ಧಾರವಾಡ: ಪಾಲಕರು ಇಲ್ಲವೇ ಪೋಷಕರು ತಮ್ಮ ಮಕ್ಕಳ ಮೇಲೆ ಇಂತಿಷ್ಟೇ ಅಂಕಗಳನ್ನು ಗಳಿಸಬೇಕೆಂಬ ಒತ್ತಡ ಹೇರಬಾರದು. ಒತ್ತಡರಹಿತ ಕಲಿಕೆಯಿಂದ ಮಾತ್ರ ವಿಷಯ ಪ್ರಭುತ್ವ ಅಧಿಕವಾಗಲು ಸಾಧ್ಯ ಎಂದು ಡಿಸಿ ನಿತೇಶ ಪಾಟೀಲ ಹೇಳಿದರು.
ಚರಂತಿಮಠ ಗಾರ್ಡನ್‌ನಲ್ಲಿರುವ ಲೀಲಾವತಿ ಆರ್. ಚರಂತಿಮಠ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪೂರ್ವ ಪ್ರಾಥಮಿಕ ವಿಭಾಗದ ಚಿಣ್ಣರ ವಿಶೇಷ ಘಟಿಕೋತ್ಸವ ಹಾಗೂ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತವು ಬಹುಬೇಗನೆ 5 ಟ್ರಿಲಿಯನ್ ಮೊತ್ತದ ಆರ್ಥಿಕತೆ ಹೊಂದಲಿದ್ದು, ನಮ್ಮ ದೇಶದಲ್ಲಿ 10ನೇ ತರಗತಿ ಮುಗಿಸಿದ ಯುವ ಪೀಳಿಗೆಗೆ ಬಹಳಷ್ಟು ವೃತ್ತಿಪರ ಕೋರ್ಸ್‌ಗಳ ಅತ್ಯುತ್ತಮ ಅವಕಾಶಗಳಿವೆ. ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿಕೊಂಡು ತಮ್ಮ ಅಭಿರುಚಿಗೆ ತಕ್ಕಂತೆ ಆಳವಾದ ಅಧ್ಯಯನಕ್ಕೆ ವಿದ್ಯಾರ್ಥಿಗಳು ತೆರೆದುಕೊಳ್ಳಬೇಕು. ಕೇವಲ ಪರೀಕ್ಷಾ ದೃಷ್ಟಿಯಿಂದ ವ್ಯಾಸಂಗ ಮಾಡಿದರೆ ವಿಷಯ ಪ್ರಭುತ್ವವಿಲ್ಲದೇ ಬದುಕಿನಲ್ಲಿ ವಿಫಲತೆ ಹೊಂದಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪಾರಿತೋಷಕ ವಿತರಿಸಿ ಮಾತನಾಡಿದ ಐಶ್ವರ್ಯ ನಿತೇಶ ಪಾಟೀಲ, ಸಮಯದ ಸದ್ಬಳಕೆಯಿಂದ ಮಾತ್ರ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ನ್ಯಾಯವಾದಿ ಅರುಣ ಚರಂತಿಮಠ ಮಾತನಾಡಿ, ಸಮಾಜಕ್ಕೆ ಉಪಯುಕ್ತವಾಗುವ ರೀತಿಯಲ್ಲಿ ಮಕ್ಕಳ ಭವಿಷ್ಯವನ್ನು ರೂಪಿಸಲು ಹೊಸತು ಪ್ರಯೋಗದ ಚಟುವಟಿಕೆಗಳ ಮೂಲಕ ಶಾಲೆಯು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಗಮನ ಸೆಳೆದ ಚಿಣ್ಣರು: ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದ ಮಕ್ಕಳು ನೀಲಿ-ಕೆಂಪು ಬಣ್ಣದ ನಿಲುವಂಗಿಯನ್ನೊಳಗೊಂಡ ಪುಟಾಣಿ ಘಟಿಕೋತ್ಸವದ ಸಮವಸ್ತ್ರ ಧರಿಸಿ, ತಲೆಗೆ ಟೊಪ್ಪಿ ಹಾಕಿಕೊಂಡು ಗಮನ ಸೆಳೆದರು. ಮಕ್ಕಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ರಶ್ಮಿ ಪಾಟೀಲ ಹಾಗೂ ವರ್ಷಾ ಲಾತೂರಕರ ನಿರೂಪಿಸಿದರು. ಆಪ್ತ ಸಮಾಲೋಚಕ ಅಮಿತಕುಮಾರ ವಂದಿಸಿದರು. ಉಪ ಪ್ರಾಚಾರ್ಯೆ ವಿಜಯಲಕ್ಷ್ಮೀ, ಲೆಕ್ಕ ಪರಿಶೋಧಕ ಸಿದ್ದು ಬೆಟಗೇರಿ, ಆಡಳಿತಾಧಿಕಾರಿ ಸೋಮೇಶ ಗಂಗಣ್ಣವರ ಇದ್ದರು.