ತಿರುವನಂತಪುರ/ಚೆನ್ನೈ: ಶಬರಿಮಲೆ ದೇಗುಲ ಪ್ರವೇಶ ವಿವಾದ ಸಂಬಂಧ ಇದೇ ಮೊದಲ ಬಾರಿ ದಕ್ಷಿಣ ಭಾರತ ಸೂಪರ್ ಸ್ಟಾರ್ ರಜನಿಕಾಂತ್ ಪ್ರತಿಕ್ರಿಯೆ ನೀಡಿದ್ದಾರೆ. ದೇಗುಲಗಳ ಸಂಪ್ರದಾಯ, ಆಚಾರ ವಿಚಾರಗಳಲ್ಲಿ ಯಾರೂ ಮಧ್ಯಪ್ರವೇಶ ಮಾಡಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯಗಳಿಗೆ ನಾವು ಗೌರವ ನೀಡಬೇಕು. ನನ್ನ ಕಳಕಳಿಯ ವಿನಂತಿ ಏನೆಂದರೆ, ಯಾರೂ ದೇಗುಲದ ವಿಚಾರದಲ್ಲಿ ಮೂಗು ತೂರಿಸಬಾರದು’ ಎಂದು ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ರಜನಿಕಾಂತ್ ಮಾತನಾಡಿ ದ್ದಾರೆ. ಆದರೆ, ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲೂ, ಎಲ್ಲ ಸ್ಥಳಗಳಲ್ಲೂ ಸಮಾನವಾಗಿ ಕಾಣಬೇಕು ಎಂಬುದರಲ್ಲಿ ಎರಡನೇ ಮಾತೇ ಇಲ್ಲ ಎಂದೂ ಹೇಳಿದ್ದಾರೆ. ಸುಪ್ರೀಂ ತೀರ್ಪನ್ನು ಗೌರವಿಸಲೇಬೇಕು ಎಂದ ಅವರು, ದೇಗುಲದ ಆಚರಣೆ ಮತ್ತು ಸಂಪ್ರದಾಯದ ವಿಚಾರದಲ್ಲಿ ಮಾತ್ರ ತುಸು ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ.
ಈ ಮಧ್ಯೆ ದಕ್ಷಿಣ ಭಾರತ ಮತ್ತೂಬ್ಬ ಸ್ಟಾರ್ ನಟ ಕಮಲ್‌ಹಾಸನ್ ಅವರು ಈ ಬಗ್ಗೆ ಪ್ರತಿಕ್ರಿಯೆ ಕೇಳಬೇಡಿ ಎಂದಿದ್ದಾರೆ. ಮಹಿಳೆಯರಿಗೆ ಸಮಾನ ಅವಕಾಶ ಸಿಗಬೇಕು ಎಂದು ಕೇಳುವವರಲ್ಲಿ ನಾನೂ ಮೊದಲಿಗ. ಆದರೆ, ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಅಯ್ಯಪ್ಪ ಸ್ವಾಮಿ ಭಕ್ತರು ಏಕೆ ಪ್ರತಿಭಟನೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಹೀಗಾಗಿ ಈ ಬಗ್ಗೆ ನನ್ನ ಬಳಿ ಯಾವುದೇ ಪ್ರತಿಕ್ರಿಯೆ ನೀಡಬೇಡಿ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.
