Advertisement

ಬೀದಿಯಲ್ಲೇಕೆ ಹೋರಾಡುತ್ತೀರಿ ವಿಧಾನಸೌಧಕ್ಕೆ ಬನ್ನಿ​​​​​​​

06:00 AM Nov 20, 2018 | |

ಬೆಂಗಳೂರು : ನನ್ನ ಜತೆ ಚೆಲ್ಲಾಟ ಆಡಬೇಡಿ. ಸಮಸ್ಯೆಯ ಕುರಿತು ಮಾತುಕತೆ ಮಾಡೋಣ. ಸರ್ಕಾರದಿಂದ ತಪ್ಪಾಗಿದ್ದರೆ ಸರಿಪಡಿಸುತ್ತೇವೆ. ಪ್ರತಿಭಟನೆಯಲ್ಲಿ ಟ್ಯಾಕ್ಟರ್‌ ಸುಟ್ಟವರೇ ನಾಳೆ ಮುಖ್ಯಮಂತ್ರಿ ಬಳಿಗೆ ಬಂದು ಪರಿಹಾರ ಕೇಳುತ್ತಾರೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಭಾನುವಾರದಿಂದಲೇ ಭುಗಿಲೆದ್ದ ಕಬ್ಬು ಬೆಳೆಗಾರರ ಪ್ರತಿಭಟನೆ ಕುರಿತು ಸೋಮವಾರ ಸಂಜೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಬ್ಬು ಬೆಳೆಗಾರರು ಯಾವ ಕಾರಣಕ್ಕೆ ಹೋರಾಟ ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಎರಡು ಸಾವಿರ ಕೋಟಿ ರೂ. ಕಬ್ಬು ಬೆಳೆಗಾರರ ಬಾಕಿ ಇತ್ತು, ಅದು ಈಗ 35 ಕೋಟಿಗೆ ಇಳಿಸಿದ್ದೇವೆ. ಇಷ್ಟಾದರೂ, ಏಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದು ಹೇಳಿದರು.

ಬಾಕಿ ಹಣಕ್ಕಾಗಿ ಹೋರಾಟ ಮಾಡುತ್ತಿರುವವರಿಗೆ ಅ.16ರಂದು ದೂರವಾಣಿ ಕರೆ ಮಾಡಿ ಮಾತುಕತೆಗೆ ಬೆಂಗಳೂರಿಗೆ ಬರುವಂತೆ ಆಹ್ವಾನಿಸಿದ್ದೆ. ಸಚಿವ ಸಂಪುಟ ಸಭೆ ಸಹಿತವಾಗಿ ಹಲವು ಕಾರಣಗಳಿಂದ ಬೆಳಗಾವಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಅವರ ಎಲ್ಲ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಮಾಡುವುದಾಗಿ ತಿಳಿಸಿದ್ದೆ. ಪ್ರತಿಭನೆ ಮಾಡದಂತೆಯೂ ಮನವಿ ಮಾಡಿದ್ದೆ, ಇಷ್ಟಾದರೂ, ಪ್ರತಿಭಟನೆ ಮಾಡಿದ್ದಾರೆ. ಇಂತಹವರಿಗೆ ಏನು ಮಾಡಬೇಕು? ಸರ್ಕಾರದ ಮನವಿಗೂ ಬೆಲೆ ಇಲ್ಲವೇ ಎಂದು ಹೋರಾಟಗಾರರನ್ನು ಪುನಃ ಪ್ರಶ್ನಿಸಿದ್ದಾರೆ.

