Advertisement

ಸಿಟಿ ಬಸ್‌ಗಳಲ್ಲಿ ಟಿಕೆಟ್‌ ನೀಡದಿದ್ದರೆಪ್ರಯಾಣಿಕರು ದುಡ್ಡುಕೊಡಬೇಡಿ

09:56 AM Apr 23, 2018 | |

ಮಹಾನಗರ: ನಗರದಲ್ಲಿ ಟಿಕೆಟ್‌ ನೀಡದ, ಕರ್ಕಶ ಹಾರ್ನ್ ಬಳಸುವುದು, ಅಜಾಗರೂಕತೆಯಿಂದ ಚಾಲನೆ ಮಾಡುವುದು ಸೇರಿದಂತೆ ಪ್ರಯಾಣಿಕರು – ಸಾರ್ವಜನಿಕರಿಗೆ ತೊಂದರೆಯುಂಟು ಮಾಡುವ ಖಾಸಗಿ ಸಿಟಿ ಬಸ್‌ಗಳ ವಿರುದ್ಧ ಕಠಿನ ಕ್ರಮ ಜರಗಿಸುವುದಕ್ಕೆ ಇದೀಗ ಖಾಸಗಿ ಸಿಟಿ ಬಸ್‌ ಮಾಲಕರ ಸಂಘದವರೇ ತೀರ್ಮಾನಿಸಿದ್ದಾರೆ.

Advertisement

ಆ ಮೂಲಕ ಖಾಸಗಿ ಸಿಟಿ ಬಸ್‌ಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಕಟ್ಟು ನಿಟ್ಟಿನ ಕ್ರಮ ಜರಗಿಸುವ ಜತೆಗೆ ಸಿಟಿ ಬಸ್‌ ವ್ಯವಸ್ಥೆಯನ್ನು ಪ್ರಯಾಣಿಕರಿಗೆ ಮತ್ತಷ್ಟು ಹತ್ತಿರವಾಗಿಸಲು ಜಿಲ್ಲಾ ಸಿಟಿ ಬಸ್‌ ಮಾಲಕರ ಸಂಘ ತೀರ್ಮಾನ ಮಾಡಿದೆ. ಏಕೆಂದರೆ, ಇತ್ತೀಚಿನ ದಿನಗಳಲ್ಲಿ ಕೆಲವು ಸಿಟಿ ಬಸ್‌ ಚಾಲಕರು/ನಿರ್ವಾಹಕರು ಸಂಘ ಅಳವಡಿಸಿರುವ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದಿರುವುದು ಗಮನಕ್ಕೆ ಬಂದಿದ್ದು, ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸಿಟಿ ಬಸ್‌ ಮಾಲಕರ ಸಂಘದವರೇ ಬಸ್‌ಗಳಲ್ಲಿ ಖುದ್ದು ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ.

ಎಲ್ಲ ಸಿಟಿ ಬಸ್‌ಗಳಲ್ಲಿ ಕಡ್ಡಾಯವಾಗಿ ಎಲೆಕ್ಟ್ರಾನಿಕ್‌ ಟಿಕೆಟ್‌ ಮೆಷಿನ್‌(ಇಟಿಎಂ) ಮೂಲಕವೇ ಟಿಕೆಟ್‌ ನೀಡಬೇಕೆಂಬ ನಿಯಮವನ್ನು ಸಾರಿಗೆ ಇಲಾಖೆಯು ಕಳೆದ ವರ್ಷ ಜಾರಿಗೆ ತಂದಿದೆ. ಆದರೆ ಅನೇಕ ಸಿಟಿ ಬಸ್‌ಗಳು ಅದನ್ನು ಪಾಲಿಸುತ್ತಿಲ್ಲ. ಈ ಬಗ್ಗೆ ‘ಸುದಿನ’ ಕೂಡ ಈ ಹಿಂದೆ ವಾಸ್ತವ ವರದಿ ಪ್ರಕಟಿಸಿ ಪ್ರಯಾಣಿಕರಲ್ಲಿ ಟಿಕೆಟ್‌ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿತ್ತು. ಆಗ ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಬಸ್‌ ನಿರ್ವಾಹಕರಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದರು.

ಸಿಟಿ ಬಸ್‌ಗಳಲ್ಲಿ ಅನೇಕ ನಿಯಮ ಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂದು ಈ ಹಿಂದೆ ಉಪಲೋಕಾಯುಕ್ತ ನ್ಯಾ| ಸುಭಾಷ್‌ ಅಡಿ ಅವರಿಗೂ ಸಾರ್ವಜನಿಕರು ದೂರು ನೀಡಿದ್ದರು. ಅಂತಹ ಬಸ್‌ಗಳನ್ನು ಮುಟ್ಟುಗೋಲು ಹಾಕುವಂತೆ ಸಾರಿಗೆ ಇಲಾಖೆಗೂ ಸೂಚನೆ ನೀಡಿದ್ದರು. ಇಷ್ಟಾದರೂ ಕೆಲವು ಸಿಟಿ ಬಸ್‌ ನಿರ್ವಾಹಕರು ಪ್ರಯಾಣಿಕರಿಗೆ ಟಿಕೆಟ್‌ ನೀಡುವುದು ಸೇರಿದಂತೆ ಬಸ್‌ ಚಾಲನೆ, ರೂಟ್‌ ಪಾಲನೆ ಮುಂತಾದ ನಿಯಮಗಳನ್ನು ಸರಿಯಾಗಿ ಪಾಲಿಸದೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.

