ಯಡ್ರಾಮಿ: ರಾಜ್ಯದ ಜನಪ್ರತಿನಿಧಿಗಳು ರಾಜಕೀಯ ಮಾಡುವುದನ್ನು ಬಿಡಬೇಕು. ತಾಯ್ನಾಡಿಗೆ ಅವಮಾನ ಮಾಡುವ ದುರುಳರ ವಿರುದ್ಧ ಧ್ವನಿ ಎತ್ತಿ ತಪ್ಪಿತಸ್ಥ ಶಿವಸೇನೆ ಹಾಗೂ ಎಂಇಎಸ್ ಸಂಘಟನೆಗಳ ವಿರುದ್ಧ ಹೋರಾಡಲು ಮುಂದಾಗಬೇಕು ಎಂದು ಕರವೇ (ಪ್ರವೀಣಶೆಟ್ಟಿ ಬಣ) ತಾಲೂಕು ಘಟಕದ ಅಧ್ಯಕ್ಷ ವಿಶ್ವನಾಥ ಪಾಟೀಲ ಆಗ್ರಹಿಸಿದರು.
ಪಟ್ಟಣದಲ್ಲಿ ಗುರುವಾರ ಕನ್ನಡ ಪರ ಸಂಘಟನೆಗಳು ಸೇರಿ, ಕನ್ನಡ ಧ್ವಜ ಸುಟ್ಟು ಅವಮಾನಿಸಿದ ಮಹಾರಾಷ್ಟ್ರದ ಶಿವಸೇನೆ ಹಾಗೂ ಎಂಇಎಸ್ ಸಂಘಟನೆಗಳನ್ನು ರದ್ದು ಮಾಡಿ, ಕನ್ನಡ ಧ್ವಜಕ್ಕೆ ಅವಮಾನ ಮಾಡಿದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ತಾಯ್ನಾಡಿಗೆ ಅವಮಾನವಾದರೆ ಹೆತ್ತ ತಾಯಿಗೆ ಅವಮಾನ ಮಾಡಿದಂತೆ. ಇಷ್ಟೆಲ್ಲ ಆದರೂ ಏನೂ ತಿಳಿಯದಂತಿರುವ, ನಾಡ ಧ್ವಜಕ್ಕೆ ಅವಮಾನಿಸಿದವರ ವಿರುದ್ಧ ಧ್ವನಿ ಎತ್ತದೆ ಇರುವ ರಾಜಕಾರಣಿಗಳ ನಡೆ ಕನ್ನಡಿಗರನ್ನು ಕೆರಳಿಸುವಂತೆ ಮಾಡಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತು ಕೂಡಲೇ ಕನ್ನಡ ನಾಡಿಗೆ ಅವಮಾನಿಸಿದ ಶಿವಸೇನೆ ಹಾಗೂ ಎಂಇಎಸ್ ಸಂಘಟನೆಗಳನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಇದಕ್ಕೂ ಮುನ್ನ, ಪಟ್ಟಣದ ಸರ್ದಾರ್ ಶರಣಗೌಡ ವೃತ್ತದಿಂದ ಶಿವಸೇನೆ ವಿರುದ್ಧ ಧಿಕ್ಕಾರ ಕೂಗುತ್ತ ಅಂಬೇಡ್ಕರ ವೃತ್ತದ ವರೆಗೆ ಸಾಗಿದ ಕಾರ್ಯಕರ್ತರು, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ತಹಶೀಲ್ದಾರ್ ಶಾಂತಗೌಡ ಬಿರಾದಾರಗೆ ಮನವಿ ಸಲ್ಲಿಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಈರಣ್ಣ ಭಜಂತ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಲ್ಲಾಪಟೇಲ ಮಾಲಿಬಿರಾದಾರ, ಬಿಸಿಲು ನಾಡಿನ ಹಸಿರು ಸೇನೆ ಜಿಲ್ಲಾಧ್ಯಕ್ಷ ಶಫಿಉಲ್ಲಾ ದಖನಿ, ತಾಲೂಕು ಅಧ್ಯಕ್ಷ ಲಾಳೇಸಾಬ ಮನಿಯಾರ್, ಜೈ ಕರವೇ ಅಧ್ಯಕ್ಷ ಅಮರನಾಥ ಕುಳಗೇರಿ, ಕರವೇ ಯುವ ಸೈನ್ಯದ ಅಧ್ಯಕ್ಷ ಮಾಳು ಕಾರಗೊಂಡ, ಅಫ್ರೋಜ್ ಅತನೂರ, ಬಾಲು ಮಡಿವಾಳ್ಕರ, ಸಿದ್ಧು ಕುಕನೂರ, ಮಲ್ಲಯ್ಯ ಕುಕನೂರ, ದೇವು ಗುತ್ತೇದಾರ ಇತರರಿದ್ದರು.