Advertisement

ಜೈನ ಮುನಿ ಕೊಲೆ ವಿಚಾರದಲ್ಲಿ ರಾಜಕಾರಣ ಬೇಡ: ಗೃಹ ಸಚಿವ ಡಾ.ಜಿ.ಪರಮೇಶ್ವರ

12:45 PM Jul 10, 2023 | Team Udayavani |

ಹುಬ್ಬಳ್ಳಿ: ಚಿಕ್ಕೋಡಿಯ ಜೈನ ಮುನಿ ಕಾಮಕುಮಾರ ನಂದಿ ಸ್ವಾಮೀಜಿ ಕೊಲೆ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಪೊಲೀಸರು ಕಾನೂನು ವ್ಯಾಪ್ತಿಯಲ್ಲಿ ಪ್ರಾಮಾಣಿಕ ತನಿಖೆ ಮಾಡುತ್ತಿದ್ದಾರೆ. ಆರೋಪಿಗಳ ರಕ್ಷಣೆ ಸೇರಿದಂತೆ ಇತ್ಯಾದಿಗಳು ಸುಳ್ಳು. ಇಂತಹ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಸರಿಯಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

Advertisement

ಸೋಮವಾರ ಇಲ್ಲಿನ ವರೂರಿನ ಗುಣಧರ ನಂದಿ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು‌.

ಪ್ರಕರಣದ ತನಿಖೆಯು ಡಿವೈಎಸ್ಪಿ ಅಧಿಕಾರಿಯ ನೇತೃತ್ವದಲ್ಲಿ ನಡೆಯುತ್ತಿದೆ. ಪ್ರಕರಣವನ್ನು ಸಿಬಿಐ ಗೆ ವಹಿಸುವ ಅಗತ್ಯವಿಲ್ಲ. ಇದು ಯಾರ ವೈಫಲ್ಯದಿಂದ ನಡೆದ ಘಟನೆಯಲ್ಲ. ಇದು ಇತಿಹಾಸದಲ್ಲಿ ನೋಡದಂತಹ ಘಟನೆಯಾಗಿದೆ. ಈಗಾಗಲೆ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ತನಿಖೆಯ ನಂತರ ಇನ್ನಷ್ಟು ವಿಚಾರಗಳು ಬರಲಿವೆ. ಇಲಾಖೆಯ ಸಚಿವನಾಗಿ ತನಿಖೆಯ ಹಂತದಲ್ಲಿರುವ ಕೆಲ ವಿಚಾರಗಳನ್ನು ಹೇಳಲು ಬರುವುದಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಪ್ರಕರಣದ ತನಿಖೆಯಾಗಲಿದೆ. ಕಾನೂನು ಸುವ್ಯವಸ್ಥೆ ಎಡಿಜಿಪಿ ಅವರನ್ನು ಕಳುಹಿಸಲಾಗಿತ್ತು. ಸದ್ಯ ದೊರಕಿರುವ ಮಾಹಿತಿಯನ್ನು ನೀಡಿದ್ದಾರೆ. ಇಂತಹ ವಿಚಾರಗಳಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.

ಇದನ್ನೂ ಓದಿ:NCP Crisis; ಅಜಿತ್ ಕ್ಯಾಂಪ್ ಬಿಟ್ಟು ಶರದ್ ಪವಾರ್ ಗೆ ಬೆಂಬಲ ನೀಡಿದ ಮೂವರು ಶಾಸಕರು

ಘಟನೆಯ ನಂತರ ಗುಣಧರನಂದಿ ಸ್ವಾಮೀಜಿಗಳು ಬಹಳ ನೊಂದಿದ್ದಾರೆ. ಅವರನ್ನು ಭೇಟಿ ಮಾಡುವ ಉದ್ದೇಶದಿಂದಲೇ ಬಂದಿದ್ದೇನೆ. ಅವರೊಂದಿಗೆ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದೇನೆ. ಅವರು ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸಿದ್ದಾರೆ. ಮುಖ್ಯಮಂತ್ರಿಗಳು ಕೂಡ ಕರೆ ಮಾಡಿ ಸ್ವಾಮೀಜಿಗಳೊಂದಿಗೆ ಮಾತನಾಡಿದ್ದಾರೆ. ಜೈನ ಸ್ವಾಮೀಜಿಗಳ ಯಾತ್ರೆ ವೇಳೆ ರಕ್ಷಣೆ ಕೊಡಬೇಕು. ಜೈನ ಮಂದಿರಗಳಿಗೆ ರಕ್ಷಣೆ ನೀಡಬೇಕು. ಜೈನ ಮುನಿಗಳು ತಂಗುವ ಜಾಗ ಅಧಿಕೃತ ಆಗಬೇಕು. ಜೈನ ಮಂಡಳಿ ಮಾಡಬೇಕು ಎನ್ನುವ ನಾಲ್ಕು ಬೇಡಿಕೆಗಳನ್ನು ಸ್ವಾಮೀಜಿ ಇಟ್ಟಿದ್ದಾರೆ‌. ಕೆಲವು ನಮ್ಮ ಹಂತದಲ್ಲಿ ಆಗಬಹುದಾದ ಬೇಡಿಕೆಗಳಾಗಿವೆ. ಜೈನ ಮಂಡಳಿ ಸ್ಥಾಪನೆ ಕುರಿತು ಎಂದು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡುವುದಾಗಿ ತಿಳಿಸಿದರು.

Advertisement

ನಾವು ಜೈನ ಮಂದಿರಕ್ಕೆ ರಕ್ಷಣೆ ಕೊಡುತ್ತೇವೆ‌. ರಾಜ್ಯದಲ್ಲಿ ಇಂತಹ ಘಟನೆ ಆಗಬಾರದು. ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಯಾರೇ ಮಾಡಿದರೂ ಅವರ ವಿರುದ್ಧ ಕಾನೂನು ಕ್ರಮವಾಗಲಿದೆ. ಸ್ವಾಮೀಜಿ ಕೊಲೆ ಪ್ರಕರಣದಲ್ಲಿ ವಿನಾಕಾರಣ ಗೊಂದಲ ಮೂಡಿಸುವ ಕೆಲಸ ಆಗಬಾರದು. ಜನಪ್ರತಿನಿಧಿಗಳಾದವರು ಈ ಬಗ್ಗೆ ಜಾಗರೂಕತೆಯಿಂದ ಮಾತನಾಡಬೇಕು ಎಂದರು.

ಆರೋಪಿಗಳ ಹೆಸರನ್ನು ಹಿಂದೆ ಮುಂದೆ ಮಾಡಲಾಗಿದೆ ಎನ್ನುವ ಶಾಸಕ ಅಭಯ ಪಾಟೀಲ ಆರೋಪಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ, ಅವರು ಹೇಳಿದಾಕ್ಷಣ ನಿಜ ಆಗುವುದಿಲ್ಲ. ಪೊಲೀಸರು ಕಾನೂನು ವ್ಯಾಪ್ತಿಯಲ್ಲಿ ತನಿಖೆ ಮಾಡುತ್ತಿದ್ದು, ತನಿಖೆಯ ನಂತರ ವಾಸ್ತವ ಬಹಿರಂಗವಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next