ಬೆಂಗಳೂರು: ಪೊಲೀಸ್ ಪೇದೆಗೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ ಎಂಬುದಾಗಿ ತಮ್ಮ ಪುತ್ರಿ ಸಾರಿಕಾ ವಿರುದ್ಧ ಪೊಲೀಸರು ದಾಖಲಿಸಿರುವ ದೂರು ಸತ್ಯಕ್ಕೆ ದೂರವಾದುದು ಎಂದು ಸಾರಿಕಾ ತಂದೆ ಕೃಷ್ಣ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷ್ಣ, “ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನ ಹಿಂಬಾಲಿಸಿ ಬಂದಿದ್ದನ್ನು ಪ್ರಶ್ನಿಸಿ ತಡೆಯಲು ಮುಂದಾದ ತಮ್ಮ ಮೇಲೆ ಸಾರಿಕಾ ಚಪ್ಪಲಿಯಿಂದ ಥಳಿಸಿ ಅವಮಾನಿಸಿದ್ದಾರೆ ಎಂದು ಕೆ.ಜಿ.ಹಳ್ಳಿ ಠಾಣೆ ಪೇದೆ ಆರ್.ಜಿ.ವೆಂಕಟೇಶ್ ನನ್ನ ಪುತ್ರಿ ಸಾರಿಕಾ ವಿರುದ್ಧ ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಅಲ್ಲಿ ನಡೆದಿದ್ದ ಘಟನೆಯೇ ಬೇರೆ,’ ಎಂದು ಕೃಷ್ಣ ತಿಳಿಸಿದಾರೆ.
ಸಾರಿಕಾಳನ್ನು ತಡೆದ ಪೇದೆ, ಆಕೆ ಆಘಾತದಲ್ಲಿ ಗಾಡಿಯಿಂದ ಕೆಳಗೆ ಬಿದ್ದರೂ ಅವಾಚ್ಯ ಶಬ್ಧಗಳಿಂದ ನಿಂದಿಸಿ ಅವಮಾನಿಸಿದ್ದಾರೆ. ಅಲ್ಲದೇ ಘಟನೆ ನಡೆದ ದಿನ ರಾತ್ರಿ 10.30ರವರೆಗೂ ಪೊಲೀಸ್ ರಾಣೆಯಲ್ಲಿ ಸುಮ್ಮನೆ ಕೂರಿಸಿಕೊಂಡಿದ್ದಾರೆ. ಅಲ್ಲಿಯವರೆಗೂ ಯಾವುದೇ ರೀತಿಯ ವಿಚಾರಣೆ ನಡೆಸಿಲ್ಲ ಹಾಗೂ ನಾವು ಠಾಣೆಯಿಂದ ಹೊರಟ ನಂತರ ಎಫ್ಐಆರ್ ದಾಖಲಿಸಿ ಮರು ದಿನ ನೋಟಿಸ್ ಕಳುಹಿಸಿದ್ದಾರೆ.
ಯಾವುದೇ ಪ್ರಕರಣ ಸಾಬೀತಾದರೆ ಮೊದಲು ಎಫ್ಐಆರ್ ದಾಖಲಿಸಿ ವಿಚಾರಣೆ ನಡೆಸುತ್ತಾರೆ. ಆದರೆ ಇಲ್ಲಿ ಪೊಲೀಸರು ತಮಗೆ ಬೇಕಾದಂತೆ ಎಫ್ಐಆರ್ ದಾಖಲಿಸಿದ್ದಾರೆ ಎಂದು ದೂರಿದರು. ಪುತ್ರಿ ಸಾರಿಕಾ ಸೌಮ್ಯ ಸ್ವಭಾವದವಳಾಗಿದ್ದು, ಘಟನೆ ನಡೆದಾಗಿನಿಂದ ಆಕೆಯ ಮಾನಸಿಕ ಸ್ಥಿತಿ ಸರಿಯಾಗಿಲ್ಲ. ಘಟನೆ ನಡೆದ ಸ್ಥಳಕ್ಕೆ ಸುಮಾರು ಅರ್ಧ ಗಂಟೆ ನಂತರ ನಾನು ಸ್ಥಳಕ್ಕೆ ಧಾವಿಸಿ ನಾವೇ ಪೊಲೀಸರ ಬಳಿ ಕ್ಷಮೆ ಯಾಚಿಸಿದ್ದೇವೆ.
ನನ್ನ ಮಗಳು ಯಾವುದೇ ತಪ್ಪು ಮಾಡಿಲ್ಲ. ಆಕೆಯ ಮೇಲೆ ಪೇದೆ ಮಾಡಿದ ಆರೋಪ ಸುಳ್ಳು ಹಾಗೂ ಆಕೆ ಘಟನಾ ಸ್ಥಳದಲ್ಲಿ ಏನು ನಡೆಯುತ್ತಿದೆ ಎಂಬುದನ್ನೇ ತಿಳಿಯದೇ ತುಂಬಾ ವಿಚಲಿತಳಾಗಿದ್ದಳು. ನೋಟಿಸ್ ನೀಡಿದ ಬಳಿಕ ಯಾವುದೇ ವಿಚಾರಣೆಗೂ ಹಾಜರಾಗಿಲ್ಲ ಎಂದು ತಿಳಿಸಿದರು. ಈ ಸಂಬಂಧ ಪೊಲೀಸ್ ಆಯುಕ್ತರ ಬಳಿ ದೂರು ಸಲ್ಲಿಸುವುದಾಗಿ ಅವರು ಹೇಳಿದರು.