ಟಿಕೆಟ್‌ ನೀಡದಿದ್ದರೆ ಹಣ ನೀಡಬೇಡಿ
ದ.ಕ. ಜಿಲ್ಲಾ ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ಅಜೀಜ್‌ ಪರ್ತಿಪಾಡಿ ಅವರು ‘ಸುದಿನ’ಕ್ಕೆ ಪ್ರತಿಕ್ರಿಯೆ ನೀಡಿ, ಸಿಟಿ ಬಸ್‌ ಮಾಲಕರಿಗೆ ಕಡ್ಡಾಯವಾಗಿ ಟಿಕೆಟ್‌ ನೀಡಲೇಬೇಕೆಂದು ಅನೇಕ ಬಾರಿ ಸೂಚಿಸಲಾಗಿದೆ. ಆದರೂ ಕೆಲವು ಬಸ್‌ ಗಳಲ್ಲಿ ಇದನ್ನು ಪಾಲಿಸದಿರುವ ಬಗ್ಗೆ ಸಂಘದ ಗಮನಕ್ಕೆ ಬಂದಿದೆ. ಇದಕ್ಕೆ ಶಾಶ್ವತ ಪರಿಹಾರದ ಕಂಡುಕೊಳ್ಳುವ ಅಗತ್ಯವಿದೆ. ಕೇರಳದಲ್ಲಿ ಪ್ರಯಾಣಿಕರಿಗೆ ಬಸ್‌ ಟಕೆಟ್‌ ನೀಡುವುದು ಕಡ್ಡಾಯವಿದ್ದು, ಒಂದು ವೇಳೆ ಟಿಕೆಟ್‌ ನೀಡದಿದ್ದರೆ ಪ್ರಯಾಣಿಕರು ಹಣವೇ ನೀಡುವುದಿಲ್ಲ. ಅದೇ ಮಾದರಿಯನ್ನು ಇಲ್ಲಿನ ನಾಗರಿಕರೂ ಪಾಲಿಸಬೇಕು. ಅಷ್ಟೇ ಅಲ್ಲದೆ, ಇನ್ನೇನು ಕೆಲವು ದಿನಗಳಲ್ಲಿ ನಗರದ ನಾನಾ ಕಡೆಗಳಲ್ಲಿ ನಿಂತು ಸಿಟಿ ಬಸ್‌ಗಳಲ್ಲಿ ಕಾರ್ಯಾಚರಣೆ ನಡೆಸುತ್ತೇವೆ ಎಂದಿದ್ದಾರೆ.

Advertisement

ಟಿಕೆಟ್‌ ಇಲ್ಲದಿದ್ದರೆ ಒಂದು ರೂ. ಕಡಿಮೆ
‘ನಗರದಲ್ಲಿ ಸಂಚರಿಸುವ ಕೆಲವು ಖಾಸಗಿ ಸಿಟಿ ಬಸ್‌ ಗಳಲ್ಲಿ ನಿರ್ವಾಹಕರು ಟಿಕೆಟ್‌ ನೀಡುವುದಿಲ್ಲ. ಹಾಗಿದ್ದಾಗ, ಟಿಕೆಟ್‌ ದರಕ್ಕಿಂತ ಒಂದು ರೂ. ಕಡಿಮೆ ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೆ, ಈಗಾಗಲೇ ಖಾಸಗಿ ಸಿಟಿ ಬಸ್‌ ದರ ಹೆಚ್ಚಳವಾಗಿದೆ ಎನ್ನುತ್ತಿದ್ದಾರೆ’ ಎಂದು ಕೊಟ್ಟಾರ ಕ್ರಾಸ್‌ ನಿವಾಸಿ ಪ್ರದೀಪ್‌ ದೂರಿದ್ದಾರೆ.

ನಾವೇ ಕಾರ್ಯಾಚರಣೆ ನಡೆಸುತ್ತೇವೆ
ಸದ್ಯ ಬಸ್‌ ದರದಲ್ಲಿ ಯಾವುದೇ ಹೆಚ್ಚಳವಾಗಲಿಲ್ಲ. ಒಂದು ವೇಳೆ ನಿರ್ವಾಹಕರು ಹೆಚ್ಚಿನ ದರ ವಸೂಲಿ ಮಾಡಿದರೆ ಕೂಡಲೇ ಸಂಘದ ಗಮನಕ್ಕೆ ತನ್ನಿ. ನಿರ್ವಾಹಕರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಇಟಿಎಂ ಮೆಷಿನ್‌ ಮೂಲಕವೇ ಟಿಕೆಟ್‌ ನೀಡಬೇಕು ಎಂದು ನಿರ್ವಾಹಕರಿಗೆ ಅನೇಕ ಬಾರಿ ಸೂಚನೆ ನೀಡಿದ್ದೆವು. ಕೆಲವು ಬಸ್‌ಗಳಲ್ಲಿ ಅದು ಪಾಲನೆಯಾಗುತ್ತಿಲ್ಲ. ಸದ್ಯದಲ್ಲೇ ಈ ಬಗ್ಗೆ ಕಾರ್ಯಾಚರಣೆ ನಡೆಸುತ್ತೇವೆ. ತಪ್ಪಿತಸ್ಥರನ್ನು ನಮ್ಮ ಅಸೋಸಿಯೇಶನ್‌ನಿಂದ ವಜಾಗೊಳಿಸುತ್ತೇವೆ.
– ಅಜೀಜ್‌ ಪರ್ತಿಪಾಡಿ, ದ.ಕ. ಜಿಲ್ಲಾ ಖಾಸಗಿ ಸಿಟಿ ಬಸ್‌ ಮಾಲಕರ
ಸಂಘದ ಅಧ್ಯಕ್ಷ

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next