ಕೆ.ಆರ್.ನಗರ: ಸಹಕಾರಿ ಕ್ಷೇತ್ರದಲ್ಲಿ ರಾಜಕಾರಣ ಆಗಬಾರದು. ರೈತರ ಹಣ ಎಷ್ಟು ತೊಡಗಿಸಿರುತ್ತೇವೋ ಅಷ್ಟೂ ಹಣ ಸದುಪಯೋಗವಾಗಬೇಕು. ಎಲ್ಲಿಯೂ ದುರುಪಯೋಗ ಆಗಬಾರದು ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ಎಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ರಾಜ್ಯ ಸಹಕಾರ ಮಹಾ ಮಂಡಳಿ ನಿಯಮಿತ ಮತ್ತು ಮೈಸೂರು ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ತಾಲೂಕಿನ ಎಲ್ಲಾ ಸಹಕಾರ ಸಂಘಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ 64ನೇ ಅಖೀಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದರು. ಸಹಕಾರ ಸಂಘಗಳಲ್ಲಿ ಹಣ ದುರುಪಯೋಗವಾದಲ್ಲಿ ಅಂತಹವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳಬೇಕೆಂದರು.
ತಾಲೂಕಿನಲ್ಲಿ 700 ಅಂಗವಿಕಲ ಮಕ್ಕಳಿಗೆ ಸೇರಿದಂತೆ ಯಶಸ್ವಿನಿ ಯೋಜನೆಗಾಗಿ 1 ಕೋಟಿಗೂ ಹೆಚ್ಚು ಹಣ ಪಾವತಿಸಿದ್ದೇನೆ. ಸಹಕಾರಿ ವಲಯದ 460 ನೌಕರರಿಗೆ ಈ ಬಾರಿ ವಾಚ್‌ನ್ನು ಕೊಡುಗೆಯಾಗಿ ನೀಡುತ್ತಿರುವುದಾಗಿ ತಿಳಿಸಿದರು. ಮೈಸೂರು, ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ್, ಮಹಿಳಾ ಸಂಂಘಗಳಿಗೆ 3-5 ಲಕ್ಷದವರೆಗೆ 0% ಬಡ್ಡಿದರದಲ್ಲಿ ಸಾಲನೀಡಲಾಗುವುದು ಎಂದು ತಿಳಿಸಿದರು.
ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಅಮಿತ್ ದೇವರಹಟ್ಟಿ, ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿದರು. ಈ ವೇಳೆ ಸಹಕಾರಿ ಸಂಘಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ಸನ್ಮಾನಿಸಲಾಯಿತು.
ಮೈಸೂರು ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಜಿ.ಮಹೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಸಿದ್ದೇಗೌಡ, ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ.ಸೋಮಶೇಖರ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದಾಮೋದರ್, ಪುರಸಭಾಧ್ಯಕ್ಷೆ ಕವಿತಾ, ಜೆಡಿಎಸ್ ಮುಖಂಡರಾದ ವೈ.ಆರ್.ಪ್ರಕಾಶ್, ಗಣೇಶ್ ಮತ್ತಿತರರಿದ್ದರು.