ಬೀದರ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿಫಲರಾದರೆ ಆತ್ಮವಿಶ್ವಾಸ ಕಳೆದುಕೊಳ್ಳದೇ ಸಾಧನೆ ಮುಂದಕ್ಕೆ ಹೋಗಿದೆ ಎಂದು ಭಾವಿಸಿ ಮರಳಿ ಪ್ರಯತ್ನ ಮಾಡಬೇಕು. ಪ್ರಯತ್ನದಲ್ಲಿ ತೊಡಗಿದಾಗ ಹಲವು ಅಡೆತಡೆಗಳು ಬರುವುದು ಸ್ವಾಭಾವಿಕ ಎಂದು ಪಿಎಸ್‌ಐ ಸಂತೋಷ ತಟ್ಟೆಪಳ್ಳೆ ತಿಳಿಸಿದರು.
ನಗರದ ಜ್ಞಾನಸುಧಾ ಕಾಲೇಜಿನಲ್ಲಿ ಜ್ಞಾನಸುಧಾ ಸಿವಿಲ್ ಸರ್ವಿಸಸ್ ಅಕಾಡೆಮಿಯಿಂದ ಆಯೋಜಿಸಿದ್ದ ಪಿಎಸ್‌ಐ ಪರೀಕ್ಷೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪದವಿ ಓದುವಾಗಲೇ ಪಠ್ಯದೊಂದಿಗೆ ಯುಪಿಎಸ್‌ಸಿ, ಕೆಪಿಎಸ್‌ಸಿ, ಪೊಲೀಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ನಡೆಸಿದ್ದಲ್ಲಿ ಉನ್ನತ ಹುದ್ದೆ ಪಡೆಯಲು ಸಾಧ್ಯ. ಜ್ಞಾನಸುಧಾ ಅಕಾಡೆಮಿ ಸ್ಥಾಪಿಸಿ ಜಿಲ್ಲೆಯ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಒಳ್ಳೆಯ ಅವಕಾಶ ಕಲ್ಪಿಸಿದ್ದು, ವಿದ್ಯಾರ್ಥಿಗಳು ಸದುಪಯೋಗ ಡೆದುಕೊಳ್ಳಬೇಕು ಎಂದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆ ನಿರ್ದೇಶಕ ಮುನೇಶ್ವರ ಲಾಖಾ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ಕಷ್ಟಪಟ್ಟು ಓದಿದ್ದರೆ ಭವಿಷ್ಯದಲ್ಲಿ ಉನ್ನತ ಹುದ್ದೆ ಪಡೆಯಬಹುದು. ಇಂಜಿನಿಯರಿಂಗ್, ವೈದ್ಯ ಹೊರತುಪಡಿಸಿ ಇತರ ಕ್ಷೇತ್ರಗಳಲ್ಲೂ ಸಾಧನೆಗೆ ವಿಫುಲ ಅವಕಾಶಗಳಿವೆ ಎಂದರು.
ಸಂಸ್ಥೆ ಅಧ್ಯಕ್ಷೆ ಪೂರ್ಣಿಮಾ ಜಿ. ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಅಭ್ಯರ್ಥಿಗಳ ಆಯ್ಕೆಗೆ ನೆರವಾಗಲು ಈ ಅಕಾಡೆಮಿ ಸ್ಥಾಪಿಸಲಾಗಿದೆ. ನುರಿತ, ಅನುಭವಿ ವಿಷಯ ತಜ್ಞರಿಂದ ಉತ್ಕೃಷ್ಟ ತರಬೇತಿ ನೀಡಲಾಗುತ್ತಿದೆ ಎಂದರು. ಅಕಾಡೆಮಿ ಕಾರ್ಯಕ್ರಮ ನಿರ್ದೇಶಕ ಬಾಲಾಜಿ ಮಾನಕರಿ ನಿರೂಪಿಸಿದರು.