ಕೊಕ್ಕಡ: ವಿದ್ಯಾಸಂಸ್ಥೆಗಳು ಎಂದರೆ ಸಮಾಜದಲ್ಲಿ ಹೆಸರಿಗೆ ಸೀಮಿತವಾಗಿರಬಾರದು. ಉತ್ತಮ ಫಲಿತಾಂಶ ಪಡೆಯುವುದು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ರ್‍ಯಾಂಕ್‌ಗಳನ್ನು ಪಡೆಯುವುದು ಮಾತ್ರ ಉದ್ದೇಶವಾಗ ಬಾರದು. ಸಮಾಜದಲ್ಲಿ ಆದರ್ಶ ವ್ಯಕ್ತಿಗಳ ನಿರ್ಮಾಣವೇ ಮುಖ್ಯ ಗುರಿ ಯಾಗಿರುವಂತಹ ವಿದ್ಯಾ ಸಂಸ್ಥೆಗಳು ರೂಪುಗೊಳ್ಳಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ನೆಲ್ಯಾಡಿ ಘಟಕ ಕಾಲೇಜಿನ ಪ್ರಾಂಶುಪಾಲ ಡಾ| ಯತೀಶ್ ಕುಮಾರ್ ಎಸ್. ಹೇಳಿದರು.
ಅವರು ಎಸ್.ಬಿ. ಕಾಲೇಜು ನೆಲ್ಯಾಡಿಯ ಹತ್ತನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.ಉತ್ತಮ ಶಿಕ್ಷಣಕ್ಕೆ ಅವಕಾಶ, ಸಮಾಜದ ಅಭಿವೃದ್ಧಿ
ಅಧ್ಯಕ್ಷತೆ ವಹಿಸಿದ್ದ ಜ್ಞಾನೋದಯ ಪಿಯು ಕಾಲೇಜಿನ ಪ್ರಾಂಶುಪಾಲ ವಂ| ಫ್ರಾನ್ಸಿಸ್ ತೆಕ್ಕೇಪೂಕ್ಕಳಂ ಮಾತನಾಡಿ, ವಿದ್ಯಾರ್ಥಿಗಳಿಗೆ ವಿದ್ಯೆ ಮಾತ್ರ ನೀಡುವುದು ನಮ್ಮ ಗುರಿಯಲ್ಲ. ವಿದ್ಯೆಯೊಂದಿಗೆ ಮಾನವೀಯ ಮೌಲ್ಯಗಳನ್ನು ನೀಡುವುದು, ಆರ್ಥಿಕವಾಗಿಯೂ ಹಿಂದುಳಿದವರಿಗೆ ಉತ್ತಮ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವುದು ಹಾಗೂ ಸಮಾಜದ ಅಭಿವೃದ್ಧಿ ನಮ್ಮ ಗುರಿ ಎಂದರು.
ನೆಲ್ಯಾಡಿಯ ಎಸ್‌ಬಿ ಕಾಲೇಜು ಪ್ರಾಂಶುಪಾಲ ವಂ| ವರ್ಗೀಸ್ ಕೈಪನಡುಕ್ಕ ಸಂಸ್ಥೆಯ ವರದಿ ಮಂಡಿಸಿದರು. ಪಿಟಿಎ ಅಧ್ಯಕ್ಷ ಸಿ.ಎಂ. ತೋಮಸ್, ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಗಂಗಾಧರ ಶೆಟ್ಟಿ, ಸಂಸ್ಥೆಯ ಬರ್ಸಾರ್ ವಂ| ಐಸಕ್ ಸ್ಯಾಮುವೇಲ್, ವಂ| ಮ್ಯಾಥ್ಯೂ ಪ್ರಫುಲ್, ಎಸ್‌ಬಿ ಕಾಲೇಜಿನ ಉಪಪ್ರಾಂಶುಪಾಲೆ ಗೀತಾ, ವಿದ್ಯಾರ್ಥಿ ನಾಯಕ ಜೋಸ್ಟನ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸಿಂಧ್ಯಾ ಸ್ವಾಗತಿಸಿದರು. ಜೋಸ್ಟನ್ ವಂದಿಸಿದರು. ಶಿಕ್ಷಕಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು. ಶರಣ್ಯಾ ಹಾಗೂ ಬಳಗದವರು ಪ್ರಾರ್ಥಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಮನರಂಜನ ಕಾರ್ಯಕ್ರಮ ನಡೆದವು.