ಬೆಂಗಳೂರು: ಹತ್ತು ರೂಪಾಯಿ ನಕಲಿ ನಾಣ್ಯದ ವದಂತಿಯಿಂದಾಗಿ, 10 ರೂಪಾಯಿ ಅಸಲಿ ನಾಣ್ಯವನ್ನೂ ಸಿಲಿಕಾನ್ ಸಿಟಿಯಲ್ಲಿ ಕೂಡಾ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದೆ. ಇದು ಕೇವಲ ಬೆಂಗಳೂರಿನ ಕಥೆಯಲ್ಲ ರಾಜ್ಯ ಸೇರಿದಂತೆ ದೇಶಾದ್ಯಂತ ಇದೇ ದೂರು ಕೇಳಿಬರುತ್ತಿದೆ.
ಹೌದು ಬೆಂಗಳೂರಿನ ಬಿಎಂಟಿಸಿ ಬಸ್, ಕೆಲವು ಅಂಗಡಿ ಮುಂಗಟ್ಟುಗಳಲ್ಲಿ 10 ರೂಪಾಯಿ ನಾಣ್ಯ ಕೊಟ್ಟರೆ ಇದು ಬೇಡಾ ಸರ್ ಅಂತ ಹೇಳುತ್ತಿರುವುದಾಗಿ ಪ್ರಯಾಣಿಕರೊಬ್ಬರು ದೂರಿದ್ದಾರೆ. ಅಲ್ಲಾರಿ ಇದು ಅಸಲಿ 10 ರೂಪಾಯಿ ನಾಣ್ಯ, ಯಾಕೆ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರೆ ಅದೆಲ್ಲಾ ಗೊತ್ತಿಲ್ಲಾರಿ, 10 ರೂಪಾಯಿ ನಾಣ್ಯ ಬೇಡ ಎಂದು ಬಿಎಂಟಿಸಿ ಬಸ್ ನ ಕೆಲವು ನಿರ್ವಾಹಕರು ಹೇಳುತ್ತಿದ್ದಾರಂತೆ!
ಇನ್ನೂ ವಿಪರ್ಯಾಸದ ಸಂಗತಿ ಏನಪ್ಪಾ ಅಂದರೆ ಕೆಲವು ಬ್ಯಾಂಕುಗಳಲ್ಲಿಯೂ 10 ರೂಪಾಯಿ ನಾಣ್ಯವನ್ನು ಸ್ವೀಕರಿಸುತ್ತಿಲ್ಲವಂತೆ. ಈಗಾಗಲೇ 10 ರೂಪಾಯಿ ಸ್ವೀಕರಿಸಬೇಕು, 10 ನಾಣ್ಯ ನಿಷೇಧಿಸಿದ್ದಾರೆ ಎಂಬ ವದಂತಿ ಸುಳ್ಳು ಎಂಬುದಾಗಿ ಹಲವಾರು ಪ್ರಕಟಣೆ, ಸುದ್ದಿಗಳು ಪ್ರಕಟವಾಗಿದ್ದರೂ ಕೂಡಾ 10 ರೂಪಾಯಿ ನಾಣ್ಯವನ್ನು ಮಾತ್ರ ಸ್ವೀಕರಿಸುತ್ತಿಲ್ಲ ಯಾಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಎಂಜಿ ರೋಡ್ ನಿಂದ ಯಶವಂತಪುರಕ್ಕೆ ದಿನಂಪ್ರತಿ ಸಂಚರಿಸುತ್ತಿರುವ ಪ್ರಯಾಣಿಕರೊಬ್ಬರು ದೂರಿರುವ ಪ್ರಕಾರ, ಶಿವಾಜಿನಗರ ಬಸ್ ನಿಲ್ದಾಣದಲ್ಲಿ, ಪ್ರಯಾಣಿಕರು ಬಸ್ ಹತ್ತುತ್ತಿರುವಾಗಲೇ, ನೋಡ್ರಿ 10 ರೂಪಾಯಿ ನಾಣ್ಯ ಇದ್ದರೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳುತ್ತಿರುವುದಾಗಿ ಉದಯವಾಣಿಗೆ ತಿಳಿಸಿದ್ದಾರೆ.
ಗಾಳಿ ಸುದ್ದಿಗೆ ಕಿವಿಗೊಡಬೇಡಿ. ನಾಣ್ಯಗಳು ಎಂದಿನಂತೆ ಚಲಾವಣೆಯಲ್ಲಿವೆ. ಫೇಸ್‍ಬುಕ್, ವಾಟ್ಸಪ್‍ಗಳಲ್ಲಿ ಹರಿದಾಡುತ್ತಿರುವ ಹಲವು ಸುಳ್ಳು ಸುದ್ದಿ ಹರಿದಾಡುತ್ತಿದೆ. ಕಾಲಕ್ಕೆ ತಕ್ಕಂತೆ ಆರ್‍ಬಿಐ ಹೊಸ ಹೊಸ ನಾಣ್ಯಗಳನ್ನು ತಯಾರಿಸಿದ್ದರಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ.ಏತನ್ಮಧ್ಯೆ ಕೆಲವು ನಕಲಿ ನಾಣ್ಯಗಳು ಮಾರುಕಟ್ಟೆಗೆ ಬಂದಿದ್ದರಿಂದ ಈ ಸಮಸ್ಯೆ ಬಂದಿದೆ. ಆದರೆ ಅಸಲಿ ನಾಣ್ಯವನ್ನು ಎಲ್ಲ ವ್ಯಾಪಾರಿಗಳು ತೆಗೆದುಕೊಳ್ಳಬಹುದು. ಸಾರ್ವಜನಿಕರೂ ಕೂಡ ನಿರ್ಭಯವಾಗಿ ವಹಿವಾಟು ನಡೆಸಬಹುದು ಎಂದು ಆರ್ ಬಿಐ ಹೇಳಿದೆ. ಆದರೆ ಇದೀಗ ಸಾರ್ವಜನಿಕರೇ ಈ ರೀತಿ ವದಂತಿಗಳಿಗೆ ಕಿವಿಗೊಟ್ಟು 10 ರೂ. ನಾಣ್ಯ ಸ್ವೀಕರಿಸದಿರುವುದು ಸಮಸ್ಯೆಗೆ ಕಾರಣವಾಗಿದೆ.