ಬೆಂಗಳೂರು: ತಮಿಳುನಾಡಿಗೆ ಯಾವುದೇ ಕಾರಣಕ್ಕೂ ಕಾವೇರಿ ನೀರು ಬಿಡಬಾರದು ಎಂದು ಮಾಜಿ ಸಚಿವ ಹಾಗೂ ಮಂಡ್ಯ ಶಾಸಕ ಅಂಬರೀಶ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಬರಗಾಲ ಇರುವುದರಿಂದ ಜಲಾಶಯಗಳಲ್ಲಿ ನೀರು ಸಂಗ್ರಹವಾಗಿಲ್ಲ. ಈಗಿರುವ ಪ್ರಮಾಣ ಲೆಕ್ಕ ಹಾಕಿದರೆ
ಬೆಂಗಳೂರಿಗೆ ಮತ್ತು ಕಾವೇರಿ ಕೊಳ್ಳದಲ್ಲಿರುವ ಪ್ರದೇಶಗಳ ಜನರಿಗೆ ಕುಡಿಯಲು, ಜಾನುವಾರುಗಳಿಗೆ ಹಾಗೂ ಬೆಳೆದು ನಿಂತಿರುವ ಬೆಳೆಗಳಿಗೆ ನೀಡುವುದೂ ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಟ್ಟರೆ ಹಾಹಾಕಾರವಾಗುತ್ತದೆ. ಹೀಗಾಗಿ,ತಮಿಳುನಾಡಿಗೆ ನೀರು ಬಿಡಬಾರದು ಎಂದು ಆ ಭಾಗದ ಜನಪ್ರತಿನಿಧಿಯಾಗಿ ಮತ್ತು ರೈತರ ಪರವಾಗಿ ಮನವಿ ಮಾಡುತ್ತೇನೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಪತ್ರದ ಸಾರಾಂಶ: ಕಾವೇರಿ ಜಲಾಶಯದಿಂದ ನೀರು ಬಿಡುವಂತೆ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿಯವರು ತಮಗೆ ಬರೆದಿರುವ ಪತ್ರಕ್ಕೆ ಸ್ಪಂದಿಸಬಾರದು. ತಾವು ಸ್ಪಂದಿಸುವುದಿಲ್ಲ ಎಂಬ ವಿಶ್ವಾಸ ನನ್ನದು. ಈಗಾಗಲೇ ತಾವು ನೀರು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ನಿಮ್ಮ ನಿಲುವನ್ನು ನಾನು ಸೇರಿದಂತೆ ಕಾವೇರಿ ಅಚ್ಚುಕಟ್ಟು ಪ್ರದೇಶದ ಎಲ್ಲ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ರೈತ ಸಂಘಟನೆಗಳು,ಹೋರಾಟಗಾರರು ಸ್ವಾಗತಿಸುತ್ತೇವೆ. ಜೊತೆಗೆ ನಿಮ್ಮ ಜತೆ ನಿಲ್ಲುತ್ತೇವೆ. ನ್ಯಾಯಾಧಿಕರಣದ ತೀರ್ಪಿನ ಅನ್ವಯ ನೀರು ಬಿಡಲು ತಮಿಳುನಾಡಿನ ಮುಖ್ಯಮಂತ್ರಿಯವರು ಕೋರಿದ್ದಾರೆ. ಆದರೆ, ನಮ್ಮಲ್ಲೇ ನೀರಿಲ್ಲದಿದ್ದರೆ ತಮಿಳುನಾಡಿಗೆ ಎಲ್ಲಿಂದ ಬಿಡುವುದು.
ರಾಜ್ಯದ ಮುಖ್ಯಮಂತ್ರಿಗಳಾದ ತಾವು ಯಾವುದೇ ಕಾರಣಕ್ಕೂ ಕಾವೇರಿ ನೀರನ್ನು ಬಿಡದೆ ರೈತರ ಹಿತವನ್ನು ಕಾಪಾಡಬೇಕು. ಅಗತ್ಯವಾದರೆ ಜನಪ್ರತಿನಿಧಿಗಳು, ರೈತ ಸಂಘಟನೆಗಳು ಹಾಗೂ ಹೋರಾಟಗಾರರ ಮತ್ತು ಸರ್ವ ಪಕ್ಷದ ಮುಖಂಡರ ಸಭೆ ಕರೆದು ಚರ್ಚಿಸಬೇಕು ಎಂದು ಕೋರುತ್ತೇನೆ.