Advertisement

ಯಾರಿಗೂ ಬೇಡವಾದ “ಇಂದಿರಾ ಕ್ಯಾಂಟೀನ್‌’

06:28 AM Feb 20, 2019 | |

ಬೆಂಗಳೂರು: ರಾಜಧಾನಿ ಬೆಂಗಳೂರು ಜನರಿಗೆ ರಿಯಾಯಿತಿ ದರದಲ್ಲಿ ತಿಂಡಿ-ಊಟ ಒದಗಿಸುವ ಮಹತ್ವಾಕಾಂಕ್ಷಿ “ಇಂದಿರಾ ಕ್ಯಾಂಟೀನ್‌’ ಯೋಜನೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಬೇಡವಾಗಿದೆ.

Advertisement

ನಗರದ ಜನರಿಗೆ ಕಡಿಮೆ ದರದಲ್ಲಿ ತಿಂಡಿ-ಊಟ ದೊರೆಬೇಕೆಂಬ ಉದ್ದೇಶದಿಂದ ಪಾಲಿಕೆಯ 198 ವಾರ್ಡ್‌ಗಳಲ್ಲಿ ಕ್ಯಾಂಟೀನ್‌ ನಿರ್ಮಾಣಕ್ಕೆ ಮುಂದಾಗಿದ್ದ ಸರ್ಕಾರವು, ಕ್ಯಾಂಟೀನ್‌ ನಿರ್ಮಾಣಕ್ಕೆ ಜಾಗ ದೊರೆಯದ ವಾರ್ಡ್‌ಗಳಲ್ಲಿ ಸಂಚಾರಿ ಕ್ಯಾಂಟೀನ್‌ಗಳನ್ನು ಆರಂಭಿಸಿತ್ತು. ಆದರೆ, ಕ್ಯಾಂಟೀನ್‌ಗಳ ನಿರ್ವಹಣೆಗೆ ಸಮರ್ಪಕವಾಗಿ ಅನುದಾನ ನೀಡಿದ ಪರಿಣಾಮ ಪಾಲಿಕೆಗೆ ಹೊರೆಯಾಗಿದೆ. 

ಕಳೆದ ಸಾಲಿನಲ್ಲಿ ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆ ಹಾಗೂ ಆಹಾರ ಪೂರೈಕೆಗೆ ಅನುದಾನ ನೀಡಿದ ಸರ್ಕಾರವು, ಪ್ರಸಕ್ತ ಸಾಲಿನ ಬಜೆಟ್‌ನಲ್ಲಿಯೂ ಪಾಲಿಕೆ ವ್ಯಾಪ್ತಿಯಲ್ಲಿನ ಇಂದಿರಾ ಕ್ಯಾಂಟೀನ್‌ಗಳಿಗೆ ಯಾವುದೇ ಅನುದಾನ ಮೀಸಲಿಟ್ಟಿಲ್ಲ. ಸೋಮವಾರ ಮಂಡನೆಯಾದ ಬಿಬಿಎಂಪಿ ಬಜೆಟ್‌ನಲ್ಲಿಯೂ ಯೋಜನೆಗೆ ಅನುದಾನ ಮೀಸಲಿಡದ ಪರಿಣಾಮ ಕ್ಯಾಂಟೀನ್‌ಗಳು ಅತಂತ್ರ ಸ್ಥಿತಿಯಲ್ಲಿವೆ. 

ಪಾಲಿಕೆಯ ವ್ಯಾಪ್ತಿಯ 198 ವಾರ್ಡ್‌ಗಳ ಪೈಕಿ 174 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳು ನಿರ್ಮಿಸಲಾಗಿದ್ದು, ಕ್ಯಾಂಟೀನ್‌ ನಿರ್ಮಿಸಲು ಜಾಗ ದೊರೆಯದ ಕಡೆಗಳಲ್ಲಿ 28 ಮೊಬೈಲ್‌ ಇಂದಿರಾ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿವೆ. ಇದೀಗ ಸರ್ಕಾರ ಹಾಗೂ ಬಿಬಿಎಂಪಿ ಮೀಸಲಿಡದ ಪರಿಣಾಮ ಆಹಾರ ಪೂರೈಕೆ ಮಾಡುವ ಗುತ್ತಿಗೆದಾರರಿಗೆ ಯಾವ ಮೂಲದಿಂದ ಬಿಲ್‌ ಪಾವತಿ ಮಾಡಲಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸಿವೆ. 

ಇಂದಿರಾ ಕ್ಯಾಂಟೀನ್‌ ಯೋಜನೆಗೆ 2016ರ ಆಗಸ್ಟ್‌ನಿಂದ ಈವರೆಗೆ ಬಿಬಿಎಂಪಿಗೆ ಒಟ್ಟು 245 ಕೋಟಿ ರೂ. ಅನುದಾನ ಸರ್ಕಾರದಿಂದ ಬರಬೇಕಿದೆ. ಆ ಪೈಕಿ ಆರಂಭದ ಬಂಡವಾಳವಾಗಿ ಮೊದಲಿಗೆ 100 ಕೋಟಿ ಬಿಡುಗಡೆ ಮಾಡಿತ್ತು. ನಂತರ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಪ್ರತಿಪಕ್ಷ ಟೀಕಿಸಿದಾಗ 36.25 ಕೋಟಿ ರೂ. ನೀಡಿದ್ದು, ಇನ್ನೂ 146.75 ಕೋಟಿ ರೂ. ಬಿಡುಗಡೆಗೊಳಿಸಬೇಕಿದೆ. ಆದರೆ, ಇದೀಗ ಸಂಪೂರ್ಣ ಯೋಜನೆಯನ್ನು ಪಾಲಿಕೆಯಿಂದಲೇ ವಹಿಸಿಕೊಳ್ಳುವುದು ಹೊರೆಯಾಗಲಿದೆ.

