ಕೊಲ್ಹಾರ: ತಾಲೂಕಿನ ಹಣಮಾಪುರ ಗ್ರಾಮದ ಬಳಿ ಬಳೂತಿ ಗ್ರಾಮದ ಸರ್ವೇ ನಂ.174 ಮತ್ತು 175 ರಲ್ಲಿ ಸ್ಥಾಪಿಸಲಾಗಿರುವ ಮೂರು ಸ್ಟೋನ್ ಕ್ರಷರ್‌ಗಳಿಗೆ ಪುನರ್ ಆರಂಭಕ್ಕೆ ಅನುಮತಿಸಿ ಠರಾವು ಪಾಸು ಮಾಡಿಕೊಡಬಾರದು ಎಂದು ರೈತರು ಮತ್ತು ಸಾರ್ವಜನಿಕರು ಹಣಮಾಪುರ ಗ್ರಾಪಂ ಹಾಗೂ ತಾಪಂ ಅಧಿ ಕಾರಿಗಳಿಗೆ ಮನವಿ ಸಲ್ಲಿಸಿದರು. ಕ್ರಷರ್‌ಗಳಿಂದ ಸಮೀಪದ ಗ್ರಾಮಗಳ ಸುತ್ತಮುತ್ತಲಿನ ಜಮೀನುಗಳ ನೂರಾರು ರೈತರು ಹಾಗೂ ಆಶ್ರಯ ಕಾಲೋನಿಯ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದು, ಜೀವಭಯದಲ್ಲೇ ಬದುಕು ಸಾಗಿಸುವಂತಾಗಿದೆ.
ಗಣಿಗಾರಿಕೆ ಸ್ಫೋಟದಿಂದ ಪ್ರತಿದಿನ ಕಲ್ಲುಗಳು ಹಾಗೂ ವಿಷಯುಕ್ತ ಧೂಳು ಮನೆಯ ಮೇಲೆ ಹಾಗೂ ಬೆಳೆಗಳ ಮೇಲೆ ಬಂದು ಬೀಳುತ್ತಿದ್ದು, ಬೆಳೆಹಾನಿ ಜತೆ ಬದುಕು ಹಾಳಾಗಿದೆ ಎಂದು ಆರೋಪಿಸಿದರು. ಜಲ್ಲಿ ಕ್ರಷರ್‌ಗಳ ಗಣಿಗಾರಿಕೆ ಹಾವಳಿಯಿಂದ ಸುತ್ತಲಿನ ಫಲವತ್ತಾದ ಕೃಷಿ ಭೂಮಿ ಬರಡಾಗುತ್ತಿದ್ದು, ಗಣಿಗಾರಿಕೆಯ ರಾಸಾಯನಿಕ ಹಾಗೂ ಧೂಳಿನಿಂದ ಬಂಗಾರದಂತಹ ಬೆಳೆಗಳು ಹಾಳಾಗುತ್ತಿವೆ. ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ನೂರಾರು ರೈತರು ಗಣಿಗಾರಿಕೆ ಪರಿಣಾಮದಿಂದ ಬೆಳೆಗಳನ್ನು ಕಳೆದುಕೊಂಡು ಇತ್ತ ಕೃಷಿಗಾಗಿ ಮಾಡಿರುವ ಸಾಲಗಳನ್ನು ತೀರಿಸಲಾಗದೇ, ಅತ್ತ ಕುಟುಂಬ ನಿರ್ವಹಣೆ ಸಹ ಮಾಡಲಾಗದೇ ಬೇಸತ್ತು ಜಲ್ಲಿ ಕ್ರಷರ್‌ಗಳಿಗೆ ಹೋಗಿ ಕುಟುಂಬ ಸಮೇತ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು ಮಾತ್ರ ಬಾಕಿಯಿದೆ.
ಇನ್ನೂ ಈ ಕ್ರಷರ್‌ಗಳು ಜನವಸತಿ ಪ್ರದೇಶದ ಸಮೀಪವಿರುವುದರಿಂದ ಕಡುಬಡವರ ಆಶ್ರಯ ಯೋಜನೆ ಮನೆಗಳು ಕಲ್ಲು ಗಣಿಗಾರಿಕೆ ಸ್ಫೋಟದಿಂದ ಬಿರುಕು ಬಿಟ್ಟು ಜೀವ ಆಹುತಿಗಾಗಿ ಬಾಯಿ ತೆರೆದಿವೆ ಎಂದು ಟೀಕಿಸಿದರು. ನಿರಂತರ ಸ್ಫೋಟಕದಿಂದ ಕೃಷಿ ಕೊಳವೆಬಾವಿಗಳು ಮುಚ್ಚಿವೆ. ಪುಟ್ಟ ಮಕ್ಕಳು ಸ್ಫೋಟದ ಶಬ್ದದಿಂದ ಭಯಭೀತರಾಗಿದ್ದು, ಎಲ್ಲರೂ ರಾತ್ರಿಯಿಡೀ ಜಾಗರಣೆ ಮಾಡುತ್ತಿದ್ದೇವೆ. ಅಲ್ಲದೇ ಸಾಕಷ್ಟು ಜನ ಅನಾರೋಗ್ಯಕೀಡಾಗುತ್ತಿದ್ದಾರೆ. ಮೂರು ಕ್ರಷರ್ ಘಟಕಗಳು ಕಾನೂನು ನಿಯಮ ಗಾಳಿಗೆ ತೂರಿ ಉದ್ಯಮ ನಡೆಸುತ್ತಿದ್ದಾರೆ.
ಆದ ಕಾರಣ ಈ ಸ್ಟೋನ್ ಕ್ರಷರ್ ಗಳಿಗೆ ಸ್ಥಳೀಯ ಗ್ರಾಪಂ ಯಾವುದೇ ಕಾರಣಕ್ಕೂ ಪುನರ್ ಆರಂಭಕ್ಕೆ ಠರಾವು ಅಥವಾ ಅನುಮತಿ ನೀಡಬಾರದು. ಯಾವುದೋ ಆಮಿಷಕ್ಕೆ ಅಥವಾ ಒತ್ತಡಕ್ಕೆ ಮಣಿದು ಅನುಮತಿ ನೀಡಿದರೆ ಗ್ರಾಪಂ ಕಚೇರಿಗೆ ಬೀಗ ಜಡಿದು ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರು ಆಗ್ರಹಿಸಿ ಮನವಿ ಸಲ್ಲಿಸಿದರು. ಮಹ್ಮದಾÕಬ್ ಹೊನ್ಯಾಳ, ಲಿಂಗಪ್ಪ ಹಳ್ಳೂರು, ರಮೇಶ ನರಿಯವರ, ಶೇಖಪ್ಪ ಮಳಗಾಂವಿ, ರೈತ ಮಹಿಳೆಯರಾದ ಶಂಕ್ರಮ್ಮ ಹೊಸೂರು, ಗೀತಾ ಮಡಿವಾಳರ, ಲಕ್ಷ್ಮೀಬಾಯಿ ಕುರಿ, ಬಸಮ್ಮ ಮಡಿವಾಳರ, ಪಾರವ್ವ ಪೂಜಾರ, ದಾಳವ್ವ ಮಾದರ, ಶಾಂತವ್ವ ಮಾದರ ಹಾಗೂ ಗ್ರಾಪಂ ಸದಸ್ಯರಾದ ಮಹೇಶ ತೋಟಗೇರ, ನಿಂಗಪ್ಪ ಹಳ್ಳೂರ ಸೇರಿದಂತೆ ಹಲವಾರು ನೊಂದ ನಿರಾಶ್ರಿತರು ಹಾಜರಿದ್ದರು.