ಹುಣಸೂರು: ತಾಲೂಕಿನ ವಿವಿಧ ಗ್ರಾಪಂಗಳಲ್ಲಿ ಕಳೆದ 10 ವರ್ಷಗಳ ಹಿಂದೆ ಎನ್‌ಆರ್‌ಇಜಿ ಯೋಜನೆಯಡಿಯಲ್ಲಿ ಕೈಗೊಂಡಿದ್ದ ಕಾಮಗಾರಿಗಳನ್ನು ಲೋಕಾಯುಕ್ತ ತನಿಖೆಗೊಳ ಪಡಿಸಿರುವುದನ್ನು ಕೈಬಿಡಲು ಸರಕಾರದ ಮೇಲೆ ಒತ್ತಡ ಹಾಕಲು ತಾಲೂಕು ಪಿಡಿಒಗಳ ಸಂಘದಿಂದ ಶಾಸಕ ಎಚ್.ಪಿ. ಮಂಜುನಾಥ್‌ಗೆ ಮನವಿ ಸಲ್ಲಿಸಿದರು.
ನಗರದಲ್ಲಿ ಶಾಸಕರನ್ನು ಭೇಟಿ ಮಾಡಿದ ಗ್ರಾಮೀಣಾಭಿವೃದ್ಧಿ ಇಲಾಖೆ ಸಿಬ್ಬಂದಿ ಹಾಗೂ ತಾಲೂಕು ಪಿಡಿಒ ಸಂಘದ ಪದಾಧಿಕಾರಿಗಳು ಹಾಗೂ ನೌಕರರು ಉದ್ಯೋಗ ಖಾತರಿ ಯೋಜನೆಯ ನಿಯಮದಲ್ಲಿ ಗ್ರಾಮಸ್ಥರ ಬೇಡಿಕೆಗೆ ಅನುಗುಣವಾಗಿ ಕಾಮಗಾರಿ ಕೈಗೊಳ್ಳಬೇಕಿದೆ, ಅಲ್ಲದೆ ಅಂದಿನ ಕಾಮಗಾರಿಯ ಯಾವ ಕುರುಹುಗಳೂ ಇರುವುದಿಲ್ಲ, ಹಿಂದೆ ಮೇಲಧಿಕಾರಿಗಳು ಹಾಗೂ ತಾಪಂ ಕಾರ್ಯನಿರ್ವಹಣಾಧಿಕಾರಿ, ಜನಪ್ರತಿನಿಧಿಗಳ ಸೂಚನೆಯಂತೆ ಹಾಗೂ ಗ್ರಾಮಸಭೆಗಳ ನಿರ್ಣಯದಂತೆ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು.
ಇದೀಗ ಯೋಜನೆ ಅನುಷ್ಠಾನದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಪಾತ್ರವಿಲ್ಲದಿದ್ದರೂ ಈ ತನಿಖೆ ಎಂಬುದು ವಿನಾಕಾರಣ ಕಿರುಕುಳ ನೀಡಿದಂತಾಗುತ್ತದೆ. ಇಂತಹ ನಿರ್ಣಯದಿಂದ ಮುಂದೆ ಉದ್ಯೋಗ ಖಾತರಿ ಯೋಜನೆ ಅನುಷ್ಠಾನಗೊಳಿಸುವುದು ಕಷ್ಟಕರವಾಗಲಿದ್ದು, ಅಭಿವೃದ್ಧಿ ಕುಂಠಿತವಾಗುತ್ತದೆ.
ಹಿಂದೆಯೇ ವಾರ್ಷಿಕ ನಿರ್ವಹಣೆಯ ಲೆಕ್ಕ ಪರಿಶೋಧನೆ ನಡೆಸಿದ್ದರೂ ಇದೀಗ ತನಿಖೆಗೊಳಪಡಿಸುವ ಆದೇಶಗಳು ಹಾಗೂ ಲೋಕಾಯುಕ್ತಕ್ಕೆ ವಹಿಸಿರುವುದು ದುರದೃಷ್ಟಕರ, ಹೀಗಾಗಿ ತನಿಖೆಗೆ ಆದೇಶ ನೀಡಿರುವುದನ್ನು ಸರಕಾರ ಹಿಂಪಡೆಯಬೇಕೆಂದು ಮುಖ್ಯಮಂತ್ರಿಗಳು ಹಾಗೂ ಗ್ರಾಮೀಣಾಭಿ ವೃದ್ಧಿ ಮಂತ್ರಿಗಳ ಮೇಲೆ ಒತ್ತಡ ಹಾಕಬೇಕೆಂದು ಹಾಗೂ ಎಂಎನ್‌ಆರ್‌ಇಜಿ ಯೋಜನೆಯಡಿಯಲ್ಲಿ ನಿಯಮಾನುಸಾರ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.
ಮನವಿ ಸ್ವೀಕರಿಸಿದ ಶಾಸಕ ಮಂಜುನಾಥ್ ಮಾತನಾಡಿ, ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಭಿವೃದ್ಧಿ ಅಧಿಕಾರಿಗಳ ಸಮಸ್ಯೆ ಬಗ್ಗೆ ತಮಗೆ ಅರಿವಿದ್ದು, ಈ ಬಗ್ಗೆ ನಿಮ್ಮ ಪರವಾಗಿ ಸರಕಾರದ ಮೇಲೆ ಒತ್ತಡ ಹಾಕುತ್ತೇನೆಂದು ಭರವಸೆ ನೀಡಿದರು. ಈ ಆದೇಶದಿಂದ ಧೃತಿಗೆಡದೆ ದಕ್ಷತೆಯಿಂದ ಕಾರ್ಯನಿರ್ವಹಿಸಿ ಹಾಗೂ ಸರಕಾರದ ಯೋಜನೆಗಳನ್ನು ಬಡಜನರಿಗೆ ತಲುಪಿಸಿ, ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು, ಶೌಚಾಲಯ ನಿರ್ಮಾಣ ಹಾಗೂ ಶುಚಿತ್ವ ಕಾಪಾಡಲು ಆದ್ಯತೆ ನೀಡುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಬೇಕೆಂದು ಸೂಚಿಸಿದರು.
ತಾಲೂಕು ಪಿಡಿಒ ಸಂಘದ ಅಧ್ಯಕ್ಷ ಮಣಿ, ನರಹರಿ, ರಚನಾ, ಮಹದೇವ್, ಮಹೇಶನಾಯ್ಕ, ನಾಗೇಂದ್ರ, ಶ್ರೀನಿವಾಸ್ ಸೇರಿದಂತೆ ತಾಲೂಕಿನ ಎಲ್ಲ ಪಿಡಿಒಗಳು ಹಾಜರಿದ್ದರು.