ಬೆಂಗಳೂರು: “ಕಟ್ಟಡ ಕೂಲಿ ಕಾರ್ಮಿಕರನ್ನು ಕೆಲಸದಿಂದ ತೆಗೆದರೆ, ಸಂಬಂಧಪಟ್ಟ ಕಟ್ಟಡದ ನಕ್ಷೆ ಮಂಜೂರಾತಿ ರದ್ದುಪಡಿಸಲಾಗುವುದು ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಸಿದರು.
ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗದ ಇಸ್ಕಾನ್ ಸಂಸ್ಥೆ ಸಹಯೋಗದಲ್ಲಿ 40 ಸಾವಿರ ಕಟ್ಟಡ ಕೂಲಿ ಕಾರ್ಮಿಕರಿಗೆ 21 ದಿನಗಳಿಗೆ ಬೇಕಾಗುವ ಅಗತ್ಯ ಆಹಾರ ಸಾಮಗ್ರಿ ಹಾಗೂ 50 ಸಾವಿರ ಮಾಸ್ಕ್, 800 ಸ್ಯಾನಿಟೈಸರ್ ವಿತರಣೆಗೆ ಸೋಮವಾರ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಇಂದು ಗುತ್ತಿಗೆದಾರರ ಸಭೆ: ಕೂಲಿ ಕಾರ್ಮಿಕರು ಬೆಂಗಳೂರಿನಿಂದ ತಮ್ಮ ಸ್ವಂತ ಊರುಗಳಿಗೆ ತೆರಳುತ್ತಿದ್ದಾರೆ. ಗುತ್ತಿಗೆದಾರರು ಬೇರೆ ಊರುಗಳಿಂದ ಕೆಲಸಕ್ಕೆ ಕರೆತಂದ ಕಟ್ಟಡ ಕಾರ್ಮಿಕರ ಮೇಲೆ ಒತ್ತಡ ಹೇರಿ, ಊರುಗಳಿಗೆ ತೆರಳುವಂತೆ ಸೂಚಿಸುತ್ತಿದ್ದಾರೆ. ಇದು ಸಲ್ಲದು. ಕಟ್ಟಡ ಕಾರ್ಮಿಕರು ಇರುವ ಸ್ಥಳದಲ್ಲೇ ಊಟ, ವಸತಿ ವ್ಯವಸ್ಥೆ ಮಾಡುವುದರ ಜತೆಗೆ ವೈದ್ಯಕೀಯ ತಪಾಸಣೆ ಮಾಡಿಸಬೇಕು. ಈ ಸಂಬಂಧ ಮಂಗಳವಾರ ನಗರದ ಗುತ್ತಿಗೆದಾರರ ಸಭೆ ಕರೆಯಲಾಗಿದೆ ಎಂದರು.
ಸ್ಥಳಕ್ಕೆ ಆಹಾರ ಪೂರೈಕೆ: ಊಟದ ವ್ಯವಸ್ಥೆ ಕಲ್ಪಿಸುವಂತೆ ನಗರದಲ್ಲಿ 15 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಆ ಸಂಖ್ಯೆ ನಿತ್ಯ ಹೆಚ್ಚುತ್ತಲೇ ಇದೆ. ಪಾಲಿಕೆ ಎಂಟು ವಲಯ ಹಾಗೂ ಡಿಸಿಪಿ ಕಚೇರಿಗಳಿಗೆ ಆಹಾರ ಸಾಮಗ್ರಿ ಸಂಗ್ರಹಿಸಿ ಅಲ್ಲಿಂದ ಹೊಯ್ಸಳ ವಾಹನದ ಮೂಲಕ ಕಟ್ಟಡ ಕೂಲಿ ಕಾರ್ಮಿಕರು ಇರುವ ಸ್ಥಳಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಸಹಾಯವಾಣಿ 15524 ಅಥವಾ ಪೊಲೀಸ್ ಇಲಾಖೆ 100ಗೆ ಕರೆ ಮಾಡಿದರೆ, ಕೂಡಲೇ ಕಟ್ಟಡ ಕಾರ್ಮಿಕರಿಗೆ ಆಹಾರ ವ್ಯವಸ್ಥೆ ಕಲ್ಪಿಸಲಾಗುವುದು. ಬಡವರಿಗೆ, ಕೂಲಿ ಕಾರ್ಮಿಕರಿಗೆ ಇಸ್ಕಾನ್ ಸಂಸ್ಥೆ ಅಕ್ಷಯ ಪಾತ್ರೆ ಸಹಯೋಗದಲ್ಲಿ 40 ಸಾವಿರ ಮಂದಿಗೆ ಆಹಾರ ವಿತರಿಸಲಾಗುವುದು. ರಾಜಸ್ತಾನಿ ಯೂತ್ ಅಸೋಸಿಯೇಷನ್‌ನಿಂದ ಪೌರಕಾರ್ಮಿಕರಿಗೆ 50 ಸಾವಿರ ಮಾಸ್ಕ್ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಮೇಯರ್ ಗೌತಮ್ ಕುಮಾರ್, ಸಂಸದರಾದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ, ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಮತ್ತಿತರರು ಇದ್ದರು.