Advertisement

ಚುನಾವಣಾ ಕಾರ್ಯದಲ್ಲಿ ಅಲಕ್ಷ್ಯ ತೋರದಿರಿ: ನಂದಿನಿದೇವಿ

04:53 PM Nov 13, 2018 | Team Udayavani |

ಚಳ್ಳಕೆರೆ: ರಾಜ್ಯ ಚುನಾವಣಾ ಆಯೋಗ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ ಹಾಗೂ ಮತದಾರರ ಹೆಸರು ಸೇರ್ಪಡೆ ಬಗ್ಗೆ ತರಬೇತಿ ಕಾರ್ಯಾಗಾರ ಏರ್ಪಡಿಸಿದೆ. ಪ್ರತಿಯೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಪ್ರೊಬೇಷನರಿ ಐಎಎಸ್‌ ಅಧಿಕಾರಿ ಕೆ. ನಂದಿನಿದೇವಿ ಹೇಳಿದರು.

Advertisement

ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಪಟ್ಟಂತೆ ಮತಗಟ್ಟೆ ಅಧಿಕಾರಿ, ಸೂಪರ್‌ ವೈಸರ್‌ ಹಾಗೂ ಚುನಾವಣಾ ಸಿಬ್ಬಂದಿಗೆ ಇಲ್ಲಿನ ಬಾಲಾಜಿ ಚಿತ್ರಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ಮಾಹಿತಿ ಸಂಗ್ರಹ ಸಭೆಯಲ್ಲಿ ಅವರು ಮಾತನಾಡಿದರು.

 ಪ್ರತಿ ಚುನಾವಣೆ ಹಾಗೂ ಮತದಾನದ ಸಂದರ್ಭದಲ್ಲಿ ಸಿಬ್ಬಂದಿಗಳ ಲೋಪ ಕಂಡು ಬರುತ್ತಿದೆ. ಇದರಿಂದ ಕೆಲವು ವ್ಯಕ್ತಿಗಳು ಚುನಾವಣೆ ಆಯೋಗದ ವಿರುದ್ಧ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ಗಳಲ್ಲಿ ಪ್ರಕರಣ ದಾಖಲಿಸುತ್ತಿದ್ದಾರೆ. ಇದರಿಂದ ಚುನಾವಣಾ ಆಯೋಗದ ಕೆಲಸ ಕಾರ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಉಂಟಾಗುವಂತೆ ಮಾಡುತ್ತಿದ್ದಾರೆ. ಆದ್ದರಿಂದ ಚುನಾವಣಾ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬ ಅಧಿಕಾರಿಯೂ ಪ್ರಾರಂಭದ ಹಂತದಲ್ಲೇ ಚುನಾವಣಾ ಆಯೋಗದ ನಿಯಮಗಳು, ಸಂಬಂಧಪಟ್ಟ ದಾಖಲಾತಿಗಳನ್ನು ಕರಾರುವಾಕ್‌ ಆಗಿ ಪರಿಶೀಲನೆ ನಡೆಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ಮನೆ ಮನೆಗೂ ಹೋಗಿ ಮಾಹಿತಿ ಸಂಗ್ರಹಿಸಬೇಕು. ಸಾರ್ವಜನಿಕರು ನೀಡುವ ಮಾಹಿತಿ ಆಧರಿಸಿ ದಾಖಲೆ ಪಡೆದು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಸೂಚಿಸಿದರು.

ತಹಶೀಲ್ದಾರ್‌ ಟಿ.ಸಿ. ಕಾಂತರಾಜ್‌ ಮಾತನಾಡಿ, ಪ್ರಸ್ತುತ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರ ಪಟ್ಟಿಗೆ
ಸಂಬಂಧಪಟ್ಟಂತೆ ಫಾರಂ ನಂ. 6,7,8 ಹಾಗೂ 8ಎ ಗಳನ್ನು ಭರ್ತಿ ಮಾಡಬೇಕು. ಸಂಬಂಧಿಸಿದ ದಾಖಲಾತಿಗಳನ್ನು
ಪಡೆಯುವ ಕುರಿತು ಈಗಾಗಲೇ ಮಾಹಿತಿ ನೀಡಲಾಗಿದೆ. 