ಭಾರೀ ಮಳೆ: ಈ ಎಲ್ಲ ಬೆಳವಣಿಗೆಗಳ ನಡುವೆಯೇ ಶನಿವಾರ ಮಧ್ಯಾಹ್ನದ ಕೇರಳದ ದಲಿತ ಮಹಿಳಾ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ, 38 ವರ್ಷದ ಮಂಜು ಎಂಬವರು ಪಂಪಾ ನದಿ ತೀರದ ವರೆಗೆ ತೆರಳಿದ್ದಾರೆ. ಅಲ್ಲಿಂದ ಮುಂದೆ ಹೋಗಲು ಪೊಲೀ ಸರ ಭದ್ರತೆ ಕೇಳಿದ್ದರು. ಭಾರೀ ಮಳೆ ಹಿನ್ನೆಲೆಯಲ್ಲಿ ಪೊಲೀಸರು ಅಸಾಧ್ಯವೆಂದು ಹೇಳಿದ್ದರು. ಸಂಜೆ ವರೆಗೂ ಅಲ್ಲೇ ಕಾದ ಮಂಜು ಅವರಿಗೆ ದೇಗುಲ ಪ್ರವೇಶ ಸಾಧ್ಯವಾಗಲಿಲ್ಲ. ಈ ಮಧ್ಯೆ ಶುಕ್ರವಾರವೇ ಕೇರಳ ಸರಕಾರ ಯಾವುದೇ ಹೋರಾಟಗಾರರು, ಚಳವಳಿಗಾರರು ದೇಗುಲ ಪ್ರವೇಶಕ್ಕೆ ಬರಬೇಡಿ ಎಂದು ಮನವಿ ಮಾಡಿ ಕೊಂಡಿದೆ. ಇದೀಗ ಪೊಲೀ ಸರು ಮಂಜು ಹಿನ್ನೆಲೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಸೇರಿದಂತೆ ಮಂಜು ವಿರುದ್ಧ 14 ಕೇಸುಗಳು ದಾಖಲಾಗಿವೆ. ಈ ನಡುವೆ ಅವರು ವಾಪಸಾಗಿದ್ದಾರೆ.
ಜಾಮೀನಿಲ್ಲ: ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಆಸ್ಪದ ನೀಡಿದ ಹಿನ್ನೆಲೆಯಲ್ಲಿ ಗುರುವಾರವೇ ಬಂಧಿತ ರಾಗಿದ್ದ ಮುಖ್ಯತಂತ್ರಿಗಳ ಮೊಮ್ಮಗ, ಪ್ರತಿಭಟನೆಯ ಮುಂಚೂಣಿ ವಹಿಸಿದ್ದ ರಾಹುಲ್ ಈಶ್ವರ್ ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಸದ್ಯ ರಾಹುಲ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ತಿರು ವಂನಪುರದ ವೈದ್ಯಕೀಯ ಕಾಲೇಜಿಗೆ ಸೇರ್ಪಡೆ ಮಾಡಲಾಗಿದೆ. ಸದ್ಯ ರಾಹುಲ್ ಅವರ ಆರೋಗ್ಯ ಸ್ಥಿತಿ ಉಲ್ಬಣಿಸಿದೆ ಎಂದು ಪತ್ನಿ ದೀಪಾ ಹೇಳಿದ್ದಾರೆ. ಅಲ್ಲದೆ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆಯನ್ನೂ ನೀಡು ತ್ತಿಲ್ಲ ಎಂದು ಆರೋಪಿಸಿದ್ದಾರೆ.
