Advertisement

ಮನಸಿಲ್ಲ; ಆದರೂ ಮೈತ್ರಿ ಅನಿವಾರ್ಯ

12:11 PM Sep 05, 2018 | Team Udayavani |

ಬೆಂಗಳೂರು: ಜೆಡಿಎಸ್‌ ಜತೆ ಸೇರಿ ಲೋಕಸಭೆ ಚುನಾವಣೆ ಎದುರಿಸಲು ಮನಸಿಲ್ಲ. ಆದರೂ ಬಿಜೆಪಿಯನ್ನು ಸೋಲಿಸಲು ಮೈತ್ರಿ ಅನಿವಾರ್ಯವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

Advertisement

ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೆಸ್‌ ಜ್ಞಾನ ವಿಕಾಸ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಜೆಡಿಎಸ್‌ ಜೊತೆ ಸೇರಿಕೊಂಡು ಸ್ಪರ್ಧೆ ಮಾಡಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಜೆಡಿಎಸ್‌ ಒಂದಾದರೆ ಕನಿಷ್ಠ ಇಪ್ಪತ್ತೈದು ಸ್ಥಾನ ಗೆಲ್ಲುತ್ತೇವೆ. ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಲೋಕಸಭೆ ಚುನಾವಣೆಯ ನಂತರ ದೇಶದ ರಾಜಕಾರಣ ಬದಲಾಗುತ್ತದೆ ಎಂದು ಹೇಳಿದರು.

ದೇಶದ ಜನತೆಗೆ ಸುಳ್ಳು ಹೇಳಿ ಬಿಜೆಪಿ ಅಧಿಕಾರಕ್ಕೆ ಬಂದು ಜನತೆಗೆ ಮೋಸ ಮಾಡಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶ ಹಾಳಾಗುತ್ತದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಸಲುವಾಗಿಯೇ ರಾಜ್ಯದಲ್ಲಿ ಜೆಡಿಎಸ್‌ ಜೊತೆಗೆ ಸೇರಿಕೊಂಡು ಸರ್ಕಾರ ರಚನೆ ಮಾಡಿದ್ದೇವೆ ಎಂದರು. 

ಪ್ರಧಾನಿಯಾಗಿ ನರೇಂದ್ರ ಮೋದಿ ಯಾವುದೇ ಭರವಸೆಯನ್ನು ಈಡೇರಿಸಿಲ್ಲ. ಭಯೋತ್ಪಾದನೆ ನಿಗ್ರಹ, ಲೋಕಪಾಲ್‌ ನೇಮಕ ಯಾವುದರಲ್ಲಿಯೂ ಯಶಸ್ವಿಯಾಗಿಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಧಾನಿ ನರೇಂದ್ರ ಮೋದಿಯನ್ನು ಅಪ್ಪಿಕೊಂಡರೆ ವ್ಯಂಗ್ಯವಾಡಿದರು. ಆದರೆ, ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಹೋಗಿ ಅಲ್ಲಿನ ಪ್ರಧಾನಿಯನ್ನು ಅಪ್ಪಿಕೊಂಡರು. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು. 

ಯುಪಿಎ ಅಧಿಕಾರವಧಿಯಲ್ಲಿ ಡಾಲರ್‌ ಮುಂದೆ ರೂಪಾಯಿ ಮೌಲ್ಯ ಕುಸಿಯುತ್ತಿದೆ ಎಂದು ಬಿಜೆಪಿಯವರು ಬೊಬ್ಬೆ ಹೊಡೆಯುತ್ತಿದ್ದರು. ಆದರೆ, ಈಗ ಪ್ರತಿ ದಿನ ರೂಪಾಯಿ ಮೌಲ್ಯ ಕುಸಿಯುತ್ತಿದೆ. ಈ ಬಗ್ಗೆ ಬಿಜೆಪಿಯವರು ಮಾತನಾಡುತ್ತಿಲ್ಲ. ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ ಮಾತೇ ಆಡುವುದಿಲ್ಲ ಎಂದು ಟೀಕಿಸಿದ್ದರು. ಈಗಿನ ಪ್ರಧಾನಿ ನಾಲ್ಕುವರೆ ವರ್ಷದಲ್ಲಿ ಒಮ್ಮೆಯೂ ಪತ್ರಿಕಾಗೋಷ್ಠಿ ನಡೆಸದೇ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ.