ನ. 10ರಿಂದ 20ರ ತನಕ ಜನವರಿ1, 2019ಕ್ಕೆ 18 ವರ್ಷ ತುಂಬುವ ಯುವ ಮತದಾರರನ್ನು ಮಾತ್ರ ಸೇರ್ಪಡೆ ಮಾಡಲು ಅವಕಾಶವಿದೆ. ಕೆಲವು ಮತಗಟ್ಟೆ ಅಧಿಕಾರಿಗಳು ವಯಸ್ಸಿನ ಅಂತರ ಕಡಿಮೆ ಇದ್ದರೂ ದಾಖಲಾತಿ ನೀಡುತ್ತಿದ್ಧಾರೆ. ಇದು ಸರಿಯಾದ ಕ್ರಮವಲ್ಲ. ಸೂಚನೆಗಳನ್ನು ಸರಿಯಾಗಿ ಅರ್ಥೈಸಿಕೊಂಡು ಕಾರ್ಯನಿರ್ವಹಿಸಬೇಕು.

Advertisement

ಯಾವುದೇ ರೀತಿಯ ಸ್ವಷ್ಟೀಕರಣ ಬೇಕಾದಲ್ಲಿ ನನ್ನಾಗಲಿ ಅಥವಾ ಚುನಾವಣೆ ಶಾಖೆಯನ್ನಾಗಿ ಸಂಪರ್ಕಿಸುವಂತೆ ಮನವಿ ಮಾಡಿದರು. ತರಬೇತುದಾರ, ಅರ್ಥಶಾಸ್ತ್ರ ಪ್ರಾಧ್ಯಾಪಕ ಶಿವಪ್ರಸಾದ್‌ ಮಾತನಾಡಿ, ಚುನಾವಣಾ ಆಯೋಗ ನಿಗ ದಿಪಡಿಸಿದ ಫಾರಂ-6ರಲ್ಲಿ ಸೇರ್ಪಡೆ, 7ರಲ್ಲಿ ಹೆಸರು ತೆಗೆದು ಹಾಕುವುದು, ಫಾರಂ 8ರಲ್ಲಿ ತಪ್ಪುಗಳನ್ನು ಸರಿಪಡಿಸುವುದು, 8ಎನಲ್ಲಿ ವರ್ಗಾವಣೆಗೆ ಸಂಬಂಧಪಟ್ಟ ಮಾಹಿತಿಯನ್ನು ಭರ್ತಿ ಮಾಡಬೇಕು. ಯಾರಾದರೂ ಸೈನಿಕರು ಕಾರ್ಯನಿರ್ವಹಿಸುತ್ತಿದ್ದರೆ ಅವರಿಗೆ ಫಾರಂ 6ಎ ನಲ್ಲಿ ವಿವರವನ್ನು ಭರ್ತಿ ಮಾಡಿಕೊಡಬೇಕು. ಮತದಾರರ ಪಟ್ಟಿ ಸೇರ್ಪಡೆಗೆ ನಿಗ ದಿಪಡಿಸಿದ ದಾಖಲಾತಿಗಳನ್ನು ಕಡ್ಡಾಯವಾಗಿ ಪಡೆಯಬೇಕು. ಫಾರಂ 7ರಲ್ಲಿ ಹೆಸರು ಕೈಬಿಡಲು ದಾಖಲಾತಿಯನ್ನು ಪಡೆದು ಕಾರ್ಯನಿರ್ವಹಿಸಬೇಕೆಂದರು.

ಕಂದಾಯಾಧಿಕಾರಿ ವಿ. ಈರಮ್ಮ ಮಾತನಾಡಿ, ನಗರಸಭಾ ವ್ಯಾಪ್ತಿಯ 31 ವಾರ್ಡ್‌ಗಳಲ್ಲಿ ಯಾರಾದರೂ ಮೃತಪಟ್ಟಿದ್ದಲ್ಲಿ
ಅದರ ಸಂಪೂರ್ಣ ಮಾಹಿತಿಯನ್ನು ತಾಲೂಕು ಕಚೇರಿಯ ಚುನಾವಣಾ ಶಾಖೆಗೆ ನೀಡಲಾಗುವುದು. ನಗರದ ವಿವಿಧ
ಮತಗಟ್ಟೆ ಅ ಧಿಕಾರಿಗಳು ಸಂಪರ್ಕಿಸಿದರೂ ಅವರಿಗೆ ಅವಶ್ಯವಿರುವ ಮಾಹಿತಿಯನ್ನು ಲಿಖೀತವಾಗಿ ಒದಗಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 258 ಮತಗಟ್ಟೆ ಕೇಂದ್ರಗಳ ಅಧಿಕಾರಿಗಳು ಹಾಗೂ ಮೇಲ್ವಿಚಾರಕರು, ಚುನಾವಣಾ ಶಿರಸ್ತೇದಾರ್‌ ಮಂಜುನಾಥಸ್ವಾಮಿ, ಪ್ರಕಾಶ್‌, ನಾಗರಾಜು, ಓಬಳೇಶ್‌, ಶ್ರೀಧರ್‌ ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next