Advertisement

ಪಾಲಿಕೆ ಹೊಣೆ: ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಮಾಡಲು ಗುತ್ತಿಗೆದಾರಿಗೆ 49 ರಿಂದ 57 ರೂ.ವರೆಗೆ ದರ ಅನುಮೋದಿಸಲಾಗಿದೆ. ಅದರಂತೆ ಒಬ್ಬ ವ್ಯಕ್ತಿಯಿಂದ ದಿನಕ್ಕೆ ಒಂದು ತಿಂಡಿ ಹಾಗೂ ಎರಡು ಊಟಕ್ಕೆ 25 ರೂ. ಸಂಗ್ರಹವಾಗುತ್ತದೆ.

ಉಳಿದ ವ್ಯತ್ಯಾಸದ ಮೊತ್ತದ ಪೈಕಿ ಶೇ.70ರಷ್ಟು ಹಣ ಮಹಾನಗರ ಪಾಲಿಕೆಗಳು ತಮ್ಮ ಸ್ವಂತ ಅನುದಾನ/ಎಸ್‌ಎಫ್ಸಿ ಮುಕ್ತ ನಿಧಿಯಿಂದ ಪಾವತಿಸಬೇಕು ಹಾಗೂ ಉಳಿದ ಶೇ.30ರಷ್ಟು ಹಣ ಕಾರ್ಮಿಕರ ಇಲಾಖೆ ನೀಡಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇಂದಿರಾ ಕ್ಯಾಂಟೀನ್‌ ಸಂಪೂರ್ಣ ನಿರ್ವಹಣೆ ಹೊಣೆ ಮಹಾನಗರ ಪಾಲಿಕೆಗಳ ಮೇಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸ್ಥಳೀಯ ಸಂಸ್ಥೆಗಳಿಗೆ ಅನುದಾನ: ರಾಜ್ಯ ನಗರ ಸ್ಥಳೀಯ ಸಂಸ್ಥೆಗಳಿಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿರುವ ಸರ್ಕಾರವು, ಮಹಾನಗರ ಪಾಲಿಕೆಗೆ ಅನುದಾನ ನೀಡಿಲ್ಲ. ರಾಜ್ಯಾದ್ಯಂತ ನಿರ್ಮಾಣವಾಗುತ್ತಿರುವ 247 ಕ್ಯಾಂಟೀನ್‌ಗಳಿಗೆ ಹಿಂದೆಯೇ 100 ಕೋಟಿ ರೂ. ಅನುದಾನ ನೀಡಿದ್ದ ಸರ್ಕಾರ, ಪ್ರಸಕ್ತ ಸಾಲಿನಲ್ಲಿ ಬಜೆಟ್‌ನಲ್ಲಿ ಆಹಾರ ಪೂರೈಕೆಗಾಗಿ 50 ಕೋಟಿ ರೂ.ಗಳನ್ನು ನೀಡಿದೆ. ಆದರೆ, 200 ಕ್ಯಾಂಟೀನ್‌ಗಳಿರುವ ಬೆಂಗಳೂರಿಗೆ ಅನುದಾನ ನೀಡುವ ಬಗ್ಗೆ ಪ್ರಾಸ್ತಪಿಸಿಲ್ಲ. 

ಮಧ್ಯಾಹ್ನ ಮುದ್ದೆ, ಚಪಾತಿ: ಇಂದಿರಾ ಕ್ಯಾಂಟೀನ್‌ ಯೋಜನೆಗೆ ಸರ್ಕಾರದಿಂದ ಅನುದಾನ ನೀಡದಿರುವ ಕುರಿತು ಮಾಹಿತಿ ಪಡೆಯಲಾಗುವುದು. ಜತೆಗೆ ಪಾಲಿಕೆಯ ಬಜೆಟ್‌ನಲ್ಲಿ ಏಕೆ ಅನುದಾನ ಮೀಸಲಿಡಲಾಗಿಲ್ಲ ಎಂಬುದನ್ನು ಪರಿಶೀಲಿಸಿ, ಯೋಜನೆಗಾಗಿ ಅನುದಾನ ಕಾಯ್ದಿರಿಸಲಾಗುವುದು. ಇದರೊಂದಿಗೆ ಈ ಸಾಲಿನಿಂದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮಧ್ಯಾಹ್ನದ ಊಟದಲ್ಲಿ ಮುದ್ದೆ-ಚಪಾತಿ ನೀಡಲು ತೀರ್ಮಾನಿಸಲಾಗಿದೆ ಎಂದು ಮೇಯರ್‌ ಗಂಗಾಂಬಿಕೆ ಭರವಸೆ ನೀಡಿದರು. 

ಸರ್ಕಾರ ಬಜೆಟ್‌ನಲ್ಲಿ ಬಿಬಿಎಂಪಿ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ಗಳಿಗೆ ಅನುದಾನ ನಿಗದಿಯಾದಂತಿಲ್ಲ. ಈ ಕುರಿತು ಪರಿಶೀಲಿಸಲಾಗುವುದು. ಒಂದೊಮ್ಮೆ ಸರ್ಕಾರದಿಂದ ಅನುದಾನ ದೊರೆಯದಿದ್ದರೂ ಪಾಲಿಕೆಯಿಂದ ಮೀಸಲಿಡಬೇಕಾಗುತ್ತದೆ. 
-ಲೋಕೇಶ್‌, ವಿಶೇಷ ಆಯುಕ್ತರು (ಹಣಕಾಸು)

* ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next