ಪುತ್ತೂರು-ಉಪ್ಪಿನಂಗಡಿ ಹೋಗುತ್ತಿದ್ದ ಬಸ್ಸಿನಲ್ಲಿ ಕೊನೆಯ ಸೀಟಿನಲ್ಲಿ ಕುಳಿತಿದ್ದ ನಾನು ಏನೋ ಒಂದು ಖುಷಿಯಲ್ಲಿ ಇಯರ್‌ಫೋನ್ ಹಾಕಿಕೊಂಡು ಕುಳಿತುಕೊಂಡಿದ್ದೆ. ಕಿವಿಗೆ ಇಯರ್‌ಫೋನ್ ಸಿಕ್ಕಿಸಿ ಹಾಡು ಕೇಳುತ್ತಾ ಕುಳಿತವರೆಲ್ಲರಿಗೆ ಹೊರಗಿನ ಪ್ರಪಂಚದಲ್ಲಿ ಏನಾಗುತ್ತಿದೆ ಎಂದು ಗೊತ್ತಾಗುವುದೇ ಇಲ್ಲ. ನನ್ನದೂ ಅದೇ ಕತೆ. ಕೆಲವೊಮ್ಮೆ ಕೆಲವೊಂದು ಹಾಡುಗಳನ್ನು ಕೇಳುತ್ತಾ ಇದ್ದರೆ ಏನೇನೋ ನೆನಪಾಗುತ್ತದೆ. ಹಾಗೇ ಹಾಡು ಕೇಳುತ್ತಾ ಬಸ್ಸಿನ ಕಿಟಕಿಯಿಂದ ಹೊರಗಡೆ ಕಣ್ಣಾಯಿಸುತ್ತಿದ್ದಂತೆ ಬಸ್ ಒಂದು ಸ್ಟಾಪ್‌ನಲ್ಲಿ ನಿಂತಿತು. ಅಷ್ಟರಲ್ಲಿ ನನ್ನ ಕಣ್ಣಿಗೆ ಹೆಂಗಸೊಬ್ಬಳು ತನ್ನ ಮಗುವಿನ ಕೈಹಿಡಿದು ಜಾಗ್ರತೆಯಿಂದ ರಸ್ತೆ ದಾಟುತ್ತಿದ್ದುದು ಕಾಣಿಸಿತು. ಇನ್ನು ಕೆಲವರು ಬಸ್ಸಿಗಾಗಿ ಅತ್ತ ಕಡೆಯಿಂದ ಧಾವಿಸುತ್ತಾ ಓಡೋಡಿ ಬಂದು ಬಸ್ ಹತ್ತುತ್ತಿದ್ದರು.
ಬಸ್ ಜನರನ್ನು ಹತ್ತಿಸಿಕೊಂಡು ಮುಂದೆ ಚಲಿಸಿತು. ನನ್ನ ಮುಂದಿನ ಸೀಟ್‌ನಲ್ಲಿ ಹುಡುಗ-ಹುಡುಗಿ ಕುಳಿತಿದ್ದರು. ಅವರು ಏನೋ ಹರಟುತ್ತಿದ್ದಂತಿತ್ತು. ತುಂಬ ಖುಷಿ ಖುಷಿಯಾಗಿ ಮಾತನಾಡುತ್ತಿದ್ದರು. ಅವರು ಮಾತನಾಡುವ ಶೈಲಿ ನೋಡಿದರೆ ಅವರಿಬ್ಬರು ಒಬ್ಬರನ್ನೊಬ್ಬರು ತುಂಬ ಪ್ರೀತಿಸುತ್ತಿರುವಂತಿತ್ತು. ಈ ಹುಡುಗ-ಹುಡುಗಿಯನ್ನು ನೋಡಿ ಪ್ರೀತಿಯಲ್ಲಿ ಎಷ್ಟೊಂದು ಸುಖವಿದೆ ಅಲ್ವಾ ಅಂತನ್ನಿಸಿತು.
ಒಬ್ಬನಿಗೆ ಅಪಘಾತವಾಗಿ ಗಾಯಗೊಂಡಿದ್ದರೆ ಅವನಿಗೆ ನಾವು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಕೇವಲ ವೈದ್ಯರಿಗೆ ತೋರಿಸಿ ಔಷಧಿಕೊಡಿಸಿದರೆ ಅವನ ನೋವು ಕಡಿಮೆಯಾಗುವುದಿಲ್ಲ. ಬದಲಾಗಿ ಅವನ ಮನೆಯವರು, ಹಿತೈಷಿಗಳು ಬಂದು ಉಪಚರಿಸಿಕೊಳ್ಳುವಾಗ ಆತನಿಗೆ ಎಲ್ಲಾ ನೋವು ಕಡಿಮೆಯಾಗುತ್ತದೆ. ಜೊತೆಗೆ ತಾನು ಬೇಗ ಗುಣಮುಖನಾಗುವೆ ಎಂಬ ಧೈರ್ಯ, ನಂಬಿಕೆಯೂ ಸೇರಿ ಆತ ಬೇಗನೆ ಚೇತರಿಸಿಕೊಳ್ಳುತ್ತಾನೆ. ಹಾಗೆಯೇ ಒಂದು ಮಗುವಿನ ಅಪ್ಪ-ಅಮ್ಮ ತನ್ನ ಮಗುವನ್ನು ಚೆನ್ನಾಗಿರಬೇಕು ಎಂದು ಎಷ್ಟು ಪ್ರೀತಿಯಿಂದ ಸಾಕುತ್ತಾರೆ ಎಂದರೆ ಅದು ಕೇಳಿದ್ದೆಲ್ಲವನ್ನೂ ಕೊಡಿಸುತ್ತಾರೆ. ಅವರಿಗೂ ಮಗುವಿನ ಖುಷಿಯೇ ಮುಖ್ಯ. ಅದರಂತೆಯೇ ಹೆಂಡತಿಯಾದವಳು ತನ್ನ ಗಂಡ ಬರುವ ಹೊತ್ತು ಮೀರಿದರೆ ತಳಮಳಗೊಳ್ಳುತ್ತಾಳೆ. ನಮ್ಮನ್ನು ಪ್ರೀತಿಸುವವರಿಗೆ ನಾವು ಬೈದರೂ ಅವರು ನಮಗೆ ವಾಪಾಸು ಬೈಯ್ಯುವುದಿಲ್ಲ. ಅದರ ಬದಲು ಅವರು ಅಳುತ್ತಾರೆ. ಪ್ರೀತಿಯೆಂದರೆ ಇದೇ ಅಲ್ಲವೆ? ನಿಜವಾದ ಪ್ರೀತಿ ಎಂದರೆ ಇದೇ. ಈ ಪ್ರಪಂಚದಲ್ಲಿ ಪ್ರೀತಿ ಇಲ್ಲದೆ ಬದುಕಲು ಸಾಧ್ಯವಿಲ್ಲ. ಪ್ರೀತಿ ಇಲ್ಲದೆ ಬದುಕುವುದಲ್ಲಿ ಅರ್ಥವೂ ಇಲ್ಲ.
ಮಂಜನಾಥ್
ಥಮ ಪಿಯುಸಿ ಸರಕಾರಿ ಪದವಿಪೂರ್ವ ಕಾಲೇಜು, ಕೊಂಬೆಟ್ಟು ಪುತ್ತೂರು