ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ವಿಚಾರದಲ್ಲಿ ಪೇಜಾವರ ಶ್ರೀಗಳು ಹಸ್ತಕ್ಷೇಪ ಮಾಡುವುದು ಬೇಡ. ಆ ವಿಚಾರ ನೋಡಿಕೊಳ್ಳಲು ನಮ್ಮ ಸ್ವಾಮೀಜಿಗಳಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಕಿಡಿ ಕಾರಿದ್ದಾರೆ.
ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಕುರಿತು ನಮ್ಮ ಸಮುದಾಯದ ಶ್ರೀಗಳಿದ್ದಾರೆ ಅವರು ಈ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಈ ವಿಚಾರದಲ್ಲಿ ಆರ್‌ಎಸ್‌ಎಸ್ ಮಧ್ಯ ಪ್ರವೇಶಿಸುವ ಅಗತ್ಯ ಇಲ್ಲ ಎಂದರು.
ಪಂಚ ಪೀಠ ಮಠಾಧಿಪತಿಗಳು ಬರದಿದ್ದರೂ ಲಿಂಗಾಯತ ಪ್ರತ್ಯೇಕ ಧರ್ಮವನ್ನಾಗಿಸಲು ಹೋರಾಟ ನಡೆಸುತ್ತೇವೆ. ಕ್ಯಾಬಿನೆಟ್‌ನಲ್ಲೂ ಒಪ್ಪಿಸುತ್ತೇವೆ, ಕೇಂದ್ರ ಸರ್ಕಾರ ನಮ್ಮ ಮನವಿ ಪುರಸ್ಕರಿಸದಿದ್ದರೆ ಕಾನೂನು ಹೋರಾಟ ನಡೆಸುತ್ತೇವೆ ಎಂದರು.
ನಮ್ಮ ಸಮಾಜದಲ್ಲಿ ಕೆಲವರು ಬಸವಣ್ಣನನ್ನು ನಂಬುವುದಿಲ್ಲ.ಅಂತಹವರು ಹಿಂದೂ ಧರ್ಮದಲ್ಲೇ ಮುಂದುವರಿಯಲಿ ಎಂದರು.
ಯಡಿಯೂರಪ್ಪ ಅವರು ಈ ಬಗ್ಗೆ ಸ್ಪಷ್ಟವಾಗಿ ಎನನ್ನೂ ಹೇಳುವುದಿಲ್ಲ,ಅವರು ಆರ್‌ಎಸ್‌ಎಸ್ ಕಪಿಮುಷ್ಠಿಯಲ್ಲಿದ್ದಾರೆ.ಲಿಂಗಾಯತ ಧರ್ಮಕ್ಕೆ ಅವರು ಬೆಂಬಲಿಸಬೇಕಿತ್ತು. ಚುನಾವಣೆಯಲ್ಲಿ ತೊಂದರೆಯಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ತಪ್ಪು ಮಾಡುತ್ತಿದ್ದಾರೆ ಎಂದರು.
ಹಿಂದೂ ದೇವತೆಗಳನ್ನು ಒಪ್ಪಿ ಆರಾಧಿಸುವವರು ಹಿಂದೂಗಳೇ ಆಗಿದ್ದಾರೆ. ಆದ್ದರಿಂದ ಲಿಂಗಾಯತರು ತಾವು ಹಿಂದೂ ಧರ್ಮದ ಭಾಗವಲ್ಲ ಎಂದು ಹೇಳುವುದು ಸರಿಯಲ್ಲ ಎಂದು ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದರು.