Advertisement

“ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವುದಿಲ್ಲ’

06:30 AM Apr 22, 2018 | Team Udayavani |

ಉಡುಪಿ: ಚುನಾವಣಾ ಕಣದಿಂದ ಹಿಂದೆ ಸರಿಯುವುದಿಲ್ಲ. ಸ್ಪರ್ಧಿಸಲು ಸಂಕಲ್ಪ ಮಾಡಿದ್ದೇನೆ. ಹಾಗಾಗಿ ಎರಡನೇ ಮಾತಿಲ್ಲ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಶನಿವಾರದಂದು ನಾಮಪತ್ರ ಸಲ್ಲಿಸಿದ ಶೀರೂರು ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

Advertisement

ಪಕ್ಷೇತರನಾದರೂ ಬಿಜೆಪಿಗೇ ಲಾಭ
ನಾಮಪತ್ರ ಸಲ್ಲಿಕೆಗೂ ಮೊದಲು ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಅನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, “ನಾನು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೆ. ಟಿಕೆಟ್‌ ಸಿಗುವ ವಿಶ್ವಾಸವಿತ್ತು. ಆದರೆ ಈಗ ಬೇರೆಯವರಿಗೆ ಟಿಕೆಟ್‌ ನೀಡಲಾಗಿದೆ. ಹಾಗಾಗಿ ಪಕ್ಷೇತರ ನಾಗಿ ಸ್ಪರ್ಧಿಸುತ್ತಿದ್ದೇನೆ. ನರೇಂದ್ರ ಮೋದಿ, ಅಮಿತ್‌ ಶಾ ಮತ್ತು ಯೋಗಿ ಆದಿತ್ಯನಾಥ್‌ ಅವರ ಮೇಲೆ ಭರವಸೆ ಇಟ್ಟಿದ್ದೇನೆ. ಪಕ್ಷೇತರನಾಗಿ ಸ್ಪರ್ಧಿಸಿದರೂ ನರೇಂದ್ರ ಮೋದಿಯವರಿಗೇ ಲಾಭ’ ಎಂದು ಹೇಳಿದರು.

“ನರೇಂದ್ರ ಮೋದಿಯವರು ಬಂದು ನಾಮಪತ್ರ ವಾಪಸ್ಸು ಪಡೆಯಲು ಹೇಳಿದರೆ ನಿರ್ಧಾರ ಪುನರ್‌ ಪರಿಶೀಲಿಸುತ್ತೀರಾ?’ ಎಂದು ಪ್ರಶ್ನಿಸಿದಾಗ “ಕೊನೆ ಕ್ಷಣದಲ್ಲಿ ನರೇಂದ್ರ ಮೋದಿ ಅವರು ಬಂದು ಮಾತನಾಡಿದರೆ ಆಗ ನೋಡೋಣ..’ ಎಂದು ಶೀರೂರು ಶ್ರೀ ಹೇಳಿದರು.

ನಾನೂ ಬಿಜೆಪಿಯವನು
ನಾನು 41 ವರ್ಷಗಳಿಂದ ಬಿಜೆಪಿಗೆ ಮತ ಹಾಕುತ್ತಿದ್ದೇನೆ. ಬಿಜೆಪಿ ಮತ ಹಾಕುವವರೆಲ್ಲರೂ ಬಿಜೆಪಿಯವರೇ. ನನಗೆ ಗೆಲ್ಲುವ ವಿಶ್ವಾಸ ಇದೆ. ಉಡುಪಿ ಜನತೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಒಂದು ವೇಳೆ ಬಿಜೆಪಿಯಿಂದ ಬಿ-ಫಾರಂ ಸಿಕ್ಕಿದರೆ ಇನ್ನೂ ಕೂಡ ಬಿಜೆಪಿಯಿಂದ ಸ್ಪರ್ಧಿಸಲು ಸಿದ್ಧನಿದ್ದೇನೆ ಎಂದು ಶೀರೂರು ಶ್ರೀ ಹೇಳಿದರು. 

ಕಾಂಗ್ರೆಸ್‌ ಬೆಂಬಲಿಸಿಲ್ಲ
ನನ್ನ ಸ್ಪರ್ಧೆಯಿಂದ ಕಾಂಗ್ರೆಸ್‌ಗೆ ಲಾಭ ಎಂದು ಕೆಲವು ಜನರು ತಪ್ಪು ತಿಳಿದುಕೊಂಡಿದ್ದಾರೆ. ನಾನು ಕೆಲವರ ಜತೆ ವಿಶ್ವಾಸದಲ್ಲಿ ಇರು ವುದನ್ನೇ ಜನ ತಪ್ಪಾಗಿ ತಿಳಿದುಕೊಂಡಿದ್ದಾರೆ. ನಾನು ಈ ಹಿಂದೊಮ್ಮೆ ಕಾಂಗ್ರೆಸ್‌ ಕಾರ್ಯ ಕ್ರಮಕ್ಕೆ ಹೋದದ್ದು ಅಚಾನಕ್‌. ಯಾವುದೋ ಕಾರ್ಯಕ್ರಮಕ್ಕೆ ಹೋದಾಗ ಸಿಕ್ಕಿಬಿದ್ದಿದ್ದೆ ಅಷ್ಟೆ ಎಂದು ಶೀರೂರು ಶ್ರೀಗಳು ಹೇಳಿದರು. 

Advertisement

ದೇಗುಲದಿಂದ ಚುನಾವಣಾಧಿಕಾರಿ ಕಚೇರಿವರೆಗೆ…
ಸುಮಾರು 12 ಗಂಟೆಯ ವೇಳೆಗೆ ಕಡಿಯಾಳಿ ದೇಗುಲಕ್ಕೆ ಆಗಮಿಸಿ ದೇವರ ದರ್ಶನಗೈದ ಶೀರೂರು ಶ್ರೀಗಳು ಅಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಸೀಯಾಳ ಕುಡಿದು ಅಲ್ಲಿಂದ ಹೊರಟು ಬನ್ನಂಜೆಯಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಗೆ 12.25ರ ವೇಳೆಗೆ ತಲುಪಿದರು. 12.30ಕ್ಕೆ ನಾಮಪತ್ರ ಸಲ್ಲಿಸುವುದಾಗಿ ನಿಗದಿಯಾಗಿದ್ದರೂ ನಾಮಪತ್ರ ದಾಖಲೆಗಳಿಗೆ ಸಹಿ ಹಾಕುವುದು, ದಾಖಲೆಗಳ ಕ್ರೋಢೀಕರಣ ಸೇರಿದಂತೆ ವಿವಿಧ ಪ್ರಕ್ರಿಯೆಗಳು ನಡೆಯಬೇಕಾಗಿದ್ದ ಕಾರಣದಿಂದ ಚುನಾವಣಾಧಿಕಾರಿಗಳ ಕಚೇರಿಯ ಪಕ್ಕದಲ್ಲೇ ಇದ್ದ ಕಚೇರಿಯಲ್ಲಿ ಕುಳಿತು ವಿಶ್ರಾಂತಿ ಪಡೆದರು. ಅಲ್ಲಿಯೂ ಸೀಯಾಳ ಕುಡಿದು ದಣಿವಾರಿಸಿಕೊಂಡರು. ಅವರ ಬೆಂಬಲಿಗರು ಉಪಚರಿಸಿದರು. 1.30ರ ವೇಳೆಗೆ ನಾಮಪತ್ರ ಸಲ್ಲಿಸಿದರು. ದಾಖಲೆಗಳ ಪರಿಶೀಲನೆಗಳು ಮುಗಿದು 2 ಗಂಟೆಯ ಸುಮಾರಿಗೆ ಚುನಾವಣಾಧಿಕಾರಿಗಳಿ ಕಚೇರಿಯಿಂದ ನಿರ್ಗಮಿಸಿದರು. 

“ಕಳೆದ 3 ದಿನಗಳಿಂದ ನೇಮೋತ್ಸವ ಇದ್ದುದರಿಂದ ಬಳಲಿಕೆ ಇದೆ ಅಷ್ಟೆ. ಶೀಘ್ರದಲ್ಲೇ ಪತ್ರಿಕಾಗೋಷ್ಠಿ ಕರೆದು ಸ್ಪರ್ಧೆ ಕುರಿತು ಮತ್ತಷ್ಟು ವಿವರ ನೀಡುತ್ತೇನೆ’ ಎಂದು ಶ್ರೀಗಳು ಈ ಸಂದರ್ಭದಲ್ಲಿ ತಿಳಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next