ನಾನೇನು ಸರ್ಕಾರದಿಂದ ಒಂದು ರೂಪಾಯಿ ಕೂಡ ಪಡೆದಿಲ್ಲ. ಪೆಟ್ರೋಲ್‌ ಬಿಲ್‌, ಟಿಎ,ಡಿಎ ಯಾವುದನ್ನು ಪಡೆಯುತ್ತಿಲ್ಲ. ಪ್ರಮಾಣವಚನ ಕಾರ್ಯಕ್ರಮದ ಖರ್ಚನ್ನು ನಾನೇ ಭರಿಸಿದ್ದೇನೆ. ಖಾಸಗಿ ವ್ಯವಹಾರ ನೋಡಿಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಇದೆ. ನಾನೇನು ಭದ್ರವಾಗಿ ಗೂಟ ಹೊಡೆದುಕೊಂಡು ಇಲ್ಲಿ ಕುಳಿತಿಲ್ಲ. ಅಷ್ಟು ತಿಳಿದುಕೊಳ್ಳದವನೂ ನಾನಲ್ಲ. ಅಧಿಕಾರ ನಮ್ಮ ಆಸ್ತಿಯೂ ಅಲ್ಲ ಎಂಬುದು ಗೊತ್ತಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.ರೈತರ ಪ್ರತಿಭಟನೆ ಸಂದರ್ಭದಲ್ಲಿ ನನ್ನ ಪ್ರತಿಕೃತಿಗೆ ಕೊಡಲಿಯೇಟು ನೀಡಲಾಗುತ್ತಿತ್ತು. ಪ್ರತಿಕೃತಿಗೇಕೆ ಹೊಡೆಯುತ್ತೀರಿ? ವಿಧಾನಸೌಧಕ್ಕೆ ಬನ್ನಿ. ನಾನು ವಿಧಾನಸೌಧದಲ್ಲೇ ಇರುತ್ತೇನೆ. ಸಮಸ್ಯೆ ಏನೆಂದು ಹೇಳಿ. ನಾನು ಪಲಾಯನವಾದಿಯಲ್ಲ ಎಂದು ಮೊನಚಾಗಿ ಹೇಳಿದರು.

35 ಕೋಟಿ ಬಾಕಿ
ಕಬ್ಬು ಬೆಳೆಗಾರರು 420 ಕೋಟಿ ರೂ. ಬಾಕಿ ಇದೆ ಎಂದು ಹೇಳುತ್ತಿದ್ದಾರೆ. ಆದರೆ, ಅಧಿಕಾರಿಗಳಿಂದ ಎಲ್ಲ ರೀತಿಯ ಮಾಹಿತಿ ತರಿಸಿಕೊಂಡಿದ್ದೇನೆ. 2 ಸಾವಿರ ಕೋಟಿ ಬಾಕಿ ಹಣದಲ್ಲಿ ಪಾವತಿಯಾಗಬೇಕಿರುವುದು ಕೇವಲ 35 ಕೋಟಿ ರೂ. ಅದನ್ನು ಕೊಡಿಸಲು ಕಾರ್ಖಾನೆ ಮಾಲೀಕರ ಜತೆ ಜಿಲ್ಲಾಧಿಕಾರಿಗಳು ನಿರಂತರ ಮಾತುಕತೆ ನಡೆಸುತ್ತಿದ್ದಾರೆ. ಬೀದಿಯಲ್ಲಿ ಹೋರಾಟ ಮಾಡಿದರೆ ಯಾವುದೇ ಪ್ರಯೋಜವಿಲ್ಲ. ಸುವರ್ಣಸೌಧಕ್ಕೆ ನುಗ್ಗಿದ್ದು ಮಹಾರಾಷ್ಟ್ರದ ಲಾರಿ ಎಂಬುದು ಗೊತ್ತಿದೆ. ರೈತರಿಗೆ ಬಾಕಿ ನೀಡಿರುವವರು ಎಷ್ಟೇ ದೊಡ್ಡ ವ್ಯಕ್ತಿ ಅಥವಾ ಸಚಿವ, ಶಾಸಕರೇ ಆಗಿದ್ದರೂ ಬಿಡುವುದಿಲ್ಲ ಬಾಕಿ ವಸೂಲಿ ಮಾಡುತ್ತೇವೆ ಎಂದು ಹೇಳಿದರು.