Advertisement

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಮಾಫಿಯಾ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು. ಸಂಸದ ಡಿ.ಕೆ.ಸುರೇಶ್‌ ಮಾತನಾಡಿ, ಕಾಂಗ್ರೆಸ್‌ನಲ್ಲಿ ಪ್ರಾಮಾಣಿಕ ಕಾರ್ಯಕರ್ತರು ದಶಕಗಳ ಕಾಲ ಕೆಲಸ ಮಾಡಿರುವುದರಿಂದ ಕಾಂಗ್ರೆಸ್‌ ಜೀವಂತವಾಗಿದೆ.

ನಮ್ಮ ನಾಯಕರಲ್ಲಿ ಕಾರ್ಯಕರ್ತರನ್ನು ಗೌರವದಿಂದ ನೋಡುವ ಪ್ರವೃತ್ತಿ ಇಲ್ಲ. ಹೀಗಾಗಿ ಕಾರ್ಯಕರ್ತರ ಆಸಕ್ತಿ ಕಡಿಮೆಯಾಗಿದೆ. ನಮ್ಮ ನಡವಳಿಕೆಯಿಂದಲೇ ಕಾಂಗ್ರೆಸ್‌ ಪಕ್ಷ ಸೋಲುತ್ತಿದೆ. ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಪ್ರಧಾನಿ ಮೋದಿಯನ್ನು ಬ್ರಾಂಡ್‌ ಮಾಡುತ್ತಾರೆ. ಮೋದಿ ಬಂದ ಮೇಲೆ ನಾವು ಬೀದಿಯಲ್ಲಿ ಕಸ ಗುಡಿಸಲು ಆರಂಭಿಸಿದ್ದು ಎಂದು ಹೇಳಿದರು. 

ಮೋದಿ ಹಾಗೂ ಅಮಿತ್‌ ಶಾ ಹಿಂದೂ ಧರ್ಮ ಹಾಗೂ ಜಾತಿ ಹೆಸರಿನಲ್ಲಿ ಅಧಿಕಾರ ಹಿಡಿಯಲು ಹೊರಟಿದ್ದಾರೆ. ಅವರಿಬ್ಬರು ಯಾವಾಗ ಏನು ಮಾಡುತ್ತಾರೋ ಗೊತ್ತಿಲ್ಲ. ಅವರನ್ನು ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. 

ಕಾಂಗ್ರೆಸ್‌ನಲ್ಲಿ ಹಣ ಕೊಟ್ಟವರಿಗೆ ಅಧಿಕಾರ ಕೊಡುವುದರಿಂದ ವಿಧಾನಸಭೆ ಚುನಾವಣೆಯಲ್ಲಿ ಆದ ಪರಿಸ್ಥಿತಿಯೇ ಲೋಕಸಭೆ ಚುನಾವಣೆಯಲ್ಲಿಯೂ ಆಗುತ್ತದೆ. ಪಕ್ಷಕ್ಕೆ ನಿಷ್ಠರಾಗಿರುವವರು ಹಾಗೂ ಉತ್ತಮ ಚಾರಿತ್ರ್ಯ ಹೊಂದಿದವರನ್ನು ಪಕ್ಷ ಗುರುತಿಸಬೇಕು.
-ವಿ.ಎಸ್‌.ಉಗ್ರಪ್ಪ

Advertisement

Udayavani is now on Telegram. Click here to join our channel and stay updated with the latest news.

Next