ಆಧಾರ್ ತೋರಿಸಿ ಒಳಹೋದ ಮಹಿಳೆ: ಶಬರಿ ಮಲೆ ದೇಗುಲದ ಬಳಿ ಶನಿವಾರ ಮಧ್ಯಾಹ್ನ ಕೊಂಚ ಬಿಗುವಿನ ವಾತಾವರಣವೂ ಸೃಷ್ಟಿಯಾಗಿತ್ತು. ಪ್ರತಿ ಭಟನಾ ಕಾರರ ಕಣ್ತಪ್ಪಿಸಿ ಮಹಿಳೆಯೊಬ್ಬರು ದೇಗುಲ ಪ್ರವೇಶ ಮಾಡಿದ್ದಾರೆ ಎಂಬ ಸುದ್ದಿ ಹರಿ ದಾಡಿದ್ದವು. ಇದು ಭಕ್ತರನ್ನು ಕೆರಳಿಸಿತ್ತು. ಆದರೆ ಪೊಲೀಸರೇ ಹೇಳಿದ ಪ್ರಕಾರ, ನಿಷೇಧಿತ ವಯಸ್ಸಿನ ಯಾವುದೇ ಮಹಿಳೆಯರು ದೇಗುಲ ಪ್ರವೇಶ ಮಾಡಿಲ್ಲ. ಬದಲಾಗಿ ಒಬ್ಬ 50 ವರ್ಷ ಮೀರಿದ ಮಹಿಳೆ ಯೊಬ್ಬರು ತಮ್ಮ ಆಧಾರ್ ಕಾರ್ಡ್ ತೋರಿಸಿ ವಯಸ್ಸನ್ನೂ ದೃಢೀಕರಿಸಿ 18 ಮೆಟ್ಟಿಲು ಹತ್ತಿ ಹೋಗಿದ್ದರು. ಅಲ್ಲದೆ ಇವರು ಕಳೆದ ವರ್ಷವೂ ದೇಗುಲ ಪ್ರವೇಶ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಬಿಗುವಿನ ವಾತಾವರಣ ಸೃಷ್ಟಿ ಯಾಗಲು ಮಾಧ್ಯಮಗಳೇ ಕಾರಣವಾಗಿವೆ ಎಂದೂ ಪೊಲೀಸರು ಹೇಳಿದ್ದಾರೆ. ಈ ಮಧ್ಯೆ, ನಿಳಕ್ಕಲ್ ಬಳಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ.
50 ವರ್ಷ ಆದ ಮೇಲೆ ಬರುವೆ ಎಂದ ಬಾಲಕಿ
ಶಬರಿಮಲೆ ದೇಗುಲ ಪ್ರವೇಶಕ್ಕೆ ಒಂದು ಕಡೆ ಯತ್ನ ನಡೆಯುತ್ತಿದ್ದರೆ, ಇನ್ನೊಂದೆಡೆ 9 ವರ್ಷದ ಬಾಲಕಿಯೊಬ್ಬಳು ತನಗೆ 50 ವರ್ಷಗಳಾದ ಮೇಲೆ ದೇಗುಲಕ್ಕೆ ಮತ್ತೆ ಬತೇìನೆ ಎಂದು ಹಾಕಿಕೊಂಡಿದ್ದ ಬೋರ್ಡ್ ಗಮನಸೆಳೆದಿದೆ. ತನ್ನ ಪೋಷಕರೊಂದಿಗೆ ಶುಕ್ರವಾರ ದೇಗುಲಕ್ಕೆ ಬಂದಿದ್ದ ಜನನಿ, ಮುಂದೆ ತನಗೆ 50 ವರ್ಷವಾದ ಮೇಲೆ ಬರುತ್ತೇನೆ ಎಂದು ಬೋರ್ಡ್ ನೇತುಹಾಕಿಕೊಂಡಿದ್ದಳು. ಈ ಬಗ್ಗೆ ಮಾತನಾಡಿದ ಜನನಿಯ ತಂದೆ, ತನ್ನ ಪುತ್ರಿಗೆ ಸುಪ್ರೀಂಕೋರ್ಟ್‌ನ ತೀರ್ಪಿನ ಬಗ್ಗೆ ಗೊತ್ತಿಲ್ಲ. ಆದರೂ ಈಕೆ ದೇಗುಲದ ಸಂಪ್ರದಾಯ ಗೌರವಿಸಲಿದ್ದಾಳೆ. ಹೀಗಾಗಿಯೇ 50 ವರ್ಷದ ಅನಂತರ ಬರುತ್ತೇನೆ ಎಂದು ಬರೆದುಕೊಂಡಿದ್ದಾಳೆ ಎಂದಿದ್ದಾರೆ. ಅಂದ ಹಾಗೆ ಇವರು ತಮಿಳುನಾಡಿನ ಮಧುರೈ ಮೂಲದವರು.