Advertisement

ಬಿಜೆಪಿ ಪಾಠ ನಮಗೆ ಬೇಕಿಲ್ಲ :
ರೈತರ ಹೋರಾಟದಲ್ಲಿ ಬಿಜೆಪಿಯವರು ವ್ಯರ್ಥ ಕಸರತ್ತು ನಡೆಸುತ್ತಿದ್ದಾರೆ. ಅವರೇನೇ ಮಾಡಿದರೂ ಎದುರಿಸಲು ಸಿದ್ಧನಿದ್ದೇನೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರೈತನನ್ನು ಗುಂಡಿಟ್ಟು ಕೊಂದಿಲ್ಲವೇ? ಪ್ರತಿಭಟಿಸಿದ ರೈತರ ವಿರುದ್ಧ ಕ್ರಮ ತೆಗೆದುಕೊಳ್ಳದ ಪೊಲೀಸರ ಮೇಲೆ ಯಡಿಯೂರಪ್ಪ ಸಿಟ್ಟಾಗಿಲ್ಲವೇ? 2006ರಲ್ಲಿ ರೈತರ ಸಂವಾದ ಕಾರ್ಯಕ್ರಮ ದಿನಪೂರ್ತಿ ನಡೆದಿದ್ದರೂ, ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿದ್ದು ಬಂದಿರಲಿಲ್ಲ. ಇಂಥವರಿಂದ ರೈತರ ರಕ್ಷಣೆಯ ಪಾಠ ಕೇಳಬೇಕೇ? ಬೆಳಗಾವಿ ಅಧಿವೇಶನದಲ್ಲಿ ಎಲ್ಲ ರೀತಿಯ ಸವಾಲು ಎದುರಿಸಲು ಸರ್ಕಾರ ಸಿದ್ಧವಿದೆ ಎಂದರು.

ಕೇಂದ್ರ ಸರ್ಕಾರದ ಹುನ್ನಾರ
ರಾಜ್ಯದ ರೈತರ 45 ಸಾವಿರ ಕೋಟಿ ರೂ.ಗಳ ಸಾಲಮನ್ನಾ ಮಾಡಿದ್ದೇವೆ. ಬೇರೆ ಬೇರೆ ರಾಜ್ಯಗಳಲ್ಲಿ ಮಾಡಿಸುವ ಸಾಲಮನ್ನಾದ ಮಾಹಿತಿ ಪಡೆದಿದ್ದೇವೆ. ಛತ್ತೀಸ್‌ಗಡ್‌ನ‌ಲ್ಲಿ ಭಾನುವಾರ ನಡೆದ ರ್ಯಾಲಿಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿಯವರು ಕರ್ನಾಟಕದ ಸರ್ಕಾರ ಸಾಲಮನ್ನಾ ಮಾಡಿಲ್ಲ. ವಾರೆಂಟ್‌ ನೀಡಿದೆ ಎಂದಿದ್ದಾರೆ. ಹೌದು, ಕೇಂದ್ರ ಸರ್ಕಾರವೇ ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ರೈತರಿಗೆ ನೋಟಿಸ್‌ ಹೆಸರಿನ ವಾರೆಂಟ್‌ ನೀಡುತ್ತಿದೆ. ಸಹಕಾರಿ ಬ್ಯಾಂಕ್‌ಗಳು ರೈತರಿಗೆ ನೋಟಿಸ್‌ ನೋಡುತ್ತಿಲ್ಲ. ರಾಷ್ಟ್ರೀಕೃತ ಬ್ಯಾಂಕ್‌ಗಳು ಮಾತ್ರ ನೋಟಿಸ್‌ ನೀಡುತ್ತಿದೆ. ಇದರಲ್ಲಿ ಕೇಂದ್ರ ಹುನ್ನಾರ ಇದೆ ಎಂದು ಆರೋಪಿಸಿದರು.

ಬೀದಿಯಲ್ಲಿ ಏಕೆ ಹೋರಾಟ ಮಾಡುತ್ತಿದ್ದಿರಿ..ವಿಧಾನಸೌಧದ ಒಳಗೆ ಬನ್ನಿ. ಇಲ್ಲಿ ನಿನಗೆ ಹೋರಾಟ ಮಾಡಲು ಸ್ಥಳಾವಕಾಶ ಮಾಡಿಕೊಡುತ್ತೇನೆ. ಪ್ರತಿಭಟನೆಯ ಹಿಂದೆ ಯಾರ ಚಿತಾವಣೆ ಇದೆ ಎಂಬುದು ಗೊತ್ತಿದೆ. ಇದ್ಯಾವುದಕ್ಕೂ ನಾನು ಹೆದರುವುದಿಲ್ಲ. ರೈತರ ಬಗ್ಗೆ ಗೌರವ ಇದೆ. ಅವರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ.
– ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next