹಲವೆಡೆ ಕಳ್ಳಭಟ್ಟಿ ಪ್ರಕರಣ ದಾಖಲಾಗಿದೆ. ಇನ್ಮುಂದೆ ಈ ತರಹದ ಮದ್ಯ ತಯಾರಿ,
ಮಾರಾಟ ಮಾಡುವುದು ಹಾಗೂ ಸೇವನೆ ಮಾಡುವವರು ಕಂಡು ಬಂದಲ್ಲಿ ಅಬಕಾರಿ ಅಧಿಕಾರಿಗಳ ಗಮನಕ್ಕೆ ತಿಳಿಸಬೇಕೆಂದರು.
ಈ ಸಂದರ್ಭದಲ್ಲಿ ಚಿಂತಾಮಣಿ ಉಪವಿಭಾಗದ ಅಬಕಾರಿ ಉಪಅಧೀಕ್ಷ ಎ.ಅನಿಲ್ ಕುಮಾರ್, ಚಿಂತಾಮಣಿ ವಲಯದ ಅಬಕಾರಿ ನಿರೀಕ್ಷಕ ಎಂ.ಡಿ.ಮೋಹನ್ ಕುಮಾರ್, ಚಿಂತಾಮಣಿ ಅಬಕಾರಿ ನಿರೀಕ್ಷಕಿ ರೇಣುಕಾ ಮತ್ತು ನಿರೀಕ್ಷಕ ವಿನೋದ್ ಕುಮಾರ್ ಬಿ.ಎನ್., ಅಬಕಾರಿ ರಕ್ಷಕ ವೆಂಕಟೇಶಪ್ಪ ಕೆ.ಎಸ್., ಚಿಂತಾಮಣಿ, ಶಿಡ್ಲಘಟ್ಟ ಮತ್ತು ಬಾಗೇಪಲ್ಲಿ ವಲಯದ ಸಿಬ್ಬಂದಿ ಮತ್ತು ಗ್ರಾಮಸ್ಥರು ಹಾಜರಿದ್ದರು.